ಟಾಪ್ ನ್ಯೂಸ್ ಕರ್ನಾಟಕ
– ಮಂಗಳೂರು: ಅಪಘಾತದಲ್ಲಿ ಯುವ ಕಲಾವಿದ ಸಾವು..!
– ದಾವಣಗೆರೆಯಲ್ಲಿ ಬೈಕ್ ಅಪಘಾತದಲ್ಲಿ ಯುವಕ ಸಾವು..!
– ರಾಮನಗರ : ಮಾಗಡಿ ಸಮೀಪ ಕಾರ್ ಅಪಘಾತದಲ್ಲಿ ಟೀ ಕುಡಿಯಲು ಹೊರಟಿದ್ದ ಇಬ್ಬರು ಸಾವು!
– ಹೊನ್ನಾವರ : ಬಸ್ ಬೈಕ್ ಡಿಕ್ಕಿಯಿಂದ ಮೂವರು ಸಾವು
– ರಾಮನಗರ : ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲಿ ಸಾವು
NAMMUR EXPRESS NEWS
ಮಂಗಳೂರು: ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಯುವ ಕಲಾವಿದ, ಬಿಎಸ್ಡಬ್ಲ್ಯೂ ವಿದ್ಯಾರ್ಥಿ ಸ್ಥಳದಲ್ಲೇ ಅಸುನೀಗಿದ್ದಾರೆ. 2024 ರ ಕೊನೆಯ ದಿನ ಘಟನೆ ನಡೆದಿದೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾರ್ (22) ಮೃತಪಟ್ಟ ವಿದ್ಯಾರ್ಥಿ. ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ, ಪ್ರವೀತ್ ಯಕ್ಷಗಾನ ಕಲಾವಿದನೂ ಹೌದು. ಅರ್ಕುಳ ಸಮೀಪ ಬೈಕ್ ರಸ್ತೆಗೆ ಬಿದ್ದಿದ್ದು ಈ ವೇಳೆ ಐಸ್ ಕ್ರೀಮ್ ಸಾಗಿಸುತ್ತಿದ್ದ ವಾಹನ ಯುವಕನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವರ್ಷಾಂತ್ಯದಲ್ಲಿ ದಾರುಣ ಘಟನೆ ನಡೆದಿದೆ. ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
– ದಾವಣಗೆರೆಯಲ್ಲಿ ಬೈಕ್ ಅಪಘಾತದಲ್ಲಿ ಯುವಕ ಸಾವು
ದಾವಣಗೆರೆ: ಹೊಸ ವರ್ಷ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಿಟ್ಟುವಳ್ಳಿ ಹೊಸ ಬಡಾವಣೆಯ ಕಾರ್ತಿಕ್ (19) ಮೃತ ಯುವಕ. ಕಳೆದ ರಾತ್ರಿ 1 ಗಂಟೆ ಸುಮಾರಿಗೆ ದಾವಣಗೆರೆ ನಗರದ ನೂತನ್ ಕಾಲೇಜು ಮುಂಭಾಗ ಬೈಕ್ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಕಾರ್ತಿಕ್ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ಹೊಸ ವರ್ಷ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆ ಯುವಕ ಆಗಮಿಸುತ್ತಿದ್ದ. ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ರಾಮನಗರ : ಮಾಗಡಿ ಸಮೀಪ ಕಾರ್ ಅಪಘಾತದಲ್ಲಿ ಟೀ ಕುಡಿಯಲು ಹೊರಟಿದ್ದ ಇಬ್ಬರು ಸಾವು!
ರಾಮನಗರ : ಹೊಸ ವರ್ಷದ ಮೊದಲ ದಿನದಂದೇ ರಾಮನಗರ ಜಿಲ್ಲೆಯ ಮಾಗಡಿ ಸಮೀಪ ಅಪಘಾತವಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಸ್ನೇಹಿತರೆಲ್ಲಾ ಟೀ ಕುಡಿಯಲು ಹೊರಟಿದ್ದ ಯುವಕರ ಕಾರು ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಐವರಿಗೆ ಗಾಯವಾಗಿವೆ. ಮಾಗಡಿ ತಾಲೂಕಿನ ಹೊಸಪಾಳ್ಯದ ಜನತಾ ಕಾಲೋನಿ ಬಳಿ ಬೆಳಗಿನ ಜಾವ 3 ಗಂಟೆಗೆ ಘಟನೆ ನಡೆದಿದೆ. ಮಂಜು (31), ಕಿರಣ್ (30) ಮೃತರು ಎಂದು ಗುರುತಿಸಲಾಗಿದೆ. ಮೂಲತಃ ಮಾಗಡಿ ತಾಲೂಕಿನ ಚೋಳನಾಯಕನಹಳ್ಳಿ ಗ್ರಾಮದವರು. ಇನ್ನು ಗಾಯಾಳುಗಳಿಗೆ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
– ಹೊನ್ನಾವರ : ಬಸ್ ಬೈಕ್ ಡಿಕ್ಕಿಯಿಂದ ಮೂವರು ಸಾವು
ಹೊನ್ನಾವರ : ಹೊನ್ನಾವರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಶರಾವತಿ ನದಿ ಸೇತುವೆಯಲ್ಲಿ ಮಂಗಳವಾರ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ ( 34 ), ಖರ್ವಾ ನಾಥಗೇರಿಯ ರಮೇಶ ರಾಮಚಂದ್ರ ನಾಯ್ಕ ( 22 ) ಹಾಗೂ ಸಂಶಿ – ಕುದ್ರಿಗಿಯ ಗೌರೀಶ ( ಗಣಪತಿ ) ಮಂಜುನಾಥ ನಾಯ್ಕ ( 22 ) ಮೃತರು. ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿರುವ ಬಸ್ ಸೇತುವೆಯಲ್ಲಿಸಾಗುತ್ತಿರುವಾಗ ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಬೈಕ್ ಸವಾರರಾದ ರಾಘವೇಂದ್ರ ಗೌಡ ಮತ್ತು ರಮೇಶ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ, ಗೌರೀಶ ( ಗಣಪತಿ) ನಾಯ್ಕ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಾವಿನಕುರ್ವಾದ ಮಹೇಶ ಸೋಮಯ್ಯ ಗೌಡ ದೂರು ನೀಡಿದ್ದಾರೆ. ಬಸ್ ಚಾಲಕ ಬಸವನಬಾಗೇವಾಡಿ ತಾಲೂಕಿನ ಕರಬಂಟವಾಳದ ವಸಂತ ಭೀಮಪ್ಪ ಚೌವಾಣ ವಿರುದ್ದ ಪ್ರಕರಣ ದಾಖಲಾಗಿದೆ. ಪಿಎಸ್ಐ ಮಮತಾ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
– ರಾಮನಗರ : ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲಿ ಸಾವು
ರಾಮನಗರ : ಅಪಘಾತದಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸಿದ್ದಪ್ಪ (45) ಮೃತ ವ್ಯಕ್ತಿ. ಮಾಗಡಿ ಹೊಸ ಪೇಟೆ ಸರ್ಕಲ್ ಬಳಿ ಘಟನೆ ನಡೆದಿದೆ. ಮಧ್ಯರಾತ್ರಿ 12.30 ರ ಸಮಯದಲ್ಲಿ ಘಟನೆ ನಡೆದಿದೆ. ದ್ವಿಚಕ್ರ ಸವಾರ ಮೋಹನ್ ಎಂಬಾತನಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.