– ಹಸುಗೂಸನ್ನು ತಿಂದು ಹಾಕಿದ ಬೀದಿ ನಾಯಿಗಳು
– ಗೀಸರ್ ಗ್ಯಾಸ್ ಸೋರಿಕೆ: ಪ್ರಜ್ಞೆ ತಪ್ಪಿ ಬಿದ್ದ ಯುವತಿ ಬಾತ್ರೂಮ್ನಲ್ಲೇ ಸಾವು!
-ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋದ ಪಾಪಿಗಳು!
– ಗ್ಯಾಸ್ ಗೀಸರ್ ಲೀಕ್ ಆಗಿ ಗರ್ಭಿಣಿ ಸಾವು!
NAMMUR EXPRESS NEWS
ಗದಗ: ದುರಸ್ಥಿ ಮನೆಯೊಂದರ ಬಳಿ ಆಗ ತಾನೇ ಜನಿಸಿದ ಮಗುವನ್ನು ಕಟುಕರು ಎಸೆದು ಹೋಗಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಜೀವಂತ ಹಸುಗೂಸನ್ನು ಬೀದಿ ನಾಯಿಗಳು ತಿಂದು ಹಾಕಿವೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಡಿ.21ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದೇವಿಹಾಳ ಗ್ರಾಮದ ರತ್ನಮ್ಮ ಬಡ್ನಿ ಎಂಬುವವರ ದುರಸ್ಥಿ ಮನೆಯ ಹತ್ತಿರ ನವಜಾತ ಶಿಶುವನ್ನು ಎಸೆದು ಹೋಗಿದ್ದಾರೆ. ಅನೈತಿಕ ಸಂಬಂಧದಿಂದ ಜನಿಸಿದ ಮಗು ಎಂದು ಹೇಳಲಾಗುತ್ತಿದೆ. ಅನೈತಿಕ ಸಂಬಂಧಕ್ಕೆ ಈ ಮಗು ಜನಿಸಿದ್ದು, ತಮ್ಮ ಸಂಬಂಧವನ್ನು ಮುಚ್ಚಿಡುವ ಸಲುವಾಗಿ ಹುಟ್ಟಿದ ಮಗುವನ್ನು ಎಸೆದು ಹೋಗಿದ್ದಾರೆ ಎಂದು ದೂರಲ್ಲಿ ಉಲ್ಲೇಖಸಿಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ನಾಯಿಗಳು ಅರ್ಧಂಬರ್ದಾ ತಿಂದು ಹಾಕಿವೆ. ಮಗುವಿನ ತಲೆಯ ಭಾಗವಿಲ್ಲದ ದೇಹ ಪತ್ತೆಯಾಗಿದೆ. ಕೂಸಿನ ವಾರಸುದಾರರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಅರ್ಧಂಬರ್ದಾ ಸಿಕ್ಕಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರು: ಸ್ನಾನ ಮಾಡಲು ಬಾತ್ರೂಮ್ಗೆ ಹೋಗಿದ್ದ ಯುವತಿಯೊಬ್ಬಳು ಅಲ್ಲಿಯೇ ಮೃತಪಟ್ಟಿದ್ದಾಳೆ. ಬಾತ್ರೂಮ್ನಲ್ಲಿದ್ದ ಗೀಸರ್ನಿಂದ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ರಾಜೇಶ್ವರಿ (23) ಮೃತ ದುರ್ದೈವಿ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ಈ ದುರ್ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ವರಿ, ಅಣ್ಣನ ಮದುವೆಗೆ ರಜೆ ಹಾಕಿದ್ದಳು. ಇಂದು ಬೆಳಗ್ಗೆ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಸರ್ನಿಂದ ಸೋರಿಕೆಯಾದ ವಿಷ ಅನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತುಂಬ ಸಮಯ ಬಾತ್ ರೂಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಶ್ವರಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.
ಬಾತ್ರೂಮ್ನಿಂದ ಹೊರಬಾರದ ಕಾರಣಕ್ಕೆ ಬಾಗಿಲು ಬಡಿದಿದ್ದಾರೆ. ಆಗಲೂ ತೆರೆಯದೇ ಇದ್ದಾಗ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ರಾಜೇಶ್ವರಿ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆದಾಗಲೇ ರಾಜೇಶ್ವರಿ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಚರಂಡಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹವೊಂದು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಕಲಾಲ್ ನಗರದಲ್ಲಿ ಘಟನೆ ನಡೆದಿದೆ. ನವಜಾತ ಶಿಶು ಹತ್ಯೆಗೈದು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ರಾತ್ರಿ ವೇಳೆ ಚರಂಡಿಯಲ್ಲಿ ಎಸೆದಿರುವ ಶಂಕೆ ಇದೆ. ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರಂಡಿಯಲ್ಲಿ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಬೆಂಗಳೂರು: ಮಗು ಜತೆಗೆ ಸ್ನಾನಕ್ಕೆ ಹೋದಾಗ ಗೀಸರ್ ಲೀಕ್ ಆಗಿ ಪ್ರಜ್ಞೆ ತಪ್ಪಿ ಬಾತ್ರೂಮ್ನಲ್ಲೇ ಗರ್ಭಿಣಿಯೊಬ್ಬರು ಮೃತಪಟ್ಟಿದ್ದರು. ರಮ್ಯ (23) ಮೃತ ದುರ್ದೈವಿ. ಬೆಂಗಳೂರಿನ ಅಶ್ವತ್ ನಗರದಲ್ಲಿ ಈ ದುರ್ಘಟನೆ ನಡೆದಿತ್ತು. ರಮ್ಯ ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋದಾಗ, ಗ್ಯಾಸ್ ಗೀಸರ್ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿತ್ತು. ಆದರೆ ಇದು ತಿಳಿಯದೆ ಸ್ನಾನ ಮಾಡಲು ಬಾತ್ ರೂಮ್ಗೆ ಹೋಗಿದಾಗ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ಮೃತ ರಮ್ಯ ಗಂಭೀರವಾಗಿರುವ ರಮ್ಯರ ಮಗ ಕೂಡಲೇ ಕುಟುಂಬಸ್ಥರು ರಮ್ಯಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಗರ್ಭಿಣಿಯಾಗಿದ್ದ ರಮ್ಯರ ಮಗುವೂ ಪ್ರಪಂಚ ನೋಡುವ ಮುನ್ನವೇ ಗರ್ಭದಲ್ಲೇ ಮೃತಪಟ್ಟಿತ್ತು. ಇತ್ತ ರಮ್ಯರ ನಾಲ್ಕು ವರ್ಷದ ಮಗನಿಗೂ ಚಿಕಿತ್ಸೆ ಮುಂದುವರಿದಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