ಕುಪ್ಪಳಿಯಲ್ಲಿ ವೈಭವದ ಮಂತ್ರಮಾಂಗಲ್ಯ: ಎಲ್ಲೆಡೆ ಜನಾಕ್ರೋಶ!
– ಕುವೆಂಪು ಹೇಳಿದ್ದೇನು…ಇಲ್ಲಿ ಆಗ್ತಿರೋದು ಏನು…?
– ಶ್ರೀಮಂತ ಕುಟುಂಬಗಳಿಗೆ ಮಾತ್ರ ಮದುವೆ ಅವಕಾಶ?!
– ಹೈಟೆಕ್ ಮದುವೆ: ಮಂತ್ರ ಮಾಂಗಲ್ಯ ನಿಯಮ ಲೆಕ್ಕಕ್ಕಿಲ್ಲ
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ಹುಟ್ಟೂರು ಕುಪ್ಪಳಿಯಲ್ಲಿ ಮಂತ್ರ ಮಾಂಗಲ್ಯ ಆಗಬೇಕು. ಸರಳ ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕು ಎಂಬುದು ಅದೆಷ್ಟೋ ಜನರ ಕನಸು. ಆದರೆ ಇದೀಗ ಕಳೆದ 2 ದಿನಗಳ ಹಿಂದೆ ನಡೆದ ಮದುವೆ ಇದೀಗ ರಾಜ್ಯದ ಕುವೆಂಪು ಅಭಿಮಾನಿಗಳು ಮತ್ತು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.
ವಿಚಾರಗಳನ್ನು ಪಸರಿಸುತ್ತ ಉತ್ತಮ ಹೆಸರು ಗಳಿಸಿದ್ದ ಕುಪ್ಪಳಿ ಪರಿಸರದಲ್ಲಿ ವೈಭವದ ಮದುವೆ ಆಯೋಜನೆಗೆ ಅವಕಾಶ ನೀಡುವ ಮೂಲಕ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವಿವಾದವನ್ನು ಎಳೆದುಕೊಂಡಿದೆ. ಅಲ್ಲದೆ ಪ್ರತಿಷ್ಠಾನಕ್ಕೆ ಸಂಬಂಧಪಟ್ಟವರ ಮದುವೆ ಆಗಿದ್ದು ಎಲ್ಲಿಯೂ ಮಂತ್ರ ಮಾಂಗಲ್ಯದ ನಿಯಮ ಪಾಲನೆ ಮಾಡದಿರುವುದು ಇದೀಗ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದೆ. ಆಡಂಬರದ ಅಲಂಕಾರ, ಊಟ, ಹೈಟೆಕ್ ಸೌಲಭ್ಯ ಹೆಸರಿಗೆ ಮಾತ್ರ ಮಂತ್ರ ಮಾಂಗಲ್ಯ. ಇಂತಹ ವಿಡಿಯೋ ಆ ದಿನವೇ ವೈರಲ್ ಆಗಿದ್ದವು. ಇದೀಗ ರಾಜ್ಯ ಮಟ್ಟದಲ್ಲಿ ಕುವೆಂಪು ಅವರ ಮನೆ ಸಮೀಪದಲ್ಲಿ ನಡೆದ ಮದುವೆ ಸುದ್ದಿ ಮಾಡಿದೆ.
ಆಗಿದ್ದೇನು?
