ನೀರಿನ ತೊಟ್ಟಿಗೆ ಬಿದ್ದ 3 ವರ್ಷದ ಮಗು ಸಾವು!
– ಬೆಂಗಳೂರು: ಸಂಪ್ಗೆ ಬಿದ್ದ 5 ವರ್ಷದ ಬಾಲಕಿ ಸಾವು
– ರಾಮನಗರ: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ
– ಉರಗ ಪ್ರೇಮಿ ತೇಜಸ್ ಉರಗ ಪ್ರೇಮ
– ಡಾಂಬರ್ನಲ್ಲಿ ಸಿಲುಕಿದ್ದ ನಾಗರಹಾವಿಗೆ ಆಪರೇಷನ್!
NAMMUR EXPRESS NEWS
ಶಿರಸಿ: ಆಟವಾಡುತ್ತಾ ಮಗುವೊಂದು ಅಚಾನಕ್ ಆಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಾನ್ವಿತಾ ಮೃತಪಟ್ಟ ದುರ್ದೈವಿ. ಮಾನ್ವಿತಾ ತಾಯಿ ರೂಪಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸಗಾರರಾಗಿದ್ದರು. ಮಾನ್ವಿತಾಳಿಗೆ ಜ್ವರ ಇದ್ದ ಕಾರಣಕ್ಕೆ ರೂಪಾ ಮಗಳನ್ನು ಜತೆಗೆ ಕರೆದುಕೊಂಡು ಕೆಲಸಕ್ಕೆ ಬಂದಿದ್ದರು.ಮಾನ್ವಿತಾಳಿಗೆ ಔಷಧಿ ಕೊಟ್ಟು ಅಲ್ಲೆ ಇದ್ದ ಅಜ್ಜನ ಬಳಿ ಆಟವಾಡಲು ಬಿಟ್ಟು, ರೂಪಾ ತಮ್ಮ ಕೆಲಸಕ್ಕೆ ಮುಂದಾಗಿದ್ದಾರೆ. ಈ ವೇಳೆ ಆಟವಾಡುತ್ತಾ ನೀರಿನ ತೊಟ್ಟಿ ಬಳಿ ಬಂದು ಅಚಾನಕ್ ಆಗಿ ಮಾನ್ವಿತಾ ಬಿದ್ದಿದ್ದಾಳೆ. ನೀರಿನಲ್ಲಿ ಮುಳುಗಿ ಮಾನ್ವಿತಾ ಮೃತಪಟ್ಟಿದ್ದಾಳೆ. ತುಂಬಾ ಸಮಯದವರೆಗೆ ಮಗು ಕಾಣದಿದ್ದಾಗ ಅನುಮಾನಗೊಂಡು ತೊಟ್ಟಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ನೀರಿನ ಸಂಪ್ಗೆ ಬಿದ್ದ 5 ವರ್ಷದ ಬಾಲಕಿ ಸಾವು
ನೀರಿನ ಸಂಪ್ಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲೂ ನಡೆದಿದೆ. ಆಯಿದಾ (5) ಮೃತ ಬಾಲಕಿ. ಬಾಡಿಗೆದಾರರು ನೀರಿನ ಸಂಪ್ನ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದರು. ಇದೇ ವೇಳೆ ಆಯಿದಾ ತಾಯಿ ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದಾಳೆ. ಮನೆ ಮುಂದೆ ಆಟವಾಡುತ್ತಿದ್ದಾಗ ಆಯಿದಾ ಆಯತಪ್ಪಿ ಸಂಪ್ನಲ್ಲಿ ಬಿದ್ದಿದ್ದಾಳೆ. ಸಂಪ್ನಲ್ಲಿ ನೀರು ತುಂಬಿ ಇದ್ದಿದ್ದರಿಂದ ಆಯಿದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ತುಂಬಾ ಸಮಯದವರೆಗೆ ಬಾಲಕಿ ಕಾಣದಿದ್ದಾಗ ಅನುಮಾನಗೊಂಡು ಸಂಪ್ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ
ರಾಮನಗರದ ರೈಲ್ವೆ ನಿಲ್ದಾಣ ಸಮೀಪ ರೈಲಿನ ಹಳಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯುವಕ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಡಾಂಬರ್ನಲ್ಲಿ ಸಿಲುಕಿದ್ದ ನಾಗರಹಾವಿಗೆ ಆಪರೇಷನ್!
ದಕ್ಷಿಣ ಕನ್ನಡ: ಡಾಂಬರ್ನಲ್ಲಿ ಸಿಲುಕಿದ ನಾಗರ ಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ. ತೇಜಸ್ ಬನ್ನೂರು ಈ ಕಾರ್ಯಚರಣೆಯನ್ನು ಪುತ್ತೂರಿನ ನೆಹರೂ ನಗರದಲ್ಲಿ ಮಾಡಿದ್ದಾರೆ. ನಗರದ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು. ಹಾವೊಂದು ಡಾಂಬರ್ ಡಬ್ಬಿಗಳ ಅಂಚಿನಲ್ಲಿ ಹೋಗಿರುವುದನ್ನು ಗಮನಿಸಿದ್ದ ಮನೆ ಮಂದಿ ತೇಜಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುಮಾರು ಒಂದು ವರ್ಷ ಪ್ರಾಯದ ನಾಗರಹಾವು ಚೇತರಿಸಿಕೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯವನ್ನೂ ತೇಜಸ್ ಮಾಡಿದ್ದಾರೆ.