– ತೀರ್ಥಹಳ್ಳಿ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿಯಾದ ಕಾಡಾನೆ!!
– ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಮಾರಾಟಗಾರ!
– ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸ್ವಿಮ್ಮಿಂಗ್ ಪೂಲ್ ಗೆ ಪ್ರಸರಿಸಿದ ವಿದ್ಯುತ್: ಬಾಲಕಿ ಸಾವು!
– ಮದ್ಯದ ನಶೆ: ಅಪಾರ್ಟ್ಮೆಂಟ್ನಿಂದ ಬಿದ್ದು ಯುವತಿ ಸಾವು!
– ಕರ್ತವ್ಯ ಲೋಪ ಮಾಡಿದ ಇಬ್ಬರು ಕಾನ್ ಸ್ಟೇಬಲ್ ಸಸ್ಪೆಂಡ್!
– ನಿಂತ ಲಾರಿಯೊಂದರಲ್ಲಿ ಪೂರ್ಣ ಕೊಳೆತ ಶವ ಪತ್ತೆ!
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಈಗ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿಯಾಗಿವೆ. ಸಕ್ರೆಬೈಲ್ ಬಿಡಾರದ ಬಳಿ ಕಾಣಿಸಿದ ಕಾಡಾನೆ ಅಲ್ಲಿನ ತೋಟವೊಂದರಲ್ಲಿ ಕಾಣಿಸಿಕೊಂಡು ನಂತರ ರಸ್ತೆಗೆ ಬಂದು ನಿಂತ ಕಾರಣ ವಾಹನ ಸವಾರರು ನಿಂತಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಉಂಟಾಯಿತು. ಒಂದು ಗಂಟೆಗಳ ಕಾಲ ಈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಕ್ರೆಬೈಲ್ ಆನೆಗಳ ಸಹಾಯದೊಂದಿಗೆ ಮಾವುತರು, ಕಾವಾಡಿಗಳು ಕಾಡಾನೆಯನ್ನು ಕಾಡಿಗೆ ಓಡಿಸಿದರು, ರಸ್ತೆ ದಾಟಿದ ನಂತರದಲ್ಲಿ ಕಾಡಾನೆ ಕಾಡಿಗೆ ತೆರಳಿದೆ. ಈ ಭಾಗದಲ್ಲಿ ಮತ್ತೆ ಕಾಡಾನೆಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಎಚ್ಚರವಹಿಸಬೇಕಿದೆ.
ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಮಾರಾಟಗಾರ!
ಶಿವಮೊಗ್ಗ: ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ವಿನೋಬನಗರ ಪೊಲೀಸ್ ಸ್ಟೇಷನ್ ಪೊಲೀಸರು ದಿನಾಂಕ: 29-12-2023 ರಂದು ನವುಲೆಯ ಇಂದಿರಾಗಾಂಧಿ ಬಡಾವಣೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನ ಮೇಲೆ ರೇಡ್ ಮಾಡಿದ್ದಾರೆ.
ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್ ಖಾನ್, 22 ವರ್ಷ, ಚೆನ್ನಗಿರಿ, ದಾವಣಗೆರೆ ಜಿಲ್ಲೆ ಈತನನ್ನು ವಶಕ್ಕೆ ಪಡೆದು, ಅಂದಾಜು ಮೌಲ್ಯ 1,00,000/- ರೂ ಗಳ 2 ಕೆ.ಜಿ. 53 ಗ್ರಾಂ ತೂಕದ ಒಣ ಗಾಂಜಾ, ತೂಕ ಮಾಡುವ ಯಂತ್ರ, ಮೊಬೈಲ್ ಫೋನ್ ಮತ್ತು ರೂ 500/- ನಗದು ಹಣವನ್ನು ಅಮಾನತುಪಡಿಸಿಕೊಂಡಿದ್ದಾರೆ ಅಲ್ಲದೆ, ಆರೋಪಿತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0271/2023 ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸ್ವಿಮ್ಮಿಂಗ್ ಪೂಲ್ ಗೆ ಪ್ರಸರಿಸಿದ ವಿದ್ಯುತ್: ಬಾಲಕಿ ಸಾವು!
ಬೆಂಗಳೂರು: ಬೆಂಗಳೂರಿನ ವರ್ತೂರಿನಲ್ಲಿರೋ ಪ್ರತಿಷ್ಠಿತ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ರಾತ್ರಿ ಸ್ವಿಮ್ಮಿಂಗ್ ಪೂಲ್ ಗೆ ಆಟವಾಡಲು ಬಂದ 10 ವರ್ಷದ ಬಾಲಕಿ ಮಾನ್ಯ, ವಿದ್ಯುತ್ ಪ್ರವಹಿಸಿ ಬಾರದಲೋಕಕ್ಕೆ ಪಯಣಿಸಿದ್ದಾಳೆ. ಬಾಳಿ ಬದುಕಬೇಕಿದ್ದ ಕಂದಮ್ಮನ ಬಲಿ ಪಡೆದ ಅಪಾರ್ಟ್ ಮೆಂಟ್ ಮ್ಯಾನೇಜ್ ಮೆಂಟ್ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ ಅಂತಾ ಎಫ್ ಐಆರ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ರೆ, ಇತ್ತ ಅಪಾರ್ಟ್ ಮೆಂಟ್ ನಿವಾಸಿಗಳು ಹಾಗೂ ಮೃತ ಬಾಲಕಿಯ ತಂದೆ ಕರೆಂಟ್ ಶಾಕ್ ನಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪ ಮಾಡ್ತಿದ್ದಾರೆ. ಇವೆಲ್ಲದರ ಮಧ್ಯೆ ನಿವಾಸಿಗಳು ಸ್ವಿಮ್ಮಿಂಗ್ ಪೂಲ್ ನಲ್ಲಿ ಕರೆಂಟ್ ಟೆಸ್ಟ್ ಮಾಡಿರೋ ವಿಡಿಯೋ ಪ್ರಕರಣದಲ್ಲಿ ಸಂಚಲನ ಮೂಡಿಸಿದೆ.
