ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ದಾಖಲೆ!
– ಒಂದೇ ದಿನದಲ್ಲಿ 17 ಬೀದಿ ನಾಯಿಗಳ ಶಸ್ತ್ರ ಚಿಕಿತ್ಸೆ ಮಾಡಿದ ರಾಮಕೃಷ್ಣಪುರದ ಡಾ.ಅರವಿಂದ್
– ಶ್ವಾನ ಸೇವೆ ಮೂಲಕ ರಾಜ್ಯಕ್ಕೆ ಮಾದರಿ ಆಯ್ತು ಸಮರ್ಪಣಾ ತಂಡ
NAMMUR EXPRESS NEWS
ತೀರ್ಥಹಳ್ಳಿ: ಸಮರ್ಪಣಾ ತಂಡ ರಾಮಕೃಷ್ಣಪುರದ ಆಶ್ರಯದಲ್ಲಿ ಹಾಗೂ ಪಶು ಚಿಕಿತ್ಸಾಲಯದ ಸಹಯೋಗದೊಂದಿಗೆ ನಡೆದ ಎರಡನೇ ವರ್ಷದ ಬೀದಿ ಹಾಗೂ ದೇಸಿ ತಳಿಯ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಸುಮಾರು 17 ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಬೀದಿ ನಾಯಿಗಳಿಂದ ಮಕ್ಕಳಿಗೆ ಹಾಗೂ ಸವಾರರಿಗೆ ಅಪಾಯವಾಗುವುದನ್ನು ಮನಗಂಡ ಸಮರ್ಪಣಾ ತಂಡ ತನ್ನೂರಿನ ವ್ಯಾಪ್ತಿಯಲ್ಲಿ ಈ ಕಾರ್ಯ ಕೈಗೊಂಡು ಇಡೀ ಊರಿನ ಮೆಚ್ಚುಗೆಗೆ ಪಾತ್ರವಾಯಿತು.
ವಿಶೇಷವಾಗಿ ಡಾ. ಅರವಿಂದ್ ಕೂಡಾ ಇದೇ ತಂಡದ ಸದಸ್ಯರಾಗಿ ಸತತ ಎರಡನೇ ವರ್ಷದಲ್ಲೂ ಒಬ್ಬರೇ ಡಾಕ್ಟರ್ ದಾಖಲೆ ಸಂಖ್ಯೆಯ ಆಪರೇಷನ್ ಮಾಡಿ ನೋಡುಗರ ಹುಬ್ಬೇರುವಂತೆ ಮಾಡಿದರು.
ಒಂದು ದಿನಕ್ಕೆ 17 ಆಪರೇಷನ್ ಮಾಡುವುದು ಅಸಾಧ್ಯವಾದರೂ ಸಮರ್ಪಣಾ ತಂಡದ ರ್ಯದಲ್ಲಿ ಸಾ ಇರಬೇಕು ಎಂಬ ಪ್ರೀತಿಯಿಂದ ಈ ಕೆಲಸವನ್ನು ಮಾಡಿದ್ದಾರೆ.
ಇಡೀ ತಾಲೂಕಿನಲ್ಲಿ ಬೆರಳೆಣಿಕೆಯ ಪ್ರಾಣಿಗಳ ಸರ್ಜನ್ ಇದ್ದು ಎಲ್ಲೆಡೆಯೂ ಈ ನಿಟ್ಟಿನಲ್ಲಿ ಯೋಚಿಸಿದರೆ ಹಸಿವಿನಿಂದ ಬೀದಿ ಬೀದಿಯಲ್ಲಿ ನಾಯಿಮರಿಗಳು ಸಾಯುವುದನ್ನು ತಡೆಯಬಹುದು.
ಹೆಣ್ಣು ನಾಯಿ ಸಾಕಿದವರು ಅದು ಮರಿ ಹಾಕಿದಾಗ ಎಲ್ಲೋ ತಂದು ಬಿಡುವ ಬದಲು ಸಂತಾನ ಹರಣ ಚಿಕಿತ್ಸೆ ಮಾಡಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ.
ಈ ಕಾರ್ಯಕ್ಕೆ ಕೇವಲ ಮೆಡಿಸಿನ್ ಚಾರ್ಜಸ್ ಮಾತ್ರ ಪಡೆದ ಸಮರ್ಪಣಾ ತಂಡ ಸೇವಾ ಮನೋಭಾವನೆಯಿಂದ ವರ್ಷವಿಡೀ ಇಂತಹ ಹತ್ತಾರು ಕಾರ್ಯ ಮಾಡುತ್ತಿದೆ.
ವಿಶೇಷವಾಗಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿಯವರಾದ ಕೋಣಂದೂರಿನ ಲಕ್ಷ್ಮಣ್ ಟಿ. ಆರ್ ಅವರು ಪ್ರಾಣಿಗಳ ಮೇಲಿನ ವಿಶೇಷ ಮಮಕಾರದಿಂದ ಈ ಕಾರ್ಯಕ್ಕೆ ಧನ ಸಹಾಯವನ್ನು ನೀಡಿದ್ದು ತಂಡದ ಮಿತ್ರರು ಶ್ಲಾಘಿಸಿದರು.