ಬಿಡ್ಡಿಂಗ್ ವಾರ ಬದಲು: ಮಲೆನಾಡು ಅಡಕೆ ಬೆಳೆಗಾರರಿಗೆ ಮೋಸ?!
– ಬಯಲುಸೀಮೆ ಫಸಲಿಗೆ ಬೇಡಿಕೆ ಸೃಷ್ಟಿಸುವ ಯತ್ನ
– ಮಲೆನಾಡು ಬೆಳೆಗಾರರಲ್ಲಿ ಆತಂಕ: ಕೆಲ ಅಧಿಕಾರಿಗಳ ಕೈವಾಡ?
NAMMUR EXPRESS NEWS
ತೀರ್ಥಹಳ್ಳಿ /ಕೊಪ್ಪ /ಸಾಗರ: ವಿಶ್ವದಲ್ಲೇ ಪಾರಂಪರಿಕವಾಗಿ ಮಲೆನಾಡಿನಲ್ಲಿ ಬೆಳೆಯುವ ಅಡಕೆ ದೇಶ, ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಅಡಕೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಲೆನಾಡಿನ ಅಡಕೆಗೆ ಪೆಟ್ಟುಕೊಡುವಂತಿದೆ. ಅಡಕೆ ಖರೀದಿಸುವ ಟ್ರೇಡರ್ಗಳನ್ನೇ ಬಯಲುಸೀಮೆ ಜಿಲ್ಲೆಗಳತ್ತ ಮುಖ ಮಾಡುವ ಪ್ರಯತ್ನ ನಡೆದಿದೆ.
ಅದರಲ್ಲೂ ಅಡಿಕೆ ಬಿಡ್ ವಾರ ಬದಲು ಮಾಡುವ ಮೂಲಕ ಅಧಿಕಾರಿಗಳು ಕೂಡ ತಮ್ಮ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ.
ಹಲವು ದಶಕಗಳಿಂದ ಭಾನುವಾರ ನಡೆಯುತ್ತಿದ್ದ ಬಿಡ್ ಕಳೆದ ಕೆಲ ತಿಂಗಳಿಂದ ಶನಿವಾರ ನಡೆಯುತ್ತಿದೆ.
ಶನಿವಾರ ಏಕೆ…? ಭಾನುವಾರ
ಮಲೆನಾಡು ತಾಲೂಕುಗಳಾದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ತೀರ್ಥಹಳ್ಳಿ ಭಾಗದ ಅಡಕೆಗೆ ಹೆಚ್ಚು ಬೇಡಿಕೆ ಇತ್ತು. ಜತೆಗೆ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಡಕೆಯಲ್ಲಿ ಕಾಣಿಸಿಕೊಂಡ ರೋಗ ರೈತರಿಗೆ ದೊಡ್ಡ ಘಾಸಿ ಉಂಟುಮಾಡಿತ್ತು. ಜತೆಯಲ್ಲಿ ಕೆಲ ತಿಂಗಳಿನಿಂದ ಅಡಕೆ ಕೊಳ್ಳಲು ಟ್ರೇಡರ್ಸ್ ಕೂಡ ಮುಂದೆ ಬರಲು ಹಿಂದೇಟು ಹಾಕುತ್ತಿರುವುದು ಅಡಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಎಪಿಎಂಸಿ ಮಾರುಕಟ್ಟೆಯ ವಿಸ್ತೀರ್ಣ ಹಾಗೂ ಬರೀ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ತೆಗೆದುಕೊಳ್ಳುವ ನಿರ್ಧಾರ ಕಾರಣ ಎನ್ನಲಾಗುತ್ತಿದೆ. ಎಪಿಎಂಸಿ ತೆಗೆದುಕೊಳ್ಳುವ ನಿರ್ಧಾರದ ಹಿಂದೆ ಮ್ಯಾಮ್ ಕೋಸ್ ಪಾಲೂ ಇದೆ ಎಂಬುದು ಅಡಕೆ ಬೆಳೆಗಾರರ ಆರೋಪ. ಅಡಕೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಬಯಲುಸೀಮೆಯಲ್ಲೂ ಬೆಳೆ ವಿಸ್ತರಿಸಿಕೊಂಡಿದೆ.
ತರೀಕೆರೆ, ಕಡೂರು, ಚನ್ನಗಿರಿ, ಶಿಕಾರಿಪುರ, ಹೊಳೆಹೊನ್ನೂರಿನಿಂದ ದಾವಣಗೆರೆಯವರೆಗೂ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮಲೆನಾಡು ಅಡಕೆಗೆ ಬೇಡಿಕೆ ಕಡಿಮೆಯಾಗಿಲ್ಲ. ಈ ಬೇಡಿಕೆಯನ್ನು ಕುಸಿತಗೊಳಿಸುವ ಸಲುವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸ್ವಹಿತಾಸಕ್ತಿಯ ತಂಡವೊಂದು ಇನ್ನಿಲ್ಲದ ಪ್ರಯತ್ನದ ಜತೆಯಲ್ಲಿ ಕಾರ್ಯಾಚರಣೆಯನ್ನೂ ಮಾಡುತ್ತಿದೆ ಎಂಬ ದೂರು ಕೇಳಿಬಂದಿದೆ.
ಮಲೆನಾಡಿನ ಅಡಕೆಯನ್ನು ರೈತರು ಮಂಡಿಗಳಿಗೆ ವ್ಯಾಪಾರ ಮಾಡುತ್ತಾರೆ. ಶಿವಮೊಗ್ಗದ ಮಂಡಿಗೆ ನೇರವಾಗಿ ಅಡಕೆಯನ್ನು ಒಂದಷ್ಟು ರೈತರು ನೀಡಿದರೆ, ಸ್ಥಳೀಯವಾಗಿ ಇರುವ ಖಾಸಗಿ ಮಂಡಿ ಮತ್ತು ಮ್ಯಾಮಕೋಸ್ ಮೂಲಕ ಹೆಚ್ಚಿನ ರೈತರು ವಹಿವಾಟು ನಡೆಸುತ್ತಾರೆ. ಈ ಮಂಡಿಗಳಲ್ಲಿರುವ ಅಡಕೆಯನ್ನು ಕೊಳ್ಳಲು ಟ್ರೇಡರ್ಗಳು ವಾರಕ್ಕೊಮ್ಮೆ ಬಂದು ಬಿಡ್ಡಿಂಗ್ ನಡೆಸುತ್ತಾರೆ. ಈ ವಹಿವಾಟಿನಲ್ಲಿ ಸ್ಥಳೀಯ ಎಪಿಎಂಸಿಗೆ ಸೆಸ್, ಜಿಎಸ್ಟಿಗಳನ್ನು ಸ್ಥಳೀಯವಾಗಿಯೇ ಪಾವತಿ ಮಾಡಲಾಗುತ್ತದೆ. ಆದರೆ ಈ ವಾರ ಬದಲು ಮಾಡಿ ಇಲ್ಲಿಗೆ ಬಿಡ್ ದಾರರು ಬರದಂತೆ ನೋಡಿಕೊಳ್ಳಲಾಗುತ್ತಿದೆ.
ಬಿಡ್ಡಿಂಗ್ ವಾರವೇ ಬದಲು ಮಾಡಿದರು!
ಟ್ರೇಡರ್ಗಳು ಒಂದೊಂದು ಭಾಗಕ್ಕೆ ಒಂದೊಂದು ದಿನ ಭೇಟಿ ನೀಡಿ ಅಡಕೆ ಪರಿಶೀಲನೆ ನಡೆಸಿ ಬಿಡ್ಡಿಂಗ್ ಮಾಡುತ್ತಾರೆ. ಒಂದು ತಿಂಗಳಿನಿಂದ ಎಪಿಎಂಸಿಯೂ 60-70 ವರ್ಷಗಳಿಂದ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದ್ದ ಪದ್ಧತಿಯನ್ನು ಬದಲಾಯಿಸಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾನುವಾರ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. ಅಗ 10 ರಿಂದ 15 ಟ್ರೇಡರ್ಗಳು ಬಿಡ್ಡಿಂಗ್ ನಡೆಸುತ್ತಿದ್ದರು. ಭಾನುವಾರ ನಡೆಯುತ್ತಿದ್ದ ಬಿಡ್ಡಿಂಗ್ ಶನಿವಾರಕ್ಕೆ ವರ್ಗಾಯಿಸಿದ ಕಾರಣ ನಾಲೈದು ಬಿಡ್ಡರ್ಸ್ ಮಾತ್ರ ಮಲೆನಾಡ ಕಡೆ ಮುಖಮಾಡುತ್ತಾರೆ. ಹೀಗಾಗಿ ಹಿಂದಿನಷ್ಟು ಬೇಡಿಕೆ ಅಡಕೆಗೆ ಬರುತ್ತಿಲ್ಲ. ಇದು ಮಲೆನಾಡಿನ ಅಡಕೆಯ ಬೇಡಿಕೆಯನ್ನು ಕಡಿಮೆ ಮಾಡಲು
ಹೂಡಿರುವ ತಂತ್ರ ಎನ್ನಲಾಗುತ್ತಿದೆ. ಇದರಿಂದ ರೈತರು. ಮಲೆನಾಡ ವರ್ತಕರ ಮೇಲೆ ಪರಿಣಾಮ ಬೀರಿದೆ. ಇದನ್ನು ಅರಿತ ಮ್ಯಾಮ್ಮೋಸ್ ಕೂಡ ಸುಮ್ಮನಿದೆ.
ರೈತ ಸಂಘ, ಜನ ಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
ಮಲೆನಾಡ ಅಡಿಕೆ ಬೆಲೆ ಕುಸಿತದ ಜತೆಗೆ ಅಡಿಕೆ ಅವ್ಯವಹಾರಕ್ಕೆ ಕಾರಣರಾದ ಕೆಲವು ಅಧಿಕಾರಿಗಳ ನಡೆ ಇದೀಗ ಅನುಮಾನಕ್ಕೆ ಕಾರಣವಾಗಿದೆ. ರೈತ ಸಂಘ, ಜನ ಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಇದೀಗ ರೈತ ವಲಯದಲ್ಲಿ ಕೇಳಿ ಬರುತ್ತಿದೆ.