ಗಾಂಧಿಗೆ ನಮನ: ಗಾಂಧಿ ಶಾಂತಿ ನಾಯಕ!
– ಸತ್ಯ, ಅಹಿಂಸೆಯ ಪ್ರತೀಕ
– ಗಾಂಧಿ ನೆನೆಯೋಣ…ಅಕ್ಷರ ನಮನ
NAMMUR EXPRESS NEWS
ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆ ಗಳಿಸಿದ, ಮಹಾನ್ ದಾರ್ಶನಿಕ, ಮಾನವತಾವಾದಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಶ್ರೇಷ್ಠ ವ್ಯಕ್ತಿತ್ವದೊಂದಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಶಾಂತಿಯ ಮಾರ್ಗದಲ್ಲಿ ಮುನ್ನಡೆಸಿ ಬ್ರಿಟಿಷರು ಭಾರತವನ್ನು ತೊರೆಯಲು ಪ್ರಮುಖ ಕಾರಣವಾದರು.
ಸತ್ಯವೇ ಜೀವನದ ಅಂತಿಮ ಗುರಿ ಮತ್ತು ಅಹಿಂಸೆ ಅದರ ಸಾಧನವಾಗಿದೆ ಎಂದು ಸಾರಿದ ಮಹಾತ್ಮ ಗಾಂಧಿಯವರು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜದಲ್ಲಿನ ಜಾತೀಯತೆ ಅಂತಹ ನೂರಾರು ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹೋರಾಡಿದ ಮಹಾನ್ ಚೇತನ.
ಪರಿಸರ ಸುಸ್ಥಿರತೆಗೆ ಮಹತ್ವದ ಕೊಡುಗೆ ನೀಡಿದ ಮಹಾತ್ಮ ಗಾಂಧಿಯವರು, ನವೀಕರಿಸಬಹುದಾದ ಶಕ್ತಿ ಮತ್ತು ಸಣ್ಣ-ಪ್ರಮಾಣದ ನೀರಾವರಿ ವ್ಯವಸ್ಥೆಗಳ ಉತ್ತೇಜನಗಳೊಂದಿಗೆ ಅತಿಯಾದ ದೊಡ್ಡ ಕೈಗಾರಿಕಾ ಅಭಿವೃದ್ಧಿಯ ವಿರುದ್ಧ ಅಭಿಯಾನಗಳನ್ನು ನಡೆಸಿದರು.
ಜಗತ್ತಿನ ಬಹುತೇಕ ಚಿಂತಕರು ಗಾಂಧೀಜಿಯನ್ನು ಅಹಿಂಸೆಯ ಪ್ರತಿಪಾದಕ ಎಂದು ವಾದಿಸಿದ್ದಾರೆ. ಆದರೆ ಗಾಂಧೀಜಿಗೆ ಸತ್ಯವು ಅಹಿಂಸೆಗಿಂತ ಪ್ರಧಾನವಾದ ಸಂಗತಿಯಾಗಿತ್ತು. ಅವರ ಪಾಲಿಗೆ ಸತ್ಯವು ಗುರಿಯಾದರೆ, ಅಹಿಂಸೆ ಅದನ್ನು ತಲುಪುವ ಮಾರ್ಗವಾಗಿತ್ತು. ಆ ಮಾರ್ಗವನ್ನು ತಲುಪಲು ಸತ್ಯಾಗ್ರಹ ಬೇಕು ಎನ್ನುವ ಧೋರಣೆಯನ್ನು ಗಾಂಧಿ ಹೊಂದಿದ್ದರು. ತಮ್ಮ ಆಶ್ರಮದಲ್ಲಿದ್ದ, ಕ್ಯಾನ್ಸರ್ನ ಅಂತಿಮ ಹಂತದಲ್ಲಿ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ದಯಾಮರಣ ನೀಡಬೇಕೋ ಬೇಡವೋ ಎಂಬ ವಿಚಾರ ಚರ್ಚೆಗೆ ಬಂದಾಗ, ಈ ಕಾರಣಕ್ಕಾಗಿಯೇ ಗಾಂಧಿ ದಯಾಮರಣವನ್ನು ನೀಡುವುದು ಸೂಕ್ತ ಎನ್ನುವ ಮೂಲಕ ಅಹಿಂಸೆಗಿಂತ ಸತ್ಯವೇ ಮುಖ್ಯ ಎನ್ನುವ ತೀರ್ಮಾನ ಕೈಗೊಂಡಿದ್ದರು.
