ಕ್ಷೇತ್ರ ಅಭಿವೃದ್ಧಿಯಲ್ಲಿ ಆರಗ ಫೇಲ್: ಯುವ ಕಾಂಗ್ರೆಸ್
– ಆರಗ ಜ್ಞಾನೇಂದ್ರ ಕಾರ್ಯಕ್ರಮ ಸುತ್ತುವ ಬದಲು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚಿಸಲಿ: ಆದರ್ಶ ಹುಂಚದಕಟ್ಟೆ
– ಸಂದೇಶ್ ಜವಳಿಗೆ ಬಡವರ ಕಲೆ ಹುಲಿವೇಷ ಕಂಡರೆ ಆಗಲ್ಲ: ಅಮರನಾಥ ಶೆಟ್ಟಿ
NAMMUR EXPRESS NEWS
ತೀರ್ಥಹಳ್ಳಿ: ನಾನು ಗೃಹ ಸಚಿವ ಆಗಿದ್ದಾಗ ನಾಲ್ಕು ಸಾವಿರ ಕೋಟಿ ತಂದಿದ್ದೇನೆ ಎಂದು ಜ್ಞಾನೇಂದ್ರ ಅವರು ಪದೇ ಪದೇ ಹೇಳುತ್ತಾರೆ. ಆದರೆ ಅದು ಯಾವಾಗ? ಎಲ್ಲಿ ಹೋಯಿತು? ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಆದರ್ಶ ಹುಂಚದಕಟ್ಟೆ ಪ್ರಶ್ನಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಗಾಂಧಿ ಭವನದಲ್ಲಿ ನ.18ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ತಂದ ಹಣದಿಂದ ಸೋರುವ ಕಟ್ಟಡ, ಕುಸಿದು ಬಿದ್ದ ಸೇತುವೆ, ತೊಳೆದು ಹೋದ ರಸ್ತೆ, ಹಾಗೂ ಕಂಟ್ರಾಕ್ಟರ್ ಗಳಿಗೆ ಈಗಲೂ ಹಣ ಕೊಡಬೇಕಿದೆ. ಬೇರೆಯವರಿಗೆ ಬೆರಳು ತೋರಿಸುವುದು ಬಿಡಬೇಕು, ಪ್ರತಿಯೊಂದಕ್ಕೂ ರಾಜಕೀಯ ಮಾಡದೇ ಇರುವಷ್ಟು ದಿನ ತೀರ್ಥಹಳ್ಳಿಗೆ ಅಭಿವೃದ್ಧಿ ಮಾಡುವತ್ತ ಗಮನ ಹರಿಸಬೇಕು ಎಂದರು.
ಅಭಿವೃದ್ಧಿಗೆ ಈಗಿನ ಕಾಂಗ್ರೆಸ್ ಸರ್ಕಾರದ ಸಹಕಾರವಿಲ್ಲ, ಹಾಗಾಗಿ ರಸ್ತೆ ಕಾಮಗಾರಿ ಆಗ್ತಾ ಇಲ್ಲ ಎಂದು ಇತ್ತೀಚಿಗೆ ಮಾಧ್ಯಮದ ಜೊತೆಗೆ ಮಾತನಾಡುವಾಗ ಹೇಳಿದ್ದರು. ಆದರೆ ಇವರ ಸರ್ಕಾರ ಹಾಗೆ ಇವರೇ ಗೃಹಸಚಿವರಾಗಿದ್ದ ಸಂದರ್ಭದಲ್ಲೂ ಸಹ ಆ ರಸ್ತೆ ಸರಿಪಡಿಸಿರಲಿಲ್ಲ ಎಂದರು.
