ತೀರ್ಥಹಳ್ಳಿ ಟಾಪ್ ನ್ಯೂಸ್
ಬ್ಯಾಂಕಿನ ಕೋಟಿ ಕೋಟಿ ನುಂಗಿದ್ದ ಆರಗದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
– ಆನ್ಸೆನ್ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದ: ಆತ್ಮಹತ್ಯೆಗೆ ಮುಂದಾಗಿದ್ದ
– ತೂದೂರು ಕಾಡಿನಲ್ಲಿ ಸಿಕ್ಕ ಶವದ ಗುರುತು ಪತ್ತೆ!
– ತೀರ್ಥಹಳ್ಳಿಯ ಮೇಳಿಗೆಯಲ್ಲಿ ಹೆಬ್ಬಾವು ಹಿಡಿದ ಯುವಕರು!
– ತೀರ್ಥಹಳ್ಳಿಯಿಂದ ಅಕ್ರಮ ಗೋ ಸಾಗಣೆ?
NAMMUR EXPRESS NEWS
ತೀರ್ಥಹಳ್ಳಿ: ಹಣ ಮಾಡುವ ದುರಾಸೆಗೆ ಬಿದ್ದು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಕೋಟಿ ಕೋಟಿ ಹಣ ವಂಚನೆ ಮಾಡಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿಂದೆ ಸಾಗರದಲ್ಲಿ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಇದೀಗ ದುರಂತ ಅಂತ್ಯ ಕಂಡಿದ್ದಾನೆ.
ತೀರ್ಥಹಳ್ಳಿ ತಾಲೂಕಿನ ಆರಗದ ಸುನಿಲ್ (35 ವರ್ಷ) ಯಡೂರಿನ ಕೆನರಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 8 ಅಕೌಂಟ್ ಗಳಿಂದ ಠೇವಣಿ ಇಟ್ಟಿದ್ದ ಸುಮಾರು 1 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದ. ಈ ಬಗ್ಗೆ 2023 ಡಿಸೆಂಬರ್ ನಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸುನಿಲ್ ಜೈಲಿಗೆ ಸಹ ಹೋಗಿದ್ದ. ನಂತರ ಬೇಲ್ ಮೇಲೆ ಹೊರ ಬಂದಿದ್ದ ಈತ ಆನ್ಸೆನ್ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಆನ್ಲೈನ್ ವ್ಯವಹಾರ ನಡೆಸಿ ಹಣ ಕಳೆದುಕೊಂಡ ಸುನಿಲ್ ಗುರುವಾರ ಮತ್ತೆ ವಿಷ ಸೇವಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
– ತೀರ್ಥಹಳ್ಳಿಯ ಮೇಳಿಗೆಯಲ್ಲಿ ಹೆಬ್ಬಾವು ಹಿಡಿದ ಯುವಕರು!
ತೀರ್ಥಹಳ್ಳಿ: ಹೆಬ್ಬಾವೊಂದನ್ನು ಸ್ಥಳೀಯರೇ ಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ಮೇಳಿಗೆಯಲ್ಲಿ ನಡೆದಿದೆ. ತಾಲೂಕಿನ ಮೇಳಿಗೆಯ ಕೆರೆದಂಡೆ ಬಳಿ ಇರುವ ಅಡಿಗೆ ಕಂಟ್ರಾಕ್ಟರ್ ಮಹೇಶ್ ಎಂಬುವರ ಮನೆ ಪಕ್ಕದ ಮರದಲ್ಲಿ 12 ರಿಂದ 13 ಅಡಿ ಉದ್ದದ ಅಂದಾಜು 30 ಕೆಜಿ ತೂಕದ ಹೆಬ್ಬಾವೊಂದು ಮರವನ್ನು ಏರಿ ಕುಳಿತಿತ್ತು. ಅದನ್ನು ನೋಡಿ ವಿಷಯ ತಿಳಿದು ಕಂತುಗದ್ದೆ ಪ್ರವೀಣ್ ಎಂಬುವರು ಅದನ್ನು ಹಿಡಿದು ಹತ್ತಿರದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಸ್ಥಳೀಯ ಯುವಕರು ಕೂಡ ಹಾಜರಿದ್ದರು.
– ತೀರ್ಥಹಳ್ಳಿ: ತೂದೂರಿನ ಬಳಿ ಶವ ಪತ್ತೆ: ಕಾಣೆಯಾಗಿದ್ದವನ ಸಾವು
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತೂದೂರು ಸರ್ಕಾರಿ ಶಾಲೆಯ ಹಿಂದೆ ಇರುವ ತುಂಗಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಮೃತನನ್ನು ಹೊದಲ ಕುಟ್ರ ಗ್ರಾಮದ ಕೃಷ್ಣಮೂರ್ತಿ ಎನ್ನಲಾಗಿದೆ..ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತೀರ್ಥಹಳ್ಳಿ: ಗೋವುಗಳನ್ನು ಕಳ್ಳ ಸಾಗಾಣಿಕೆ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಗೋವುಗಳ ಕಳ್ಳತನ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ರಾತ್ರಿಯೊಂದು ಘಟನೆ ನಡೆದಿದೆ.
ಕೇರಳ ಮೂಲದ ವಾಹನವೊಂದರಲ್ಲಿ ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡಿರುವ ಬಗ್ಗೆ ದೂರು ಕೇಳಿಬಂದಿದೆ. ಮಾಳೂರು ಠಾಣಾ ವ್ಯಾಪ್ತಿಯಿಂದ ಹೊರಟ ವಾಹನವೊಂದು ಗಾಜನೂರು ಗೇಟ್ ಬಳಿ ಬಂದಿದ್ದು, ಗೇಟ್ ಬಂದಾಗಿದ್ದರಿಂದ ಪುನಃ ಮಂಡಗದ್ದೆ ಕಡೆಗೆ ವಾಪಸ್ಸು ಹೊರಟಿದೆ. ಆನಂತರ ಈ ವಾಹನ ಪತ್ತೆಯಾಗಿಲ್ಲ. ಮಾಹಿತಿ ಪ್ರಕಾರ, ಬೇರೆ ವಾಹನಕ್ಕೆ ಗೋವುಗಳನ್ನು ಡಂಪ್ ಮಾಡಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಈ ಭಾಗಗಳಲ್ಲಿ ನೂರಾರು ಗೋವುಗಳು ಕಾಣೆಯಾಗಿವೆ. ಕಾಡಿಗೆ ಹೋದ ದನಕರುಗಳನ್ನು ಹುಲಿ ಚಿರತೆ ಹಿಡಿದಿರಬಹುದು ಎಂಬ ಅನುಮಾನದಲ್ಲಿ ಕೆಲವರು ಠಾಣೆಗೆ ದೂರು ಕೊಡುತ್ತಿಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ರಾತ್ರಿ ಹೊತ್ತು ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ.