ಟಾಪ್ 5 ನ್ಯೂಸ್ ಕರ್ನಾಟಕ
– ಬಳ್ಳಾರಿ: ಬ್ಯಾಂಕ್ನಿಂದ 2.3 ಕೋಟಿ ರೂ. ಎಗರಿಸಿದ ಸೈಬರ್ ವಂಚಕರು
– ಚಾಮರಾಜನಗರ: ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ
– ಮಂಡ್ಯ: ಆಸ್ತಿಗಾಗಿ ತಂದೆ- ತಾಯಿ ಕೈ ಕಾಲು ಮುರಿದ ಮಗ..!
– ಮೈಸೂರು: ವರದಕ್ಷಿಣೆಗಾಗಿ ಹೆಂಡ್ತಿಗೆ ಬೆಂಕಿ ಹಚ್ಚಿದ ಗಂಡ!
– ರಾಮನಗರ : 7 ಮೈಕ್ರೋ ಫೈನಾನ್ಸ್ ಕಂಪನಿ, ಸಿಬ್ಬಂದಿ ವಿರುದ್ಧ ಎಫ್ಐಆರ್
NAMMUR EXPRESS NEWS
ಬಳ್ಳಾರಿ : ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ನ ಕೆಲವು ಶಾಖೆಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎಂದು ದೂರುಗಳನ್ನು ಸಲ್ಲಿಸಿದ ನಂತರ ದೊಡ್ಡ ಮೊತ್ತದ ಹಣ ದರೋಡೆಯಾಗಿರುವುದು ಪತ್ತೆಯಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಪರಾಧಿಯು ಬ್ಯಾಂಕ್ನ ಆರ್ಟಿಜಿಎಸ್ /ನೆಫ್ಟ್ ವಹಿವಾಟು ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಬಿಡಿಸಿಸಿ ಬ್ಯಾಂಕ್ನಿಂದ ಐಡಿಬಿಐ ಬ್ಯಾಂಕ್ಗೆ ವಾಡಿಕೆಯಂತೆ ಹಣ ವರ್ಗಾವಣೆಯ ಸಮಯದಲ್ಲಿ, 2025 ರ ಜನವರಿ 10 ರಂದು ಹ್ಯಾಕರ್ಗಳು ಎಕ್ಸ್ಎಂಎಲ್ ಫೈಲ್ಗಳಲ್ಲಿನ ಖಾತೆ ಸಂಖ್ಯೆಗಳು ಮತ್ತು ಐಎಫ್ಎಸ್ಸಿ ಕೋಡ್ಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
– ಚಾಮರಾಜನಗರ: ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ
ಚಾಮರಾಜನಗರ : ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ತಾಲೂಕಿನ ಕೌದಳ್ಳಿಯ ಖುಷ್ಟೂ (32) ಮೃತ ದುರ್ದೈವಿ. ಮೂಲತಃ ಬೆಂಗಳೂರು ಮೂಲದ ವರಾದ ಖುಷ್ಟೂ ಕೆಲ ವರ್ಷಗಳ ಹಿಂದೆ ಹನೂರು ತಾಲೂಕಿನ ಕೌದಳ್ಳಿಯ ಸಣ್ಣಸೀಗಯ್ಯ ಎಂಬುವವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಾಪುರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
– ಮಂಡ್ಯ: ಆಸ್ತಿಗಾಗಿ ತಂದೆ- ತಾಯಿ ಕೈ ಕಾಲು ಮುರಿದ ಮಗ..!
ಮಂಡ್ಯ : ಆಸ್ತಿಗಾಗಿ ತಂದೆ, ತಾಯಿ ಎಂಬುದನ್ನೂ ನೋಡದೆ ಕೈಕಾಲು ಮುರಿದ ದ್ವಿತೀಯ ಪುತ್ರ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದು, ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಪೋಷಕ ಜವರೇಗೌಡ ಆರೋಪಿಸಿದರು. ಮಗ ನೀಲೇಗೌಡ ಹಾಗೂ ಆತನ ಪತ್ನಿ ಕೀರ್ತಿ ಎಂಬುವವರು ತಮಗೆ ಆಸ್ತಿ ಪಾಲಾಗಿ ಬಂದ ನಂತರವೂ ಜೀವನ ನಿರ್ವಹಣೆಗೆ ಉಳಿಸಿಕೊಂಡ ಆಸ್ತಿಯೂ ತಮಗೇ ಬೇಕೆಂದು ಕಿರುಕುಳ ನೀಡುತ್ತಿದ್ದರು. ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂದರು. ಹಲ್ಲೆಯಿಂದ ನನಗೆ ಕೈ ಮುರಿದಿದ್ದು, ತೀವ್ರ ತರನಾದ ಗಾಯಗಳಾಗಿವೆ, ಪತ್ನಿ ಭಾಗ್ಯಮ್ಮಗೆ ಕಾಲು ಮುರಿದಿದ್ದು, ಎದ್ದು ಓಡಾಡದ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ದೂರನ್ನು ಬದಲಿಸಿ ಕೊಡುವಂತೆ ಒತ್ತಡ ಹೇರಿ ಅನ್ಯಾಯ ಎಸಗಲಾಗುತ್ತಿದೆ ಎಂದು ಹೇಳಿದರು. ಹಲ್ಲೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೆ, ಪೊಲೀಸರು ದೂರಿನಲ್ಲಿ ಮಾರಣಾಂತಿಕ ಹಲ್ಲೆ ಎಂಬುದನ್ನು ಬದಲಿಸಿ, ನೀಲೇಗೌಡನ ಮಾವ ಮತ್ತಿತರರ ಹೆಸರನ್ನು ತೆಗೆದು ದೂರು ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು. ಪ್ರಕರಣ ಸಂಬಂಧ ನ್ಯಾಯ ಒದಗಿಸಬೇಕೆಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಲ್ಲಿ ಮನವಿ ಮಾಡಿದ್ದು, ನ್ಯಾಯ ಒದಗಿಸಲಾಗದಿದ್ದರೆ ದಯಾಮರಣ ಜೈಲಾ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದರು.
– ಮೈಸೂರು: ವರದಕ್ಷಿಣೆಗಾಗಿ ಹೆಂಡ್ತಿಗೆ ಬೆಂಕಿ ಹಚ್ಚಿದ ಗಂಡ!
ಮೈಸೂರು : ವರದಕ್ಷಿಣೆ ತರುವಂತೆ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ ಪತಿಯು ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಪಟ್ಟಣದ ಹನುಮಂತನಗರದಲ್ಲಿ ಜರುಗಿದೆ. ಪಟ್ಟಣದ ಕೆ ಎಸ್.ಆರ್.ಟಿ ಸಿ ಘಟಕದಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ ನಾಯಕ ಎಂಬಾತನೆ ತನ್ನ ಪತ್ನಿ ಮಧುರ (28) ಎಂಬಾಕೆಗೆ ಬೆಂಕಿ ಹಚ್ಚಿದವನು. ಈತ 8 ವರ್ಷಗಳ ಹಿಂದೆ ಮಧುರ ಅವರನ್ನು ಮದುವೆಯಾಗಿದ್ದು, ಇವರು ಮೂಲತಃ ವಿಜಯಪುರ ಜಿಲ್ಲೆಯವರಾಗಿರುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಲ್ಲೇಶನಾಯಕ ತನ್ನ ಪತ್ನಿಗೆ ಮೇಲಿಂದ ಮೇಲೆ ವರದಕ್ಷಿಣೆ ಹಣ ತರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು. ಘಟನೆಯಲ್ಲಿ ಗಾಯಗೊಂಡ ತನ್ನ ಪತ್ನಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾನೆ. ಈತನಿಗೂ ಸಹ ಕೈ ಮತ್ತು ಹೃದಯ ಭಾಗದಲ್ಲಿ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಮಲ್ಲೇಶ್ ನಾಯಕನ ವಿರುದ್ಧ ಕೇಸು ದಾಖಲಿಸಿಕೊಂಡಿರುತ್ತಾರೆ. ಅದೇ ರೀತಿ ಮಲ್ಲೇಶ್ ನಾಯಕನ ಮೇಲೆ ಹಲ್ಲೆ ನಡೆಸಿದ ನಾಗರಾಜ ನಾಯಕನ ವಿರುದ್ಧವು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
– ರಾಮನಗರ : 7 ಮೈಕ್ರೋ ಫೈನಾನ್ಸ್ ಕಂಪನಿ, ಸಿಬ್ಬಂದಿ ವಿರುದ್ಧ ಎಫ್ಐಆರ್
ರಾಮನಗರ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 7 ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆಶೀರ್ವಾದ್ ಮೈಕ್ರೋ ಫೈನಾನ್ಸ್, ಸತ್ಯಾ ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್, ಯೂನಿಟಿ ಸ್ಮಾಲ್ ಫೈನಾನ್ಸ್, ಸೂರ್ಯೋದಯ ಫೈನಾನ್ಸ್, ಐಐಎಫ್ ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್, ಎಲ್ ಅಂಡ್ ಟಿ ಫೈನಾನ್ಷಿಯಲ್ ಸರ್ವಿಸ್ ಹಾಗೂ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋಧಮ್ಮ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ಪುತ್ರ ಕುಮಾರ್ ನೀಡಿದ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು 7 ಮೈಕ್ರೋ ಫೈನಾನ್ಸ್ ಕಂಪನಿಗಳ ಮ್ಯಾನೇಜರ್ ಮತ್ತು ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.