ಎರಡು ಸಾವಿರ ಗೃಹಲಕ್ಷ್ಮಿ ಹಣ ಕೊಡುತ್ತಿರುವ ಕಾರಣದಿಂದ ಅಭಿವೃದ್ಧಿಗೆ ಹಣ ಬರುತ್ತಿಲ್ಲ ಎಂದು ಶಾಸಕರು ಹೇಳಿದ್ದಾರೆ. ಆದರೆ ತೀರ್ಥಹಳ್ಳಿಗೂ ಕಾಂಗ್ರೆಸ್ ಸರ್ಕಾರದಿಂದ 35 ಕೋಟಿಗೂ ಹೆಚ್ಚು ಹಣ ಬಂದಿದೆ. 13.5 ಕೋಟಿ ವಿಶೇಷ ಅನುದಾನ ಕಾಂಗ್ರೆಸ್ ಸರ್ಕಾರ ನೀಡಿದೆ. ಜೆಡಿ ಅನುದಾನ 85 ಲಕ್ಷ, ನೀರಾವರಿ ಅನುದಾನ 91 ಲಕ್ಷ ಗ್ರಾಮ ಸಡಕ್ ಯೋಜನೆಯಲ್ಲಿ ಒಂದು ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ 1 ಕೋಟಿ, ಶಿಕ್ಷಣ ಇಲಾಖೆಯಲ್ಲಿ 4.5 ಕೋಟಿ, ತಾಲೂಕು ಪಂಚಾಯತ್ 4.5 ಕೋಟಿ, ಹಾಗೆ ಕಳೆದ ಐದು ವರ್ಷದಲ್ಲಿ ಆಗದೇ ಇದ್ದ 100 ಮಕ್ಕಳ ಬಿಸಿಎಂ ಹಾಸ್ಟೆಲ್ ಅನ್ನು ಈ ಸರ್ಕಾರ ಕೊಟ್ಟಿದೆ ಇಷ್ಟು ಅನುದಾನ ಬಂದರೂ ಸಹ ಹಣ ಬಂದಿಲ್ಲ ಎನ್ನುತ್ತಾರೆ ಎಂದು ತಿಳಿಸಿದರು.
ವಿಶೇಷ ಅನುದಾನ ತರುವಲ್ಲಿ ಶಾಸಕರು ವಿಫಲ ಆಗಿದ್ದಾರೆ. ರಸ್ತೆಯನ್ನು ಮರಳು ಮಾಫಿಯಾದವರು ಹಾಳು ಮಾಡಿದ್ದಾರೆ ಎಂದು ಹೇಳುತ್ತಾರೆ. ಅದನ್ನು ಯಾರಿಗೆ ಹೇಳಿ ರಸ್ತೆ ಸರಿಪಡಿಸ ಬೇಕೋ ಆ ಕೆಲಸ ಮಾಡಬೇಕು. ಶಾಸಕರ ಕೆಲಸ ಬರಿ ಪಕ್ಷದ ಕೆಲಸ ಆಗಿರಲ್ಲ, ಕ್ಷೇತ್ರದ ಕೆಲಸ ಆಗಿರುತ್ತದೆ. ಜಿಲ್ಲೆಯ ಸೊರಬ, ಭದ್ರಾವತಿ, ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರಕ್ಕೆ ಹಣ ಬಂದಿದೆ ಆದರೆ ತೀರ್ಥಹಳ್ಳಿಗೆ ಯಾಕೆ ಬಂದಿಲ್ಲ ಎಂದರು.
ಶಾಸಕರು ಮದುವೆ, ಹಾಗೂ ಇತರೆ ಕಾರ್ಯಕ್ರಮ, ಸಭೆ ಸಮಾರಂಭಕ್ಕೆ ಹೋಗುತ್ತಿದ್ದಾರೆ ಬಿಟ್ಟರೆ ಈಗಿನ ಸರ್ಕಾರದ ಯಾವ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿಲ್ಲ. ಗ್ಯಾರೆಂಟಿ ಯೋಜನೆ ಆರಂಭವಾಗಿದ್ದರಿಂದ ಅದರ ಬಗ್ಗೆ ಅಪಪ್ರಚಾರ ಮಾಡುತ್ತಲೇ ನಮ್ಮ ಶಾಸಕರು ಬಂದಿದ್ದಾರೆ ಎಂದರು.
