ಈ ಬಾರಿ 14ರ ಬದಲು ಜ.15ರಂದು ಸಂಕ್ರಾಂತಿ ಆಚರಣೆ ಏಕೆ?
-ಭಾರತದ ನಾನಾ ರಾಜ್ಯಗಳಲ್ಲಿ ಹೇಗೆ ಆಚರಿಸಲಾಗುತ್ತದೆ?
NAMMUR EXPRESS NEWS
ಭಾರತೀಯರು ಹಾಗೂ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಮಕರ ಸಂಕ್ರಾಂತಿ ಅತ್ಯಂತ ಮಹತ್ವದ ಹಾಗೂ ಪವಿತ್ರ ಹಬ್ಬ. ಇದು ಉತ್ತರಾಯಣದ ಆರಂಭದ ಸೂಚಕ. ಜತೆಗೆ ಸುಗ್ಗಿಯ ಸಂಭ್ರಮಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ವಿವಿಧತೆಯಲ್ಲಿ ಏಕತೆಯ ಸಾರವನ್ನು ಪ್ರತಿಬಿಂಬಿಸುವ ಆಚರಣೆ. ಸೂರ್ಯ ದೇವರು, ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಏಕಕಾಲಕ್ಕೆ ಪೂಜಿಸುವ ದಿನವೂ ಹೌದು. ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಈ ವೇಳೆಯಲ್ಲಿ ಮರಣವನ್ನಪ್ಪಿ ಮೋಕ್ಷ ಪಡೆಯುತ್ತಾರೆ.
ಸಂಕ್ರಾಂತಿ ದಿನ ದಿನ ಸೂರ್ಯನ ಉತ್ತರ ದಿಕ್ಕಿನ ಚಲನೆ ಆರಂಭಗೊಳ್ಳುತ್ತದೆ. ಹೀಗಾಗಿ ಈ ದಿನಕ್ಕೆ ಸಾಕಷ್ಟು ಮಹತ್ವಗಳಿವೆ. ಪವಿತ್ರ ನದಿ ಸ್ನಾನಗಳು, ಸಮುದ್ರ ಸ್ನಾನಗಳು, ಶುದ್ಧೀಕಣ, ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಕೆಯಂಥ ವಿಧಿವಿಧಾನಗಳನ್ನು ನಡೆಸುತ್ತಾರೆ. ದೇಶದ ಪ್ರಮುಖ ಪುಣ್ಯ ನದಿಗಳಲ್ಲಿ ಮಿಂದು ಪುಣ್ಯ ಗಿಟ್ಟಿಸಿಕೊಳ್ಳುತ್ತಾರೆ. ಜಗತ್ತಿಗೆ ಬೆಳಕು ನೀಡು ಸೂರ್ಯ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಜನನ, ಮರಣ ಹಾಗೂ ಪುನರ್ಜನ್ಮದ ಚಕ್ರದಿಂದ ಮುಕ್ತಿ ಪಡೆಯುವ ದಿನ ಇದೆಂಬ ಎಂಬ ನಂಬಿಕೆಯಿದೆ.
ಮಕರ ಸಂಕ್ರಾಂತಿ ಈ ವರ್ಷ ಯಾವ ದಿನದಂದು?
ಮಕರ ಸಂಕ್ರಾಂತಿಯನ್ನು ಸಾಮಾನ್ಯವಾಗಿ ಜನವರಿ 14 ರಂದು ಆಚರಿಸಲಾಗುತ್ತದೆ. ಆದಾಗ್ಯೂ, ಈ ವರ್ಷ ಅಧಿಕ ವರ್ಷವಾಗಿರುವ ಕಾಣ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಈ ರೀತಿ 15ರಂದು ಮಕರ ಸಂಕ್ರಾಂತಿ ಬರುತ್ತದೆ.
ಶುಭ ಮುಹೂರ್ತ ಯಾವಾಗ?
ಪಂಚಾಂಗದ ಪ್ರಕಾರ ಜನವರಿ 15 ರಂದು ಒಟ್ಟು 10 ಗಂಟೆ 31 ನಿಮಿಷಗಳಷ್ಟು ಹೊತ್ತು ಪುಣ್ಯಕಾಲ ಇದೆ. ಈ ಕಾಲಾವಧಿಯು ಧಾರ್ಮಿಕ ಆಚರಣೆಗಳಲ್ಲಿ ತೊಡಗಲು, ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಸೂರ್ಯ ದೇವರಿಗೆ ಗೌರವ ಸಲ್ಲಿಸಲು ಸೂಕ್ತ ಸಮಯ.
ಮಕರ ಸಂಕ್ರಾಂತಿ ಪುಣ್ಯಕಾಲ – ಬೆಳಿಗ್ಗೆ 07:15 ರಿಂದ ಸಂಜೆ 05:46 (10 ಗಂಟೆ 31 ನಿಮಿಷಗಳು)
ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ – ಬೆಳಿಗ್ಗೆ 07:15 ರಿಂದ 09:00 (01 ಗಂಟೆ 45 ನಿಮಿಷಗಳು)
ಸಂಕ್ರಾಂತಿ ಸಮಯ: ಜನವರಿ 15, ಮುಂಜಾನೆ 02:54
ಭಾರತದ ನಾನಾ ರಾಜ್ಯಗಳಲ್ಲಿ ಹೇಗೆ ಆಚರಿಸಲಾಗುತ್ತದೆ?
ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ವಿವಿಧ ಹೆಸರುಗಳು ಮತ್ತು ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ. ಈ ಹಬ್ಬದಂದು ಶ್ರಮಜೀವಿ ರೈತರು ತಮ್ಮ ನೇಗಿಲು ಮತ್ತು ಎತ್ತುಗಳಿಗೆ ಗೌರವ ಸಲ್ಲಿಸುತ್ತಾರೆ. ಈ ಹಬ್ಬಕ್ಕೂ ಕೃಷಿಗೂ ಜೋರು ನಂಟಿದೆ. ಮಕರ ಸಂಕ್ರಾಂತಿ ದಾನಕ್ಕೂ ಹೆಸರುವಾಸಿಯಾಗಿದೆ.
ಎಳ್ಳು, ಬೆಲ್ಲ ಬೀರುವುದು: ಕರ್ನಾಟದಲ್ಲಿ ಮಕರ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಎಳ್ಳು- ಬೆಲ್ಲ ಬೀರುವುದು ಪ್ರಮುಖ ಆಚರಣೆಯಾಗಿದೆ. ಜತೆಗೆ ಕಬ್ಬು ತಂದು ಪೂಜೆ ಮಾಡುತ್ತಾರೆ. ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚುತ್ತಾರೆ. ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಮಾಡಲಾಗುತ್ತದೆ.
ಗಾಳಿಪಟ ಉತ್ಸವ: ಗುಜರಾತ್ ನಲ್ಲಿ ಈ ಹಬ್ಬವನ್ನು ಗಾಳಿಪಟ ಹಾರಿಸುವ ಮೂಲಕ ಆಚರಿಸಲಾಗುತ್ತದೆ. ಇದು ಸಂತೋಷ ಹಾಗೂ ವಿನೋದದ ಹಬ್ಬವಾಗಿರುತ್ತದೆ
ಎಳ್ಳು ದಾನ : ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ದಿನ ಪುಣ್ಯ ಸ್ನಾನ ಮಾಡಿದ ನಂತರ ಜನರು ಎಳ್ಳು ದಾನ ಮಾಡುತ್ತಾರೆ. ಗಂಗಾಸಾಗರದಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ.
ಮುತ್ತೈದೆಯರ ಹಬ್ಬ : ವಿವಾಹಿತ ಮಹಿಳೆಯರು ಮದುವೆಯಾದ ಮೊದಲ ವರ್ಷದ ಸಂಕ್ರಾಂತಿಯಂದು ಇತರ ವಿವಾಹಿತ ಮಹಿಳೆಯರಿಗೆ ಹತ್ತಿ, ಎಣ್ಣೆ ಮತ್ತು ಉಪ್ಪನ್ನು ದಾನ ಮಾಡುತ್ತಾರೆ. ಅವರಿಗೆ ಇದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ.