ಗದ್ದೆಯಲ್ಲಿದ್ದವನನ್ನು ತಿವಿದು ಕೊಂದ ಹಂದಿ!
– ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಘಟನೆ
– ರೈತನ ಕೊಂದ ಹಂದಿಯನ್ನು ಹತ್ಯೆ ಮಾಡಿದ ಜನ!
– ಹಾವೇರಿ: ಅರೆಬೆತ್ತಲೆ ಮಾಡಿ ಥಳಿತ: ಕೇಸ್
– ದಾವೂದ್ ಇಬ್ರಾಹಿಂಗೆ ವಿಷಪ್ರಾಶನ!?
NAMMUR EXPRESS NEWS
ಹಾಸನ: ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡು ಹಂದಿಯೊಂದು ಬೀಭತ್ಸ ದಾಳಿ ನಡೆಸಿ ರೈತನನ್ನ ಸಾಯಿಸಿದೆ. ಅಲ್ಲದೆ ತಡೆಯಲು ಬಂದ ಮಹಿಳೆಯರ ಮೇಲೂ ದಾಳಿ ನಡೆಸಿದ ಹಂದಿಯು ಸಿಕ್ಕಸಿಕ್ಕಲ್ಲಿ ತಿವಿದಿದೆ. ಈ ಘಟನೆಯಲ್ಲಿ ಯಜಮಾನರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ದೊಣ್ಣೆ, ಲಟ್ಟಾ, ಕುಡುಗೋಲು ಇತ್ಯಾದಿಗಳನ್ನ ತೆಗೆದುಕೊಂಡು ಹಂದಿಯನ್ನ ಅಟ್ಟಾಡಿಸಿ ಹುಡುಕಿ ಕೊಂದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ರಾಜೇಗೌಡ ಎಂಬ 63 ವರ್ಷದ ರೈತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮನುಷ್ಯರ ಕಂಡರೆ ಓಡುವ ಕಾಡು ಹಂದಿ ಹೀಗೆ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಇನ್ನು ಗ್ರಾಮಸ್ಥರು ಪ್ರತಿದಾಳಿಯಲ್ಲಿ ಹಂದಿಯನ್ನು ಸಹ ಸಾಯಿಸಿದ್ದಾರೆ. ಪ್ರಕರಣ ಕುತೂಹಲ ಮೂಡಿಸಿದ್ದು, ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
ಅರೆಬೆತ್ತಲೆ ಮಾಡಿ ಥಳಿತ: ಕೇಸ್
ಯುವಕ-ಯುವತಿ ಪರಸ್ಪರ ಪ್ರೀತಿಸಿ ಓಡಿ ಹೋದ ಕಾರಣಕ್ಕೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಯುವತಿಯ ಕಡೆಯವರು ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಚಳಗೇರಿ ಗ್ರಾಮದ ಯುವತಿಯೊರ್ವಳು ರಾಣೆಬೆನ್ನೂರು ತಾಲುಕಿನ ಮುದೇನೂರ ಗ್ರಾಮದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಈ ಪ್ರಕರಣದಲ್ಲಿ ಹುಡುಗ- ಹುಡುಗಿ ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹುಡುಗಿಯ ಕಡೆಯವರು ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದು ಪೊಲೀಸ್ ಠಾಣೆ ಎದುರು ಅವರ ಕಡೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಾವೂದ್ ಇಬ್ರಾಹಿಂಗೆ ವಿಷಪ್ರಾಶನ!?
ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಷಪ್ರಾಶನ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಊಹಾಪೋಹ ಇದೀಗ ಭಾರೀ ಸದ್ದು ಮಾಡುತ್ತಿದೆ. ಆದರೆ ಆತ ಬದುಕಿದ್ದಾನಾ… ಮೃತ ಪಟ್ಟಿದ್ದಾನಾ ಅಥವಾ ಆತನಿಗೆ ವಿಷ ಪ್ರಾಶನ ಮಾಡಿದ್ದು ಹೌದಾ ಎಂಬ ಸಂಗತಿಗಳು ಈಗ ಅನೇಕ ಪ್ರಶ್ನೆ ಹುಟ್ಟು ಹಾಕಿದೆ. ಜಾಗತಿಕ ಇಂಟರ್ ನೆಟ್ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಇಂಟರ್ ನೆಟ್ ವಾಚ್ ಡಾಗ್ ನೆಟ್ಬ್ಲಾಕ್ಸ್ ಭಾನುವಾರ ಸಂಜೆ ಸುಮಾರು ಏಳು ಗಂಟೆಗಳ ಕಾಲ ಪಾಕಿಸ್ತಾನದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೇಲೆ ನಿರ್ಬಂಧಗಳನ್ನು ಸೂಚಿಸುವ ಮೆಟ್ರಿಕ್ಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಂಡು ಜಾಗತಿಕ ನಿರ್ಬಂಧಗಳಿಂದ ತಪ್ಪಿಸಿಕೊಂಡಿರುವ 67 ವರ್ಷದ ಇಬ್ರಾಹಿಂ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ, ರಿಯಲ್ ಎಸ್ಟೇಟ್, ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ.