ಟಾಪ್ 7 ನ್ಯೂಸ್ ಕರ್ನಾಟಕ
– ರೇಣುಕಾ ಸ್ವಾಮಿ ಕೊಲೆ ಕೇಸ್ ನಟ ದರ್ಶನ್ & ಗ್ಯಾಂಗ್ ಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ!
– ಒಂದು ಇನ್ಸ್ಟಾಗ್ರಾಂ ಲೈಕ್ ಯುವಕನ ಪ್ರಾಣ ಹೋದ ಘಟನೆ!
– ರಾಯಚೂರು : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ
– ಬೆಂಗಳೂರು : ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಶಂಕೆ
– ರಾಯಚೂರು : ಲಾರಿ ಮತ್ತು ಬೈಕ್ ಭೀಕರ ರಸ್ತೆ ಅಪಘಾತ
– ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಚ್ಚಿ ಕೊಂದ ಮಗ
– ರಾಯಚೂರು : ಜೆಡಿಎಸ್ ಶಾಸಕಿ ಮನೆಗೆ ನುಗ್ಗಿದ್ದ ಅಪರಿಚಿತರ ಗ್ಯಾಂಗ್
NAMMUR EXPRESS NEWS
ನವದೆಹಲಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳು ರೆಗುಲರ್ ಬೇಲ್ ಪಡೆದುಕೊಂಡು ಬಿಡುಗಡೆಯಾಗಿದ್ದರು. ಆದರೆ ರಾಜ್ಯ ಸರ್ಕಾರ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ 7 ಆರೋಪಿಗಳ ವಿರುದ್ಧ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು ಸುಪ್ರೀಂಕೋರ್ಟ್ ನಲ್ಲಿ ಇದೀಗ ಈ ಒಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆ ಆರಂಭವಾದಾಗ ಹೈ ಕೋರ್ಟ್ ಜಾಮೀನು ನೀಡಿದೆ. ಹಾಗಾಗಿ ಜಾಮೀನು ರದ್ದು ಮಾಡಬೇಕು ಎಂದು ಸರ್ಕಾರದ ಪರ ವಕೀಲರಿಂದ ಕೋರ್ಟ್ ಗೆ ಮನವಿ ಮಾಡಲಾಯಿತು. ಈ ವೇಳೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ನಟ ದರ್ಶನ್ ಪವಿತ್ರಾಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ ಎಂದು ಇದೀಗ ತಿಳಿದು ಬಂದಿದೆ. ವಿಚಾರಣೆ ವೇಳೆ ಉಳಿದ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೆ ಇದು ಅನ್ವಯಿಸುವುದಿಲ್ಲ. ಹೈಕೋರ್ಟ್ ಫೈಂಡಿಂಗ್ಸ್ ಅನ್ವಯ ಆಗುವುದಿಲ್ಲ ಎಂದು ಸುಪ್ರೀಕೋರ್ಟ್ಭಿ ಪ್ರಾಯಪಟ್ಟಿದೆ. ನಟ ದರ್ಶನ್ ಪವಿತ್ರಾಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿದೆ ಎಂದು ಇದೀಗ ತಿಳಿದು ಬಂದಿದೆ. ಪೊಲೀಸರು, ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ದರ್ಶನ್ ಹಾಗೂ ಪ್ರಕರಣದ ಇತರೆ ಆರೋಪಿಗಳಾದ ಪವಿತ್ರಾ ಗೌಡ, ಜಗದೀಶ್, ಅನುಕುಮಾರ್, ನಾಗರಾಜ, ಎಂ ಲಕ್ಷ್ಮಣ್, ಪ್ರದೋಶ್ ನೀಡಲಾಗಿರುವ ಜಾಮೀನುನನ್ನು ಏಕೆ ರದ್ದು ಮಾಡಬೇಕು ಎಂದು 7 ಕಾರಣಗಳನ್ನು ನೀಡಿದೆ. ಇದೀಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಒಂದು ಇನ್ಸ್ಟಾಗ್ರಾಂ ಲೈಕ್ ಯುವಕನ ಪ್ರಾಣ ತೆತ್ತ ಘಟನೆ!
