ಟಾಪ್ ನ್ಯೂಸ್ ಕರ್ನಾಟಕ
– ಕರ್ನಾಟಕಕ್ಕೂ ಕಾಲಿಟ್ಟ ಎಚ್ಎಂಪಿವಿ ವೈರಸ್
– ಬೆಂಗಳೂರು : 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆ
– ಬೆಂಗಳೂರು : ತಾಯಿಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಗ..!
– ನಾಗಮಂಗಲ: ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಯಲ್ಲಿ ಜಗಳ
– ಕೊಪ್ಪಳ : ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!
NAMMUR EXPRESS NEWS
ಬೆಂಗಳೂರು : 8 ತಿಂಗಳ ಮಗುವಿಗೆ ಎಚ್ಎಂಪಿವಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತೆಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.
– ಬೆಂಗಳೂರು : ತಾಯಿಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಗ..!
ಬೆಂಗಳೂರು : ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ನಡೆದಿದೆ. ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು. ಆದ್ರೆ, ಮಗ ಕುಡಿದುಬಂದು ತಾಯಿ ಜೊತೆ ಜಗಳ ಮಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೊಬೈಲ್ ಚಾರ್ಜರ್ ವೈರ್ನಿಂದ ತಾಯಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಕುಡಿದು ಬಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊಬೈಲ್ ಚಾರ್ಜಿಂಗ್ ವೈರ್ನಿಂದ ಕುತ್ತಿಗೆಗೆ ಬಿಗಿದು ತಾಯಿ ಹತ್ಯೆ ಮಾಡಿದ್ದಾನೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ದೇಹಗಳನ್ನು ಅತ್ತಿಬೆಲೆ ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.
– ನಾಗಮಂಗಲ: ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಯಲ್ಲಿ ಜಗಳ
ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಬೀದಿ ಜಗಳ ಮುಂದುವರಿದಿದೆ. ಪಾಂಡವಪುರ ಠಾಣೆ ಬಳಿ ನಡೆದ ಜಟಾಪಟಿ ಮಾಸುವ ಮುನ್ನವೇ ನಾಗಮಂಗಲದಲ್ಲಿ ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಜಗಳವಾಗಿ ನಡುಬೀದಿಯಲ್ಲಿ ಹೊರಳಾಡಿರುವ ಘಟನೆ ನಡೆದಿದೆ. ತಾಯಿಯೊಬ್ಬರು ಮಗನ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ಯಲು ಬಂದ ಎ.ಎಸ್.ಐ ಜೊತೆಗೆ ಆರೋಪಿಯು ಹೊಡೆದಾಡಿಕೊಂಡಿದ್ದು, ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ. ಪಟ್ಟಣದ ಟಿ.ಬಿ.ವೃತ್ತದ ಬಳಿಯ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಆರೋಪಿ ಮಜ್ಜನಕೊಪ್ಪಲು ಪೂಜಾರಿ ಕೃಷ್ಣನನ್ನು ಅವನ ತಾಯಿ ಮರಿಯಮ್ಮ ನೀಡಿರುವ ದೂರಿನ ಮೇರೆಗೆ ವಿಚಾರಣೆ ನಡೆಸಲು ಠಾಣೆಗೆ ಕರೆದೊಯ್ಯಲು ಗ್ರಾಮಾಂತರ ಠಾಣೆಯ ಎ.ಎಸ್.ಐ ರಾಜು ಬಂದಿದ್ದಾರೆ. ಆರೋಪಿಯು ಬರಲು ಒಪ್ಪದಿದ್ದಾಗ ಬಲವಂತವಾಗಿ ಆಟೊ ಹತ್ತಿಸಲು ಎ.ಎಸ್.ಐ ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಆರೋಪಿ ಮತ್ತು ಪೊಲೀಸ್ ಅಧಿಕಾರಿಯು ಪರಸ್ಪರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಆರೋಪಿಯು “ದೂರು ಬಂದಿದ್ದರೆ ಎಫ್.ಐ.ಆರ್ ಹಾಕಿ ನಾನು ಠಾಣೆಗೆ ಬರುವುದಿಲ್ಲ” ಎಂದು ಎ.ಎಸ್.ಐ ಗೆ ಬೈದಿದ್ದಾನೆ ಎನ್ನಲಾಗಿದೆ. ನಂತರ ಇಬ್ಬರು ಕೊರಳಪಟ್ಟಿ ಹಿಡಿದು ಹೊಡೆದಾಟ ನಡೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಿ ಎಳೆದಾಡಿದ ಪೂಜಾರಿ ಕೃಷ್ಣನಿಗೆ ತರಾಟೆ ತೆಗೆದುಕೊಂಡು ಜಗಳವನ್ನು ಬಿಡಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಳಿಕ ಪೂಜಾರಿ ಕೃಷ್ಣನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
– ಕೊಪ್ಪಳ : ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!
ಕೊಪ್ಪಳ : ಆಕೆ ಮುದ್ದು ಮುಖದ ತಾವರೆಯಂತಿದ್ದಳು. ಮನೆಯಲ್ಲಿ ಚೆನ್ನಾಗಿ ಸಾಕಿದ್ದ ಹೆತ್ತವರು,ಗಿಣಿಯಂತೆ ಇದ್ದ ಮಗಳನ್ನು ಮದುವೆ ಮಾಡಿ, ಆಕೆಯ ಸಂಸಾರದ ಬಾಳು ಆನಂದಸಾಗರವಾಗಲಿ ಅಂತ ಹರಿಸಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಹೆಣ್ಣು ಮಗು ಕೂಡಾ ಹುಟ್ಟಿತ್ತು. ಮದುವೆಯಾದ ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಸಾಕಷ್ಟು ವರದಕ್ಷಿಣೆ ನೀಡಿದ್ದರು. ಅಳಿಯ ಕೇಳಿದಾಗ ಮತ್ತೆ ಹಣ ಕೂಡಾ ನೀಡಿದ್ದರು. ಆದ್ರೆ ಇಂತಹ ಮುದ್ದಾದ ಮಗಳು, ಬಾರದ ಲೋಕಕ್ಕೆ ಹೋಗಿದ್ದ ಸುದ್ದಿ ಕೇಳಿ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದ್ದು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ. ಕೊಪ್ಪಳದಲ್ಲಿ ಹೆತ್ತವರ ಆಕ್ರೋಶ, ಆಕ್ರಂಧನಕ್ಕೆ ಕಾರಣ,ತಮ್ಮ ಮಗಳು ಬಾರದ ಲೋಕಕ್ಕೆ ಹೋಗಿದ್ದು. ಕೊಪ್ಪಳ ನಗರದ ಭಾಗ್ಯ ನಗರದಲ್ಲಿರುವ ಜನತಾ ಕಾಲೋನಿಯ ನಿವಾಸಿಯಾಗಿದ್ದ ರೇಣುಕಾ ಸಂಗಟಿ ಅನ್ನೋ ಇಪ್ಪತ್ತೈದು ವರ್ಷದ ಮಹಿಳೆ ಇಂದು ನಸುಕಿನ ಜಾವದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ರೇಣುಕಾಳ ಪತಿ, ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳಿದ್ರೆ, ಇತ್ತ ಹೆತ್ತವರು ಮಾತ್ರ ಮಗಳ ಶವ ನೋಡಿ, ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅಂತ ಆರೋಪಿಸುತ್ತಿದ್ದಾರೆ. ರೇಣುಕಾಳ ಪತಿ ಅನೀಲ್ ಸಂಗಟಿ ಮತ್ತು ಆತನ ಕುಟುಂಬದವರು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.