ಟಾಪ್ 5 ನ್ಯೂಸ್ ಕರ್ನಾಟಕ
– ಬೆಂಗಳೂರು : ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ
– ಧಾರವಾಡ: ಆಸ್ತಿ ವಿವಾದದಿಂದ ಮಾರಕಾಸ್ತ್ರದಿಂದ ತಂದೆ- ತಾಯಿಯನ್ನೇ ಕೊಂದ ಮಗ
– ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ
– ಕೋಲಾರ : ಮಹಿಳೆ ಕೊಲೆ ಮಾಡಿ ಚೀಲದಲ್ಲಿ ಶವ ತುಂಬಿ ದುಷ್ಕರ್ಮಿಗಳು ಪರಾರಿ
– ಆನೇಕಲ್ : ಕಾಡಾನೆ ದಾಳಿಗೆ ವೃದ್ಧೆ ಬಲಿ
NAMMUR EXPRESS NEWS
ಬೆಂಗಳೂರು : ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ ಮಾಡಿರುವಂತಹ ಘಟನೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ನಲ್ಲಿ ಮಧ್ಯರಾತ್ರಿ ನಡೆದಿದೆ. ಅಕ್ರಂ ಬೇಗ್(28) ಹತ್ಯೆಗೈದ ಸೋದರ ಅಕ್ಬರ್ ಬೇಗ್. ಘಟನೆ ಕುರಿತು ಅಕ್ರಂ ಬೇಗ್ ತಾಯಿ ನೀಡಿದ್ದ ದೂರು ಸಂಬಂಧ ಆರೋಪಿ ಅಕ್ಬರ್ ಬೇಗ್ನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಾಯಿ ಅಮ್ರಿಜ್ ಬೇಗ್ಗೆ ಮೂವರು ಮಕ್ಕಳು. ಹಿರಿಯ ಪುತ್ರ ಅಕ್ಬರ್ ಮತ್ತು ಮಗಳು ಬೇರೆ ಕಡೆ ವಾಸವಿದ್ದರು. ತಾಯಿಯ ಜೊತೆ ಕಿರಿಯ ಪುತ್ರ ಅಕ್ರಂ ಬೇಗ್ ಒಬ್ಬನೇ ವಾಸವಿದ್ದ. ಅಕ್ರಂ ಪ್ರತಿದಿನ ಕುಡಿದು ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ. ಮೊನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಜತೆ ಜಗಳ ಮಾಡಿದ್ದಾನೆ. ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದ. ಸಹೋದರನ ಜಗಳದಿಂದ ಬೇಸತ್ತು ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಕ್ರಂ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಕ್ರಂ ಮೃತಪಟ್ಟಿದ್ದಾರೆ.
– ಧಾರವಾಡ: ಆಸ್ತಿ ವಿವಾದದಿಂದ ಮಾರಕಾಸ್ತ್ರದಿಂದ ತಂದೆ- ತಾಯಿಯನ್ನೇ ಕೊಂದ ಮಗ
ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ತಂದೆ ಮತ್ತು ಮಲತಾಯಿಯನ್ನು ಹತ್ಯೆಗೈದ ಘಟನೆ ಧಾರವಾಡ ಜಿಲ್ಲೆಯ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಅಶೋಕಪ್ಪ ಕೊಬ್ಬಣ್ಣನವರ್ ಮತ್ತು ಅವರ ಪತ್ನಿ ಶಾರದಮ್ಮ ಎಂದು ಗುರುತಿಸಲಾಗಿದೆ. ಆರೋಪಿ ಗಂಗಾಧರಪ್ಪ ತಮ್ಮ ಒಡೆತನದ 2 ಎಕರೆ ಆಸ್ತಿಗಾಗಿ ತಂದೆಯೊಂದಿಗೆ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮದ್ಯ ವ್ಯಸನಿಯಾಗಿದ್ದ ಆತ ದಿನನಿತ್ಯ ತನ್ನ ಕುಟುಂಬದೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಕುಡಿದು ಮನೆಗೆ ಬಂದಿದ್ದು, ಜಗಳ ಆರಂಭಿಸಿದ್ದು, ಆತನ ಬೇಡಿಕೆಗೆ ಪೋಷಕರು ಒಪ್ಪದಿದ್ದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
– ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ
ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಹಂಪನಕಟ್ಟೆ ಲೈಟ್ಹೌಸ್ ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಯುವತಿಗೆ ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್ಲಿನ್ ಗ್ಲಾನೆಲ್ ಪಿಂಟೋ ಎಂಬವರ ಪರಿಚಯವಾಗಿ ಸ್ನೇಹಿತರಾಗಿದ್ದು, ಅವರಿಗೆ ಅಂಡಮಾನ್ ವರ್ಗಾವಣೆ ಆದ ಹಿನ್ನೆಲೆಯಲ್ಲಿ 2021ರ ಫೆ. 5ರಂದು ಸ್ನೇಹಿತರು ಸೇರಿ ಪುತ್ತೂರಿನಲ್ಲಿ ಪಾರ್ಟಿ ಆಯೋಜಿಸಿದ್ದರು. ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಆಕಾಶ್ ಕೆ.ಎಸ್. ಎಂಬವರಿಗೆ ಸೇರಿದ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಯುವತಿಯೂ ಭಾಗವಹಿಸಿದ್ದು, ಸ್ನೇಹಿತ ನಿಕೇತ್ ಶೆಟ್ಟಿ ಎಂಬವರ ಜತೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು. ಪಾರ್ಟಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ ಯುವತಿಗೆ ತನ್ನನ್ನು ತಾನು ಜಾಯ್ಲಿನ್ ನ ಸ್ನೇಹಿತ ಎಂದು ಪರಿಚಯಿಸಿಕೊಂಡು, ಬಳಿಕ ಆಕೆಗೆ ವೈನ್ಗೆ ಮತ್ತು ಬರಿಸುವ ಅಮಲು ಪದಾರ್ಥವನ್ನು ಮಿಶ್ರ ಮಾಡಿ ಒತ್ತಾಯದಿಂದ ನೀಡಿದ್ದ. ಜಾಯಿಲಿನ್ ಮತ್ತು ಅವರ ಸ್ನೇಹಿತ ರೆಬೆಕಾ ಅವರು ಯುವತಿಗೆ ರಾತ್ರಿ ಉಳಿದುಕೊಳ್ಳಲು ಕೊಠಡಿ ತೋರಿಸಿದ್ದು, ಮೂವರೂ ಅಲ್ಲಿ ಸ್ವಲ್ಪ ಹೊತ್ತು ಮಾತನಾಡಿಕೊಂಡಿದ್ದರು. ಬಳಿಕ ಯುವತಿ ನಿದ್ದೆಗೆ ಜಾರಿದ್ದು ಮುಂಜಾನೆ 2 ಗಂಟೆ ವೇಳೆಗೆ ಎಚ್ಚರವಾಗಿ ನೋಡಿದಾಗ ಜಾಯಿಲಿನ್ ಮತ್ತು ರೆಬೆಕಾ ಕೊಠಡಿಯಲ್ಲಿ ಇರಲಿಲ್ಲ. ಮತ್ತೆ ನಿದ್ದೆಗೆ ಜಾರಿದ ಯುವತಿಗೆ 5 ಗಂಟೆ ವೇಳೆ ಎಚ್ಚರವಾಗಿದ್ದು, ಆಗ ಆಕೆಯ ಮೇಲೆ ಬ್ರಯಾನ್ ಅಮನ್ನಾ ಅತ್ಯಾಚಾರ ನಡೆಸುತ್ತಿದ್ದ. ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಆಗಿನ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಅವರು ತನಿಖೆ ಪೂರ್ಣಗೊಳಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 376ರಡಿ 10 ವರ್ಷ ಕಠಿನ ಕಾರಾಗೃಹ ವಾಸ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 328ರಡಿ 5 ವರ್ಷ ಕಾರಾಗೃಹವಾಸದ ಶಿಕ್ಷಕೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
– ಕೋಲಾರ : ಮಹಿಳೆ ಕೊಲೆ ಮಾಡಿ ಚೀಲದಲ್ಲಿ ಶವ ತುಂಬಿ ದುಷ್ಕರ್ಮಿಗಳು ಪರಾರಿ
ಕೋಲಾರ : ತಾಲೂಕಿನ ಕೋರಗೊಂಡನಹಳ್ಳಿ ಬಳಿ ಮಹಿಳೆ ಕೊಲೆಗೈದು ಶವ ಚೀಲದಲ್ಲಿ ತುಂಬಿ ದುಷ್ಕರ್ಮಿಗಳು ಪರಾರಿ ಆಗಿರುವಂತಹ ಘಟನೆ ನಡೆದಿದೆ. ಅಪರಿಚಿತ ಮಹಿಳೆ ಮುಖದ ಭಾಗವನ್ನು ಬೀದಿನಾಯಿಗಳು ಕಚ್ಚಿ ತಿಂದಿವೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ಆನೇಕಲ್ : ಕಾಡಾನೆ ದಾಳಿಗೆ ವೃದ್ಧೆ ಬಲಿ
ಆನೇಕಲ್ : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸಮೀಪದ ರಾಜ್ಯದ ಗಡಿ ಕೆಲಮಂಗಲಂ ಬಳಿ ಕಾಡಾನೆ ದಾಳಿಗೆ ವೃದ್ಧೆ ಬಲಿ ಯಾಗಿರುವಂತಹ ಘಟನೆ ನಡೆದಿದೆ. ನಾಗಮ್ಮ(60) ಮೃತ ವೃದ್ಧೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತ ನಾಗಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.