ಕುವೆಂಪು ಪ್ರತಿಷ್ಠಾನದ ಸಮ ಕಾವ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಸಂಬಂಧಿಯ ಮದುವೆ ಜ.24ರಂದು ಸಂಜೆ ಕುಪ್ಪಳಿಯ ಹೇಮಾಂಗಣದಲ್ಲಿ ‘ಮಂತ್ರ ಮಾಂಗಲ್ಯ’ ಹೆಸರಿನಲ್ಲಿ ನಡೆದಿದೆ. ಆದರೆ, ಇಡೀ ಹೇಮಾಂಗಣ, ಕುಪ್ಪಳಿ ಪರಿಸರವನ್ನು ರೆಸಾರ್ಟ್ನಂತೆ ಪರಿವರ್ತಿಸಿ ಅಲಂಕರಿಸಿದ್ದು, 500ಕ್ಕೂ ಹೆಚ್ಚು ಜನ, ನೂರಾರು ಕಾರುಗಳು, ಭರ್ಜರಿ ಭೋಜನದ ಮೂಲಕ ಕುವೆಂಪು ಪ್ರತಿಪಾದಿಸಿದ ಮಂತ್ರ ಮಾಂಗಲ್ಯದ ಬುಡಮೇಲು ಪರಿಕಲ್ಪನೆಯನ್ನೇ ಮಾಡಲಾಗಿದೆ. ಪ್ರತಿಷ್ಠಾನದ ಸಮ ಕಾರ್ಯದರ್ಶಿಯಂತಹ ಜವಾಬ್ದಾರಿ ಸ್ಥಾನದಲ್ಲಿರುವವರ ಸಂಬಂಧಿಕರೇ ಕುವೆಂಪು ಆಶಯಕ್ಕೆ ವಿರುದ್ದವಾಗಿ ಮಂತ್ರಮಾಂಗಲ್ಯದ ಹೆಸರಲ್ಲಿ ಅದ್ದೂರಿ ಮದುವೆ ಮಾಡಿರುವುದು ಇದೀಗ ವ್ಯಾಪಕ ಟೀಕೆಗೂ ಕಾರಣವಾಗಿದೆ.
ಬಡವರ ಮದುವೆಗೆ ಅವಕಾಶ ಇಲ್ಲ?!
ಕುಪ್ಪಳಿಯ ಕವಿಮನೆ, ಕವಿಶೈಲದ ಅಚ್ಚುಕಟ್ಟಾದ ನಿರ್ವಹಣೆ ಬಗ್ಗೆ ಇಲ್ಲಿಗೆ ಭೇಟಿ ನೀಡುವ ಕುವೆಂಪು ಅಭಿಮಾನಿಗಳು ಹೆಮ್ಮೆಪಡುತ್ತಿದ್ದರು. ಆದರೆ, ಇತ್ತೀಚೆಗೆ ಈ ಪರಿಸರದಲ್ಲಿ ಕುವೆಂಪು ಆದರ್ಶ, ವಿಶ್ವಮಾನವ ಸಂದೇಶಕ್ಕೆ ಅಪಚಾರವೆಸಗುವ ಘಟನೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳಿದ್ದವು. ಇದಕ್ಕೆಲ್ಲ ಸಾಕ್ಷಿಯೆಂಬಂತೆ ಕುವೆಂಪು ಪ್ರತಿಷ್ಠಾನದ ಸಮ ಕಾವ್ಯದರ್ಶಿಯ ಸಂಬಂಧಿಕರ ಮದುವೆಗೆ ಕುಪ್ಪಳಿಯ ಹೇಮಾಂಗಣ ವನ್ನು ರೆಸಾರ್ಟ್ ಆಗಿ ಪರಿವರ್ತಿಸಿದ್ದು ಕುವೆಂಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಇನ್ನು ಶ್ರೀಮಂತ ಕುಟುಂಬಗಳಿಗೆ ಮಾತ್ರ ಮಂತ್ರ ಮಾಂಗಲ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಬಡ ಕುಟುಂಬಗಳಿಗೆ ದಿನಾಂಕ ಬುಕ್ ಆಗಿದೆ ಎಂದು ಸುಳ್ಳು ಹೇಳಿ ಕಳಿಸಲಾಗುತ್ತಿದೆ ಎಂಬ ದೊಡ್ಡ ಆರೋಪ ಕೂಡ ಕೇಳಿ ಬಂದಿದೆ. ಕುವೆಂಪು ವಿಶ್ವ ಮಾನವ ಸಂದೇಶ ಕೂಡ ಇಲ್ಲಿ ಕೆಲವರ ಹಿತಾಸಕ್ತಿಗೆ ಬಲಿ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕವಿನೆಲದಲ್ಲಿ ಮೋಜು ಮಸ್ತಿ