– ವಿವಾಹ ನಿಶ್ಚಯ ಮಾಡಿಕೊಂಡಿದ್ದ ಹುಡುಗಿಯೊಂದಿಗೆ ಮನಸ್ತಾಪ!
ಪೂಂಜಾಲಕಟ್ಟೆ : ಇನ್ಸ್ಟಾಗ್ರಾಂ ನಲ್ಲಿ ಬೇರೊಬ್ಬ ಯುವತಿಗೆ ಲೈಕ್ ಒತ್ತಿದ್ದಕ್ಕೆ ಆತನೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಹುಡುಗಿ ಆತನ ಮನೆಗೆ ಬಂದು ಜಗಳ ಮಾಡಿದ್ದು, ಇದರಿಂದ ನೊಂದ ಯುವಕ ಆಕೆಯ ಉಪಸ್ಥಿತಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ (25) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಮಂಗಳೂರಿನ ಯುವತಿ ಚೈತನ್ಯ ಎಂಬ ಯುವತಿಯ ಜೊತೆ 8 ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥವಾಗಿತ್ತು. ಜ.21 ರಂದು ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಯುವಕನ ತಾಯಿ ಪುಷ್ಪಾ ಪೂಂಜಾಲಕಟ್ಟೆ ಠಾಣೆಗೆ ದೂರನ್ನು ನೀಡಿದ್ದಾರೆ. ಜ.21 ರಂದು ಪುಷ್ಪಾ ಅವರು ತನ್ನ ತವರು ಮನೆಗೆ ಹೋಗಿದ್ದರು. ಚೇತನ್ ಒಬ್ಬನೇ ಮನೆಯಲ್ಲಿದ್ದ. ಬೆಳಿಗ್ಗೆ 11 ಗಂಟೆಯಂದು ಚೈತನ್ಯಾ ಪುಷ್ಪಾರಿಗೆ ಕರೆ ಮಾಡಿ ಮನೆಗೆ ಬಂದಿದ್ದು, ಚೇತನ್ ಮನೆಯಲ್ಲಿ ಮಲಗಿದ್ದವನು ಎದ್ದೇಳುತ್ತಿಲ್ಲ, ಕೂಡಲೇ ಮನೆಗೆ ಬನ್ನಿ ಎಂದು ಹೇಳಿದ್ದಾರೆ. ಹೀಗಾಗಿ 11.30ರ ಸುಮಾರಿಗೆ ಪುಷ್ಪಾ ಅವರು ತವರು ಮನೆಯಿಂದ ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಚೇತನ್ ಬಾತ್ರೂಂ ಮತ್ತು ಮನೆಯ ಪ್ಯಾಸೇಜ್ ಮಧ್ಯೆ ಮಲಗಿದ್ದ ಸ್ಥಿತಿಯಲ್ಲಿದ್ದರು. ಪುಷ್ಪಾ ಅವರು ಮನೆಯ ಛಾವಣಿ ಕಡೆ ನೋಡಿದಾಗ ನೇಣು ಹಾಕಿದ ಸ್ಥಿತಿಯಲ್ಲಿ ಲುಂಗಿಯೊಂದು ಕಂಡು ಬಂದಿದೆ. ಈ ಬಗ್ಗೆ ಪುಷ್ಪಾ ಅವರು ಚೈತನ್ಯಾರಲ್ಲಿ ಪ್ರಶ್ನೆ ಮಾಡಿದಾಗ, ಇನ್ಸ್ಟಾಗ್ರಾಂನಲ್ಲಿ ಚೇತನ್ ಹುಡುಗಿಯೊಬ್ಬಳಿಗೆ ಲೈಕ್ ಮಾಡಿದ್ದನ್ನು ಪ್ರಶ್ನೆ ಮಾಡಿದ್ದು, ಇಬ್ಬರ ಮಧ್ಯೆ ಗಲಾಟೆಯಾಗಿದೆ. ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
– ರಾಯಚೂರು : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನದಿಂದ ಭಕ್ತರಿಗೆ ಗಾಯ
ರಾಯಚೂರು : ಮಂತ್ರಾಲಯಕ್ಕೆ ಹೊರಟಿದ್ದ ಟಿಟಿ ವಾಹನ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಇರುವಂತಹ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಮೀಪದಲ್ಲೇ ನಡೆದಿದೆ. ಅಪಘಾತದಲ್ಲಿ ಮೈಸೂರಿನ ಹುಣಸೂರು ಮೂಲದ ಭಕ್ತರಿಗೆ ಗಾಯಗಳಾಗಿವೆ. 10ಕ್ಕೂ ಹೆಚ್ಚು ಜನರಿದ್ದ ಕುಟುಂಬ ಹುಣಸೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದರು. ಬೆಳಿಗ್ಗೆ ಮಂತ್ರಾಲಯದ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ಟಿಟಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಟಿ ಚಾಲಕ, ಪ್ರಯಾಣಿಕರಾದ ಮಂಜುನಾಥ್, ಸುಜಾತಾ, ಗಿರಿಧರ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
– ಬೆಂಗಳೂರು : ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಶಂಕೆ
ಬೆಂಗಳೂರು : ಮನೆಗೆಲಸ ಮಾಡುತ್ತಿದ್ದ ಮಹಿಳೆ ಶವವಾಗಿ ಪತ್ತೆ ಆಗಿರುವಂತಹ ಘಟನೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ ಆಗಿದೆ. ನಜ್ಮಾ ಮೃತ ಬಾಂಗ್ಲಾದೇಶ ಮೂಲದ ಮಹಿಳೆ. ನಜ್ಮಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಕಲ್ಕೆರೆಯ ಡಿಎಸ್ಆರ್ನ ಅಪಾರ್ಟ್ಮೆಂಟ್ನಲ್ಲಿ ಮನೆಗೆಲಸ ಮಾಡುತ್ತಿದ್ದ ನಜ್ಮಾ, ಸುಮನ್ ಎಂಬುವವರನ್ನು ಮದುವೆಯಾಗಿದ್ದರು. 3 ಮಕ್ಕಳ ತಾಯಿಯನ್ನು ದುಷ್ಕರ್ಮಿಗಳು ಕೊಂದು ಬಿಸಾಡಿದ್ದಾರೆ. ಕಮಿಷನರ್ ರಮೇಶ್ ಬಾನೋತ್ ಹೇಳಿದ್ದಿಷ್ಟು ಈ ಘಟನೆ ಬಗ್ಗೆ ಪೂರ್ವ ವಲಯದ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಬೆಳಿಗ್ಗೆ 8.45ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆ ಬರುತ್ತೆ. ಇನ್ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು, ಬಾಡಿ ಶಿಫ್ಟ್ ಮಾಡಿದ್ದಾರೆ ಎಂದರು. ಡಿಸಿಪಿ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನಾನು ಭೇಟಿ ನೀಡಿದ್ದೆ. ಮೇಲ್ನೋಟಕ್ಕೆ ಚುಚ್ಚಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದು ಕಂಡು ಬಂದಿದೆ. ಲೈಗಿಂಕ ದೌರ್ಜನ್ಯ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತೆ. ಕೊಲೆ ಹಾಗೂ ಲೈಗಿಂಕ ದೌರ್ಜನ್ಯ ಅಂತ ಕೇಸ್ ಹಾಕಲಾಗಿದೆ. ಯಾರು ಕೊಲೆ ಮಾಡಿದ್ದು ಅಂತ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಕೆಲಸ ಮುಗಿಸಿ ಹೊರಟವರು ಮರಳಿ ಮನಗೆ ಹೋಗಿಲ್ಲ. ರಾತ್ರಿ ಅವರ ಪತಿ, ನಾಪತ್ತೆ ಅಂತ ದೂರು ನೀಡಿದ್ದರು. ಬೆಳಿಗ್ಗೆ ಶವ ಸಿಕ್ಕಿದೆ. ಅತ್ಯಾಚಾರ ಆಗಿದೆಯಾ ಅಂತ ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ. ಇನ್ನು ಪತಿ ಸುಮನ್ ಪಾಸ್ ಪೋರ್ಟ್ ಮೂಲಕ ಬಂದಿದ್ದಾರೆ. ಪತ್ನಿ ಬಳಿ ಯಾವುದೇ ಪಾಸ್ ಪೋರ್ಟ್ ಇಲ್ಲ. ಅಕ್ರಮವಾಗಿ ಬಂದಿರಬಹುದು. ಇನ್ನೂ ಪಾಸ್ ಪೋರ್ಟ್ ಸಿಕ್ಕಿಲ್ಲ. ನಜ್ಮಾ ಮೂಲತಃ ಬಾಂಗ್ಲಾದೇಶದವರು 6 ವರ್ಷದಿಂದ ಇಲ್ಲಿ ಕೆಲಸ ಮಾಡಕೊಂಡಿದ್ದರು ಎಂದಿದ್ದಾರೆ.
– ರಾಯಚೂರು : ಲಾರಿ ಮತ್ತು ಬೈಕ್ ಭೀಕರ ರಸ್ತೆ ಅಪಘಾತ
ರಾಯಚೂರು : ಲಾರಿ ಅಡಿ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಮೃತದೇಹ ಛಿದ್ರ ಛಿದ್ರವಾಗಿದೆ. ಲಕ್ಷ್ಮಣ್ (35) ಮೃತ ಬೈಕ್ ಸವಾರ. ಮೃತ ಲಕ್ಷ್ಮಣ್ ಮಾನ್ವಿ ತಾಲ್ಲೂಕಿನ ಬೈಲ ಮರ್ಚಡ್ ಗ್ರಾಮದ ನಿವಾಸಿ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಚ್ಚಿ ಕೊಂದ ಮಗ
ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ತಾಯಿಯನ್ನೇ ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ಹೋದ ನಂತರ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಲಿಯಾದ ರಾಯ್ಬರಿ ಸಿಂಗ್ ಮೇಲೆ ಆಕೆಯ ಮಗ ರೋಹಿದಾಸ್ ಸಿಂಗ್ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡು ಅತಿಯಾದ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರೋಹಿದಾಸ್ ಮತ್ತು ಅವರ ಸಹೋದರ ಲಕ್ಷ್ಮೀಕಾಂತ್ ಸಿಂಗ್ ನಡುವೆ ವಿವಾದ ನಡೆಯುತ್ತಿತ್ತು. 10 ಕೆಜಿಯಷ್ಟು ಅಕ್ಕಿಗಾಗಿ ರೋಹಿದಾಸ್ ತನ್ನ ತಾಯಿಯೊಂದಿಗೆ ಘರ್ಷಣೆ ಮಾಡಿದಾಗ ವಾದವು ಹಿಂಸಾಚಾರಕ್ಕೆ ತಿರುಗಿತು ಎಂದು ವರದಿಯಾಗಿದೆ. ದಾಳಿಯ ನಂತರ, ರೋಹಿದಾಸ್ ಅದೇ ಆಯುಧದಿಂದ ತನ್ನ ಕತ್ತು ಸೀಳಿಕೊಂಡು ಸಾಯಲು ಪ್ರಯತ್ನಿಸಿದ್ದ. ಅವರನ್ನು ಪಿಆರ್ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಘಟನೆ ವೇಳೆ ದಿನಗೂಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ್ ಮನೆಗೆ ಹಿಂತಿರುಗಿ ಘಟನಾ ಸ್ಥಳವನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಯು ತನ್ನ ತಾಯಿಗೆ 10 ಕೆಜಿಯಷ್ಟು ಅಕ್ಕಿ ಕೇಳಿದ್ದ, ಆಕೆ ನಿರಾಕರಿಸಿದಾಗ, ಅವನು ಕೊಡಲಿಯಿಂದ ಹಲ್ಲೆ ಮಾಡಿದ್ದ ಮತ್ತು ನಂತರ ಹರಿತವಾದ ಆಯುಧದಿಂದ ತನ್ನನ್ನು ತಾನೇ ಹಾನಿ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
– ರಾಯಚೂರು : ಜೆಡಿಎಸ್ ಶಾಸಕಿ ಮನೆಗೆ ನುಗ್ಗಿದ್ದ ಅಪರಿಚಿತರ ಗ್ಯಾಂಗ್
ರಾಯಚೂರು : ಜೆಡಿಎಸ್ ಶಾಸಕಿ ಮನೆಗೆ ಅಪರಿಚಿತರು ಪ್ರವೇಶಿಸಿ ಆತಂಕ ಹುಟ್ಟಿಸಿದ್ದ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ಅವರ ನಿವಾಸದಲ್ಲಿ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಶಾಸಕಿ ಮನೆಯ ಕೂಗಳತೆ ದೂರದಲ್ಲಿ ಬೈಕ್ ನಿಲ್ಲಿಸಿದ್ದ ಅಪರಿಚಿತರ ತಂಡ, ಹಿಂಬಾಗಿಲಿನಿಂದ ಮನೆಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ಅಕ್ಕಪಕ್ಕದವರು ಕೂಗಿದಾಗ ಅಪರಿಚಿತರು ಪರಾರಿಯಾಗಿದ್ದಾರೆ. ಘಟನೆ ಬಳಿಕ ದೇವದುರ್ಗ ಪೊಲೀಸರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಮಾಹಿತಿ ನೀಡಿದ್ದಾರೆ. ಅಪರಿಚಿತರು ಯಾಕೆ ನಮ್ಮ ಮನೆಗೆ ನುಗ್ಗಿದ್ದರು ಎಂದು ತನಿಖೆ ನಡೆಸಿ, ಅವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಶಾಸಕಿ ಕರೆಮ್ಮಾ ನಾಯಕ್ ಹೇಳಿಕೆ ನೀಡಿದ್ದು, ಇದೇ ಜನವರಿ 22ರ ತಡ ರಾತ್ರಿ ಘಟನೆ ನಡೆದಿದೆ. ನಮ್ಮ ಮನೆಯಲ್ಲಿರುವವರು ನೋಡಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ವಿಚಾರ ನನಗೆ ಬೆಳಿಗ್ಗೆ ಗೊತ್ತಾಗಿದೆ. ಮೂರು ಜನ ಅಪರಿಚಿತರು ನಾನು ಮಲಗಿದ್ದ ಕೊಣೆ ಹೊರಗೆ ಬಂದಿದ್ದಾರೆ. ಈ ಹಿಂದೆ ಸಾಕಷ್ಟು ಘಟನೆಗಳು ನನ್ನ ವಿರುದ್ಧ ನಡೆದಿವೆ. ಆದರೆ ಮೊನ್ನೆ ರಾತ್ರಿ ಆಗಿದ್ದು ಗಂಭೀರವಾದ ಘಟನೆ. ನನಗೆ ಭಯ ಇದೆ. ನಾನೊಬ್ಬ ದಲಿತ ಸಮುದಾಯಕ್ಕೆ ಸೇರಿರುವ ಮಹಿಳೆ. ಪೊಲೀಸ್ ಇಲಾಖೆ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ ಗೊತ್ತಿಲ್ಲ. ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.