ವೆನ್ಲಾಕ್ ಜಿಲ್ಲಾಸ್ಪತ್ರೆ ಹೈಟೆಕ್: ಬಡವರಿಗೆ ವರದಾನ
– ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡ
– ಮೊದಲ ದಿನವೇ 7 ಶಸ್ತ್ರಚಿಕಿತ್ಸೆ: ಡಿ.1ರಿಂದ ಶಸ್ತ್ರಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭ
NAMMUR EXPRESS NEWS
ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡ ಹೊಸ ಶಸ್ತ್ರಚಿಕಿತ್ಸಾ ಕಟ್ಟಡದಲ್ಲಿ ನ.6ರಿಂದ ಶಸ್ತ್ರಚಿಕಿತ್ಸೆಗಳನ್ನು ಪ್ರಾರಂಭಿಸಲಾಗಿದ್ದು, ಮೊದಲ ದಿನವೇ 7 ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ತಜ್ಞ ವೈದ್ಯ ಡಾ. ಸದಾನಂದ ಪೂಜಾರಿ ಹಾಗೂ ಆಸ್ಪತ್ರೆ ಸಿಬ್ಬಂದಿ ತಂಡ ಕಾರ್ಯಾರಂಭಕ್ಕೆ ಸಹಕಾರ ಮಾಡಿದ್ದಾರೆ. ಮೊದಲ ದಿವಸ ಡಾ. ಸುರೇಶ ಪೈ ತಂಡದವರಿಂದ ಥೋರಾಸಿಕ್ ಸರ್ಜರಿ ಮಾಡಲಾಯಿತು.
ಡಾ. ಹೇಮಲತಾ ಹಾಗೂ ಡಾ. ವಿಶ್ವ ವಿಜೇತ ತಂಡವು ಐದು ಜನರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದರು. ಡಾ. ಅರ್ಜುನ್ ಶೆಟ್ಟಿ ತಂಡವು ಮೆದುಳಲ್ಲಿ ರಕ್ತ ಹೆಪ್ಪು ಗಟ್ಟಿದ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿದರು. ಡಾ. ಸುರೇಶ ಭಟ್ ಅರವಳಿಕೆ ತಂಡದ ಮುಖ್ಯಸ್ಥರಾಗಿದ್ದು ಎಲ್ಲ ಶಸ್ತ್ರಚಿಕಿತ್ಸೆ ಯಾವುದೇ ತೊಂದರೆ ಆಗದ ಹಾಗೆ ನೆರವೇರಿಸಿದರು. ಶಸ್ತ್ರಚಿಕಿತ್ಸೆ ಸಂದರ್ಭ ನರ್ಸಿಂಗ್ ಅಧಿಕಾರಿಗಳಾದ ಶೈಲಾ, ಜೇಸಿಂತ, ಅಶ್ವಿನಿ, ರೇಷ್ಮಾ, ಅಲ್ವನ ಮಿನೇಜಸ್ ಇದ್ದರು.
ಡಿ.1 ರಿಂದ ಶಸ್ತ್ರಚಿಕಿತ್ಸಾ ಹಾಗೂ ಮೂಳೆ ವಿಭಾಗದ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭವಾಗಲಿದ್ದು, ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಕೊಠಡಿಗಳು ಹಾಗೂ ವಾರ್ಡ್ಗಳು ಈ ಭಾಗದ ಬಡವರಿಗೆ ವರದಾನ ಆಗಲಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆನ್ಲಾಕ್ ಜಿಲ್ಲಾಸ್ಪತ್ರೆ ಬಡವರಿಗೆ ವರದಾನ
ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಮೊದಲ ಸೇವಾ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ. ಲಕ್ಷ ಲಕ್ಷ ರೋಗಿಗಳಿಗೆ ವರದಾನವಾಗಿದೆ. ಸರ್ಕಾರ, ಎನ್.ಜಿ.ಓಗಳು, ಸಂಘ ಸಂಸ್ಥೆಗಳು, ದಾನಿಗಳ ನೆರವಲ್ಲಿ ಇನ್ನಷ್ಟು ಸೇವೆ ಬೇಕಿದೆ. ಈಗ ತೀರ್ಥಹಳ್ಳಿ, ಭದ್ರಾವತಿ ಸೇರಿ ಅನೇಕ ಕಡೆ ಉತ್ತಮ ಹಾಗೂ ಮಾದರಿ ಆಸ್ಪತ್ರೆ ಮಾಡಿರುವ ಡಾ.ಶಿವಪ್ರಕಾಶ್ ಡಿ.ಎಸ್ ವೆನ್ಲಾಕ್ ಅಧೀಕ್ಷಕರಾಗಿದ್ದು ಮತ್ತಷ್ಟು ಯೋಜನೆ ಹಾಕಿಕೊಂಡಿದ್ದಾರೆ.