ಹಾಗಾಗಿಯೇ ಒಮ್ಮೆ ಅಮೇರಿಕಾದ ಶ್ರೇಷ್ಠ ಹೋರಾಟಗಾರ ಮಾರ್ಟಿನ್ ಲೂಥರ್ ಅವರು ಜೀಸಸ್ ಮನುಷ್ಯನ ಬದುಕಿನ ಸಂದೇಶ ನೀಡಿದ್ದರೆ, ಗಾಂಧಿ ಅದನ್ನು ಆಚರಿಸುವ ವಿಧಾನ ತೋರಿಸಿದರು ಎನ್ನುವ ಮೂಲಕ ಮಹಾತ್ಮ ಗಾಂಧೀಜಿಯವರನ್ನ ಅನುಸರಿಸಿದ್ದರು.
ಗಾಂಧಿಯವರ ಅಂತಿಮ ಹುಡುಕಾಟ ಸತ್ಯವೇ ಆಗಿತ್ತು. ಧಾರ್ಮಿಕರಾಗಿದ್ದ ಅವರಿಗೆ ಧರ್ಮವೂ ಸತ್ಯವನ್ನು ಶೋಧಿಸುವ ಮಾರ್ಗವೇ ಆಗಿತ್ತು. ಆ ಕಾರಣಕ್ಕೆ, ಧರ್ಮಗಳ ಸಂಕುಚಿತ ನಿರೂಪಣೆಯನ್ನು ಮೀರಿ ಯಾವ ಧರ್ಮವೂ ಪರಿಪೂರ್ಣವಲ್ಲ ಎಂದು ಸಾರುವ ಮೂಲಕ, ಹಿಂಸೆಯಿಲ್ಲದೆ ಸ್ವಾತಂತ್ರ್ಯವನ್ನು ಪಡೆಯುವುದಾಗಿತ್ತು. ಚೌರಿ-ಚೌರಾ ಘಟನೆಯ ನಂತರ ಅವರು ಅಸಹಕಾರ ಚಳವಳಿಯನ್ನು ತೊರೆಯಲು ನಿರ್ಧರಿಸಿದರು . ಚೌರಿ ಚೌರಾ ಘಟನೆಯಲ್ಲಿ ನಡೆದ ಹಿಂಸಾಚಾರವೇ ಇದಕ್ಕೆ ಕಾರಣವಾಗಿದೆ. ಪರಿಣಾಮವಾಗಿ, ಅನೇಕರು ಈ ನಿರ್ಧಾರದಿಂದ ಅಸಮಾಧಾನಗೊಂಡರು. ಆದಾಗ್ಯೂ, ಗಾಂಧಿಯವರು ತಮ್ಮ ಅಹಿಂಸಾ ತತ್ವದಲ್ಲಿ ಪಟ್ಟು ಬಿಡದವರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿ ಮಹಾನ್ ಚೇತನರಾದರು.
ಸತ್ಯದೊಂದಿಗೆ ಜಾತ್ಯತೀತತೆಯೂ ಮಹಾತ್ಮ ಗಾಂಧಿಯವರ ಮತ್ತೊಂದು ಹೋರಾಟವಾಗಿ ಯಾವುದೇ ಧರ್ಮವು ಸತ್ಯದ ಮೇಲೆ ಏಕಸ್ವಾಮ್ಯವನ್ನು ಹೊಂದಿರಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಮಹಾತ್ಮ ಗಾಂಧಿಯವರು ನಿಸ್ಸಂಶಯವಾಗಿ ವಿವಿಧ ಧರ್ಮಗಳ ನಡುವೆ ಸೌಹಾರ್ದವನ್ನು ಹುಟ್ಟು ಹಾಕುವಂತೆ ಪ್ರೋತ್ಸಾಹಿಸಿದರು. ಇದೇ ಕಾರಣಕ್ಕೆ ಮಹಾತ್ಮಾ ಗಾಂಧಿಯವರು ಪ್ರಪಂಚದಾದ್ಯಂತ ಅನೇಕ ಅಂತರಾಷ್ಟ್ರೀಯ ನಾಯಕರ ಮೇಲೆ ಪ್ರಭಾವ ಬೀರಿದ್ದಾರೆ. ಅವರ ಹೋರಾಟ ಖಂಡಿತವಾಗಿಯೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೇಮ್ಸ್ ಬೆವ್ ಮತ್ತು ಜೇಮ್ಸ್ ಲಾಸನ್ ಹಾಗೂ ನೆಲ್ಸನ್ ಮಂಡೇಲಾದಂತಹ ವಿಶ್ವದ ಮಹಾನ್ ನಾಯಕರಿಗೆ ಪೂರ್ತಿಯ ಚಿಲುಮೆಯಾಗಿದೆ. ಇವರ ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟವು ವಿಶ್ವದ ಹಲವು ರಾಷ್ಟ್ರಗಳಲ್ಲಿನ ಸ್ವಾತಂತ್ರ್ಯದ ಹೋರಾಟಗಳ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿ ಶಾಂತಿ ರೂಪದಲ್ಲಿ ಪಡೆಯುವಂತೆ ಪ್ರೇರೇಪಿಸಿತು.
ವಿಶ್ವಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಶಾಂತಿಯ ಹೋರಾಟಗಳನ್ನು ಗೌರವಿಸಿ, ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ಅನ್ನು “ಅಹಿಂಸೆಯ ಅಂತರರಾಷ್ಟ್ರೀಯ ದಿನ” ವೆಂದು ಘೋಷಿಸಿದೆ. ಇದರೊಂದಿಗೆ, ವಿಶ್ವದ ಅನೇಕ ದೇಶಗಳು ಜನವರಿ 30 ಅನ್ನು ಅಹಿಂಸೆ ಮತ್ತು ಶಾಂತಿಯ ದಿನವಾಗಿ ಆಚರಿಸುತ್ತಾರೆ.
ಮಹಾತ್ಮ ಗಾಂಧೀಜಿಯವರ ಪ್ರಕಾರ, ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವುದು ಎಂದರೆ ಆತ್ಮ ಅಥವಾ ಸ್ವಯಂ ಎಂಬ ಕೆಲವು ಅತೀಂದ್ರಿಯ ಅಸ್ತಿತ್ವದ ಬಗ್ಗೆ ಕೆಲವು ಅಸಾಮಾನ್ಯ ಗ್ರಹಿಕೆಗಳ ಮೂಲಕ ಜ್ಞಾನವನ್ನು ಪಡೆಯುವುದು ಅಲ್ಲ, ಆದರೆ ನಿಸ್ವಾರ್ಥ ಪ್ರೀತಿ ಮತ್ತು ಜೀವನದ ನಡುವಿನ ವ್ಯತ್ಯಾಸದ ಬಗ್ಗೆ ಒಬ್ಬರ ಆಧ್ಯಾತ್ಮಿಕ ಅನುಭವಗಳ ಆಧಾರದ ಮೇಲೆ ವಿವೇಚನೆಯ ಸಹಾಯದಿಂದ ಜ್ಞಾನವನ್ನು ಪಡೆಯುವುದು ಎನ್ನುವುದಾಗಿದೆ.