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಧು ಮತ್ತು ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವರನ ಮಂತ್ರಮಾಂಗಲ್ಯಕ್ಕೆ ಕುಪ್ಪಳಿಯ ಹೇಮಾಂಗಣ ಮತ್ತು ಸುತ್ತಲಿನ ಪರಿಸರವನ್ನು ಕಾರ್ಪೊರೇಟ್ ಶೈಲಿಯಲ್ಲಿ ಅಲಂಕರಿಸಲಾಗಿತ್ತು. ಮದುವೆ ಹೆಸರಿನಲ್ಲಿ ನಡೆಯುವ ದುಂದುವೆಚ್ಚ, ಕಂದಾಚಾರ ತಡೆಯುವ ಉದ್ದೇಶದಿಂದ ಮಂತ್ರಮಾಂಗಲ್ಯ ಎಂಬ ಸರಳ ವಿಧಾನವನ್ನು ಕುವೆಂಪು ಪರಿಚಯಿಸಿದ್ದು, ನಾಡಿನಾದ್ಯಂತ ಸಹಸ್ರಾರು ಜನ ಈ ಮಾದರಿಯನ್ನು ಅನುಸರಿಸಿದ್ದರು. ಕಳೆದೆರಡು ದಿನಗಳಿಂದ ಈ ಹೋಮ್ ಸ್ಟೇಗಳಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಗುಂಡು ತುಂಡಿನ ಸಮಾರಾಧನೆಯೂ ನಡೆದಿದೆ. ಹೀಗೆ ಪಾನಮತ್ತರಾದ ಕೆಲವರು ಜ.24 ರಂದು ಹೇಮಾಂಗಣದಲ್ಲಿ ಆಯೋಜಿಸಿದ್ದ ಸಂಗೀತ ರಸಸಂಜೆಯಲ್ಲಿ ಕುಣಿದು ಕುಪ್ಪಳಿಸಿದ್ದು, ವಿಡಿಯೊ ಲಭ್ಯ ವಾಗಿದೆ. ಕುಪ್ಪಳಿಯನ್ನು ಮೋಜು ಮಸ್ತಿಯ ತಾಣವನ್ನಾಗಿ ಪರಿವರ್ತಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಪ್ರತಿಷ್ಠಾನದ ಸಮ ಕಾರ್ಯದರ್ಶಿ ಹೇಳಿದ್ದೇನು?
ಕುಪ್ಪಳಿಯಲ್ಲಿ ಜ.24ರಂದು ಸಂಜೆ ನಡೆದ ಮಂತ್ರ ಮಾಂಗಲ್ಯ ವಿವಾಹ ಸ್ವಲ್ಪ ಅದ್ದೂರಿಯಾಗಿತ್ತು. ಸುಮಾರು 200 ಜನ ಭಾಗವಹಿಸಿದ್ದರು. ಮದುವೆ ನನ್ನ ಸಂಬಂಧಿಕರದ್ದೇ. ಆದರೆ, ಅದ್ದೂರಿ ಮದುವೆಯ ಸಂಗತಿ ಗೊತ್ತಿರಲಿಲ್ಲ. ಅಲ್ಲಿಗೆ ತೆರಳಿದಾಗ ಇದು ತಿಳಿಯಿತು. ಇನ್ನು ಇಂತಹ ಮದುವೆಗೆ ಪ್ರತಿಷ್ಠಾನ ಅವಕಾಶ ನೀಡುವುದಿಲ್ಲ ಎಂದು ಕಡಿದಾಳ್ ಪ್ರಕಾಶ್, ಸಮ ಕಾದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹೇಳಿದ್ದಾರೆ.