ಆಗುಂಬೆ ಬಳಿ ಬಂದ ಆನೆಗಳು!
* ಜಮೀನಿಗೆ ನುಗ್ಗಿ ಆನೆಗಳ ದಾಂಧಲೆ: ರೈತ ಕಂಗಾಲು!
* ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ
* ನಾಟಿಯಾದ ಗದ್ದೆ,ತೋಟದ ಫಸಲು ನಾಶ: ಅಪಾರ ನಷ್ಟ
* ಕೃಷಿ ಸಂಕಷ್ಟ: ಮಲೆನಾಡಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ!
NAMMUR EXPRESS NEWS
ಆಗುಂಬೆ: ತೀರ್ಥಹಳ್ಳಿ ತಾಲೂಕು ಆಗುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಗರವಳ್ಳಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ ಘಟನೆ ನಡೆದಿದೆ.
ಗ್ರಾಮದ ಕಾರೇಕುಂಬ್ರಿ ಎಂಬಲ್ಲಿ ರೈತ ಗಣೇಶ್ ಬಿ.ಕೆ ಇವರ ಭತ್ತದ ಗದ್ದೆಗೆ ಸತತ ಎರಡು ದಿನಗಳಿಂದ ಆನೆಗಳು ಬರುತ್ತಿದ್ದು, ಆನೆ ಕಾಟಕ್ಕೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ನಾಟಿ ಮಾಡಿದ್ದ ಬೆಳೆ ಸಂಪೂರ್ಣ ನಾಶಗೊಂಡ ಪರಿಣಾಮ ರೈತ ಕಂಗಾಲಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಹಲವು ವರ್ಷಗಳಿಂದ ಈ ಭಾಗದಲ್ಲಿ ಆನೆ,ಕಾಡುಕೋಣ ಸೇರಿದಂತೆ ಇತರ ಕಾಡು ಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೀರ್ಥಹಳ್ಳಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
ತೀರ್ಥಹಳ್ಳಿ: ಸಂಘ ಸಂಸ್ಥೆಗಳಲ್ಲಿ ಎರಡು ಲಕ್ಷ ಹಾಗೂ ಇತರೆ ಕೈ ಸಾಲ ಮಾಡಿಕೊಂಡಿದ್ದ ರೈತರೊಬ್ಬರು ಇತ್ತ ಬೆಳೆ ಯಲ್ಲೂನಷ್ಟ ಅನುಭವಿಸಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾಲ್ಲೂಕಿನ ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸುಣ್ಣದಮನೆಯ ನೇಮನಾಯ್ಕ (60ವರ್ಷ) ಎಂಬ ರೈತ ಅಡಿಕೆಗೆ ಎಲೆಚುಕ್ಕೆ ರೋಗ ಹಾಗೂ ಕೊಳೆ ರೋಗದಿಂದ ಬೇಸತ್ತು ಜೀವನ ನಿರ್ವಹಣೆಗೆ ಸಂಘ ಸಂಸ್ಥೆಯಲ್ಲಿ ಸಾಲ ಮಾಡಿದ್ದು, ತೀರಿಸಲು ದಾರಿ ತೋಚದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ನೇಮನಾಯ್ಕ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಲೆನಾಡಲ್ಲಿ ಎಲೆಚುಕ್ಕಿ ಇತರೆ ಕಾರಣಗಳಿಂದ ರೈತರ ಸಾವು ಹೆಚ್ಚುತ್ತಿದೆ.