1919 ಏಪ್ರಿಲ್ 13. ಪಂಜಾಬ್ನಲ್ಲಿ ನಡೆದ ಜಲಿಯನ್ವಾಲಾಬಾಗ್ನಲ್ಲಿ ಸೇರಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಲು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಆದೇಶಿಸುತ್ತಾನೆ. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳು 10 ನಿಮಿಷಗಳ ಕಾಲ ನಿರಂತರವಾಗಿ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ, ಮಹಿಳೆಯರು, ಮಕ್ಕಳು ಸೇರಿದಂತೆ 379 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಆ ದಿನ ಬ್ರಿಟಿಷರ ತುಕಡಿಯಲ್ಲಿ ಜನರಲ್ ಡಯರ್ ಬಿಟ್ಟರೆ ಬಹುತೇಕ ಎಲ್ಲಾ ಸಿಪಾಯಿಗಳು ಭಾರತೀಯರೇ ಆಗಿದ್ದರು. ಈ ಪ್ರಕರಣದಿಂದ ಗಾಂಧೀಜಿಗೆ, ಬ್ರಿಟಿಷರು ನಮ್ಮನ್ನು ಶೋಷಿಸುತ್ತಿರುವುದು ಅವರ ಶಕ್ತಿಯ ಕಾರಣದಿಂದಲ್ಲ, ಬದಲಾಗಿ ನಮ್ಮ ಸಹಕಾರದಿಂದ ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಆ ಕಾರಣಕ್ಕೆ ಜಲಿಯನ್ವಾಲಾಬಾಗ್ ಹತ್ಯಾಕಾಂಡ ವಿರೋಧಿಸಿ ಗಾಂಧಿ ‘ಅಹಿಂಸಾತ್ಮಕ ಅಸಹಕಾರ ಚಳವಳಿ’ಗೆ ಕರೆ ನೀಡುತ್ತಾರೆ. ಭಾರತೀಯರು ಎರಡು ವರ್ಷಗಳ ಕಾಲ ಬ್ರಿಟಿಷ್ ಪ್ರಭುತ್ವಕ್ಕೆ ಅಸಹಕಾರ ತೋರಿದರೆ ನಮ್ಮ ದೇಶ ಸ್ವತಂತ್ರಗೊಳ್ಳುತ್ತದೆ ಎಂದು ಘೋಷಿಸುತ್ತಾರೆ. ಆದರೆ ಈ ಚಳವಳಿ ಹಿಂಸಾತ್ಮಕ ಹಾದಿ ಹಿಡಿದಿದ್ದರಿಂದ ಮುಂದೆ ಅದನ್ನು ವಾಪಸ್ ಪಡೆಯುತ್ತಾರೆ.
ಹಾಗೆ ನೋಡುವುದಾದರೆ, ಮನುಷ್ಯ ಏಕೆ ಶೋಷಣೆ ಮಾಡುತ್ತಾನೆ ಎನ್ನುವ ಪ್ರಶ್ನೆಯನ್ನು ಆಧರಿಸಿ ಜಗತ್ತಿನ ಹಲವಾರು ತತ್ವಜ್ಞಾನಿಗಳು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಗಾಂಧಿ ಈ ಪ್ರಶ್ನೆಯನ್ನು ಮನುಷ್ಯ ಏಕೆ ಶೋಷಣೆಗೆ ಒಳಗಾಗುತ್ತಾನೆ ಎಂಬ ನೆಲೆಯಲ್ಲಿ ನಿರೂಪಿಸಿಕೊಳ್ಳುತ್ತಾರೆ. ಜಗತ್ತಿನ ಯಾವುದೇ ವ್ಯವಸ್ಥೆ ಅಂತರ್ಗತವಾಗಿ ಯಾವುದೇ ಅಧಿಕಾರ ಹೊಂದಿರುವುದಿಲ್ಲ, ಯಾವುದೇ ವ್ಯವಸ್ಥೆಯಿರಲಿ ಅದರ ಅಧಿಕಾರದ ಮೂಲವು ಅಲ್ಲಿ ಬದುಕುತ್ತಿರುವ ವ್ಯಕ್ತಿಗಳಲ್ಲಿಯೇ ಅಡಕವಾಗಿರುತ್ತದೆ. ವ್ಯಕ್ತಿ ತನ್ನಲ್ಲಿನ ಸಾಮರ್ಥ್ಯವನ್ನು ಮರೆತು ವ್ಯವಸ್ಥೆಗೆ ಶರಣಾಗುವುದರ ಮೂಲಕ ಶೋಷಣೆಗೆ ಒಳಗಾಗುತ್ತಾನೆ. ‘ಭಾರತೀಯರು ಬ್ರಿಟಿಷ್ ಆಳ್ವಿಕೆಗೆ ಒಳಗಾಗಿರುವುದು ಇದೇ ಕಾರಣಕ್ಕೆ. ಅವರು ನಮ್ಮನ್ನು ಆಳುತ್ತಿಲ್ಲ, ನಾವು ಆಳಿಸಿಕೊಳ್ಳಲ್ಪಡುತ್ತಿದ್ದೇವೆ’ ಎನ್ನುವುದು ಗಾಂಧೀಜಿಯವರ ಚಿಂತನೆಯಾಗಿತ್ತು.
ಆರಂಭದಲ್ಲಿ ವರ್ಣಾಶ್ರಮ ಧರ್ಮ ಮತ್ತು ಜಾತಿಗಳನ್ನು ಆದರ್ಶೀಕರಿಸಿ ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ದುಂಡುಮೇಜಿನ ಸಮ್ಮೇಳನ ಸೇರಿದಂತೆ ಅಂಬೇಡ್ಕರ್ ಜೊತೆ ನಡೆಸಿದ ಸುದೀರ್ಘ ಸಂವಾದದ ಭಾಗವಾಗಿ ‘ನಿಜವಾದ ವರ್ಣ ಯಾವುದೂ ಇಲ್ಲ. ನನ್ನಲ್ಲಿ ಶಕ್ತಿ ಇದ್ದಿದ್ದರೆ ಹಿಂದೂಗಳೆಲ್ಲಾ ಒಂದೇ ವರ್ಣದವರು ಎಂದು ಘೋಷಿಸಿಬಿಡುತ್ತಿದ್ದೆ’ ಎನ್ನುವಲ್ಲಿಗೆ ಬಂದು ತಲುಪುತ್ತಾರೆ.
ಒಂದು ಅರ್ಥದಲ್ಲಿ ಗಾಂಧೀಜಿ ನಿಲುವುಗಳ ಕುರಿತು ಅಂಬೇಡ್ಕರ್ ಎತ್ತಿದ ಪ್ರಶ್ನೆಗಳು ಧರ್ಮದ ಕುರಿತ ಸ್ವತಃ ಗಾಂಧಿಯವರ ಧೋರಣೆಯನ್ನೇ ಬದಲಿಸಿದ್ದವು. ಪರಿಣಾಮವಾಗಿ, ಪೂನಾ ಒಪ್ಪಂದದ ನಂತರ ಅಸ್ಪೃಶ್ಯತೆ ನಿರ್ಮೂಲನೆಯ ಕುರಿತು ಗಾಂಧಿ ವ್ಯಾಪಕ ಜನಾಂದೋಲನವನ್ನು ಆರಂಭಿಸಿದ್ದರು. ‘ಹರಿಜನರಿಗೆ ಪ್ರವೇಶವಿಲ್ಲದ ದೇವಾಲಯದಲ್ಲಿ ನಾನೂ ಕಾಲಿಡಲಾರೆ’ ಎಂದು ಉಡುಪಿ ಮಠ ಪ್ರವೇಶಿಸಲು ನಿರಾಕರಿಸಿದ್ದು ಒಂದು ನಿದರ್ಶನ ಅಷ್ಟೆ. ಆದರೆ ದುರಂತವೆಂದರೆ, ಗಾಂಧಿಯವರ ಮೇಲೆ ಒಟ್ಟು ಏಳು ಹತ್ಯಾ ಪ್ರಯತ್ನಗಳು ನಡೆದಿವೆ. ಅವುಗಳ ಪೈಕಿ ಐದು ಪ್ರಯತ್ನಗಳು ಅವರು ಅಸ್ಪೃಶ್ಯತೆಯನ್ನು ವಿರೋಧಿಸಿ ಆರಂಭಿಸಿದ ಹೋರಾಟದ ಕಾರಣಕ್ಕಾಗಿಯೇ, ಹಿಂದೂ ಮೂಲಭೂತವಾದಿಗಳು ನಡೆಸಿದ ಪ್ರಯತ್ನಗಳಾಗಿದ್ದವು. ಅದೃಷ್ಟವಶಾತ್ ಗಾಂಧಿ ಆರರಲ್ಲಿ ಪಾರಾಗಿದ್ದರು. ಆದರೆ ಏಳನೆಯ ಪ್ರಯತ್ನದಲ್ಲಿ ಗೋಡ್ಸೆ ಎಂಬ ಮತಾಂಧ ಯಶಸ್ವಿಯಾಗಿದ್ದ ಎಂದು ಗಾಂಧಿಯವರ ಚಿಂತನೆಗಳ ಕುರಿತು ಮಹತ್ವದ ಸಂಶೋಧನೆ ನಡೆಸಿರುವ ಬೀಕು ಪಾರೇಖ್ ವಿಶ್ಲೇಷಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮೂವತ್ತು ಬಾರಿ ಜೈಲಿಗೆ ಹೋಗಿದ್ದ ಗಾಂಧಿ, ಸ್ವಾತಂತ್ರ್ಯ ಬಂದಾಗ ಆ ಸಂಭ್ರಮದಲ್ಲಿ ಭಾಗಿಯೇ ಆಗಿರಲಿಲ್ಲ! ರಾಷ್ಟ್ರಪತಿ ಆಗುವಂತೆ ಅವರನ್ನು ನೆಹರೂ ಕೇಳಿದಾಗ ‘ನಾನು ಆ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ’ ಎಂದು ಹೇಳಿದ್ದರು. ‘ಈ ದೇಶ ಇಬ್ಭಾಗವಾದರೆ ಅದು ನನ್ನ ಶವದ ಮೇಲೆ ಆಗಬೇಕು’ ಎಂದಿದ್ದ ಗಾಂಧಿ, ಬದುಕಿದ್ದಾಗಲೇ ದೇಶ ವಿಭಜನೆಯ ಮೂಲಕ ದೇಶದಾದ್ಯಂತ ಅಪಾರ ಹಿಂಸೆಯನ್ನು ನೋಡಬೇಕಾಯಿತು.
‘ಅಧಿಕಾರ ವ್ಯವಸ್ಥೆಯು ಅಂತರ್ಗತ ಸಾಮರ್ಥ್ಯವಲ್ಲ; ಬದಲಾಗಿ, ಅಲ್ಲಿರುವ ಜನ ತಮ್ಮ ಸಹಕಾರದ ಮೂಲಕ ವ್ಯವಸ್ಥೆಗೆ ಅಧಿಕಾರ ನೀಡಿ ಅದನ್ನು ಶೋಷಕನನ್ನಾಗಿ ಮಾಡುತ್ತಿರುತ್ತಾರೆ. ಹಾಗಾಗಿ, ಶೋಷಣೆಗೆ ವ್ಯಕ್ತಿ ಕಾರಣವೇ ವಿನಾ ವ್ಯವಸ್ಥೆಯಲ್ಲ’ ಎಂಬ ಗಾಂಧೀಜಿರವರ ಮಾತು ಎಂತಹ ಅರ್ಥಗರ್ಬಿತವಾದದ್ದು ಅಲ್ಲವೇ ?
ಭಾರತೀಯರು ಮಹಾತ್ಮ ಗಾಂಧಿಯವರನ್ನು “ರಾಷ್ಟ್ರದ ಪಿತಾಮಹ” ಎಂದು ವಿವರಿಸುವ ಮೂಲಕ ಗೌರವಿಸುತ್ತಾರೆ. ಗಾಂಧೀಜಿ ಕಂಡ ಕನಸು ಮತ್ತು ಅವರ ಅಪ್ರತಿಮ ಹೋರಾಟ ಖಂಡಿತವಾಗಿಯೂ ಎಲ್ಲಾ ತಲೆಮಾರುಗಳಿಗೂ ಚಿರಸ್ಥಾಯಿಯಾಗಿ ಉಳಿಯುವುದರೊಂದಿಗೆ ಪ್ರೇರೇಪಿಸುತ್ತದೆ