ಮದ್ಯದ ನಶೆ: ಅಪಾರ್ಟ್ಮೆಂಟ್ನಿಂದ ಬಿದ್ದು ಯುವತಿ ಸಾವು!
ಬೆಂಗಳೂರು: ಅಪಾರ್ಟ್ಮೆಂಟ್ನಿಂದ ಬಿದ್ದು ಇಂಜಿನಿಯರ್ ಮೃತಪಟ್ಟ ಘಟನೆ ಕೆ.ಆರ್.ಪುರದ ಅಯ್ಯಪ್ಪನಗರದಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಎಂಬುವವರು ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ಶುಕ್ರವಾರ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದರು. ದಿಪಾಂಶು ಶರ್ಮಾ ತನ್ನ ಅಪಾರ್ಟ್ಮೆಂಟ್ನ 33ನೇ ಫ್ಲೋರ್ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲೇ ಬಾಲ್ಕನಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
– ಕರ್ತವ್ಯ ಲೋಪ ಮಾಡಿದ ಇಬ್ಬರು ಕಾನ್ ಸ್ಟೇಬಲ್ ಸಸ್ಪೆಂಡ್!
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 6 ತಿಂಗಳ ಹಿಂದೆ ಕಾನ್ ಸ್ಟೇಬಲ್ ಸಿದ್ದೇಶ್, ಲಿಂಗದಹಳ್ಳಿ ಠಾಣೆಯಿಂದ, ಮತ್ತು ಹೆಡ್ ಕಾನ್ ಸ್ಟೆಬಲ್ ಉಮಾಶಂಕರ್ ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದರು. ನಂತರ ಕೊಪ್ಪ ಠಾಣೆಗೆ ವರ್ಗಾವಣೆಯಾಗಿದ್ದು. ಕಾನ್ ಸ್ಟೇಬಲ್ ಸಿದ್ದೇಶ್ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ ಜನರಿಂದ ವಸೂಲಿ ದಂಧೆ ಮಾಡುತಿದ್ದು, ಉಮಾಶಂಕರ್ ಮದ್ಯಸೇವಿಸಿ ರೌಡಿಶೀಟರ್ ಗಳ ಜೊತೆ ಸೇರಿಕೊಂಡು ಗುಂಪು ಗಲಾಟೆಯಲ್ಲಿ ತೊಡಗಿದ್ದರು. ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ಅವರನ್ನು ಶುಕ್ರವಾರ ರಾತ್ರಿ ಸಸ್ಪೆಂಡ್ ಮಾಡಲಾಗಿದೆ.
ಕೊಪ್ಪ ಪಿಎಸ್ಐ ಕೌಶಿಕ್ ಅವರ ವರದಿ ಆಧರಿಸಿ DYSP ಅನಿಲ್ ಈ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿರುವುದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ನಿಂತ ಲಾರಿಯೊಂದರಲ್ಲಿ ಪೂರ್ಣ ಕೊಳೆತ ಶವ ಪತ್ತೆ!
ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತಿರುವ ವೀರಭದ್ರೇಶ್ವರ ಟಾಕೀಸ್ ಬಳಿಯ ಜಾಗದಲ್ಲಿ ಲಾರಿಯೊಂದನ್ನ ನಿಲ್ಲಿಸಲಾಗಿತ್ತು. ಅಲ್ಲಿ ಶುಕ್ರವಾರ ಸುಮಾರು 30-40 ವಯಸ್ಸಿನ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಈ ವಿಚಾರ 15-20 ದಿನಗಳ ನಂತರ ಬೆಳಕಿಗೆ ಬಂದಿದೆ. ಪೂರ್ಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಶವವು ಪೂರ್ಣ ಸ್ಥಿತಿಯಲ್ಲಿ ಕೊಳೆತಿದ್ದು ಹುಳ ತುಂಬಿದೆ. ವಿಪರೀತ ವಾಸನೆ ಬಂದ ಹಿನ್ನೆಲೆಯಲ್ಲಿ ಜನರು ಲಾರಿಯ ಬಳಿಯಲ್ಲಿ ಚೆಕ್ ಮಾಡಿದ್ದಾರೆ. ಈ ವೇಳೆ ಲಾರಿಯಲ್ಲಿ ಶವ ಇರುವುದು ಗೊತ್ತಾಗಿದೆ. ಹಲವು ದಿನಗಳಿಂದ ಲಾರಿ ಅಲ್ಲಿಯೆ ನಿಂತಿತ್ತು ಎನ್ನಲಾಗಿದೆ.
ಇನ್ನೂ ಈ ಸಂಬಂಧ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಾಕಿಯಂತೆ ಪೂರ್ಣ ದೇಹ ಕೊಳೆತಿದ್ದು, ಚಹರೆ, ಮುಖ ಗುರುತಾಗುವುದಿಲ್ಲ. ಮೈಮೇಲೆ ಮಾಸಲು ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ ಎಂದು ಕೋಟೆ ಠಾಣೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.:08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.