ತೀರ್ಥಹಳ್ಳಿ ತಾಲೂಕಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಲ್ಲಿ 10 ಕೋಟಿ, ಗೃಹಜ್ಯೋತಿ ಯೋಜನೆಯಲ್ಲಿ 2 ಕೋಟಿ ಹೀಗೆ ಗ್ಯಾರಂಟಿ ಯೋಜನೆ ಬರುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಮಾಡಿದ್ದಾರೆ. ಆದರೆ ಇವರು ಮಾತ್ರ ಬಿಟ್ಟಿಭಾಗ್ಯ ಅನ್ನುತ್ತಿದ್ದಾರೆ. ಬಡವರ ಮನೆಗೆ ಹಣ ತಲುಪಿ
ಉಪಯೋಗ ಆಗುತ್ತಿದೆ. ಉಪಯೋಗ ಆಗುತ್ತಿಲ್ಲ ಎಂದಾದರೆ ಜನರೇ ಬೇಡ ಅನ್ನುವಂತಹ ಚಾಲನೆಯನ್ನು ಶಾಸಕರು ಮಾಡಲಿ. ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಸರ್ಕಾರ ರಚಿಸಿದ್ದೆ ಪಕ್ಷಾಂತರಿಗಳಿಂದ
ಕಿಮ್ಮನೆ ರತ್ನಾಕರ್ ಪಕ್ಷಾಂತರಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷರು ಹೇಳಿಕೆ ನೀಡಿದ್ದರು. ಆದರೆ ಅದರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ. ಕಾರಣ ಅವರ ಪಕ್ಷದ ನಾಯಕರು ಗೃಹಮಂತ್ರಿ ಆಗಿದ್ದೆ ಪಕ್ಷಾಂತರಿಗಳಿಂದ. ಆಪರೇಷನ್ ಮಾಡಿಯೇ ಬಿಜೆಪಿ ಸರ್ಕಾರ ರಚಿಸಿದ್ದು, ಈಗಲೂ ಅವರ ಪಕ್ಷದಲ್ಲಿ ಎಷ್ಟೋ ಪಕ್ಷಾಂತರಿಗಳು ಇದ್ದಾರೆ ಎಂದು ಅಮರನಾಥ್ ಶೆಟ್ಟಿ ಟಾಂಗ್ ನೀಡಿದರು.
ಪಟ್ಟಣ ಪಂಚಾಯತ್ ನಲ್ಲಿ ಕಳೆದ 28 ವರ್ಷದಿಂದ ಸದಸ್ಯರಾಗಿ ಕೆಲಸ ಮಾಡುತ್ತಿರುವ ಸಂದೇಶ್ ಜವಳಿಯವರು ಕೂಡ ತಮ್ಮ ಆಡಳಿತ ಇರುವಾಗ ಟೆಂಡರ್ ಆಗುವ ಮೊದಲು ಕೆಲಸ ಮಾಡಿಸಿದ್ದಾರೆ. ಆದರೆ ಈಗ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ. ಇನ್ನು ದಸರಾಕ್ಕೆ ಪಟ್ಟಣ ಪಂಚಾಯತ್ ನಿಂದ ಎರಡುವರೆ ಲಕ್ಷ ಹಾಗೂ ಪಾರ್ಕ್ ಗೆ ಸುಣ್ಣ ಬಣ್ಣ ಹಾಗೂ ಸ್ವಚ್ಛತೆಗೆ ಒಂದೂವರೆ ಲಕ್ಷ ಹಣ ನೀಡಲಾಗಿತ್ತು. ಆದರೆ ಬಡವರು, ಕಾರ್ಮಿಕರು ಬಣ್ಣ ಹಾಕಿ ಹಾಗೂ ಹುಲಿವೇಷವನ್ನು ಉಳಿಸುವ ಸಲುವಾಗಿ ನಡೆಸಿದ್ದ ಕಾರ್ಯಕ್ರಮಕ್ಕೆ ಈ ರೀತಿ ಮಾಡುವುದು ಸರಿಯಲ್ಲ. ಹುಲಿವೇಷ ಕಾರ್ಯಕ್ರಮವನ್ನು ನೋಡಿ ಸಹಿಸಲು ಆಗದೇ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಬಹಳ ನಂಜು ಇದ್ದು ಅವರನ್ನು ಸಂದೇಶ ಎನ್ನುವ ಬದಲು ನಂಜೇಶ ಎನ್ನುವುದು ಸೂಕ್ತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೂರ್ಣೇಶ್ ಕಳಕೆರೆ, ಅಶ್ವಲ್ ಗೌಡ, ಶ್ರೇಯಸ್ ರಾವ್, ಆಸಿಫ್ ಸೀಬಿನಕೆರೆ, ಸುಮಂತ ಪೂಜಾರಿ, ಸೇರಿ ಹಲವರು ಉಪಸ್ಥಿತರಿದ್ದರು.