ಮ್ಯಾಮ್ಕೋಸ್ ಚುನಾವಣೆ ಅಖಾಡ ಸಜ್ಜು!
– ಸಹಕಾರ ಭಾರತಿ ಅಭ್ಯರ್ಥಿಗಳ ಘೋಷಣೆ
– ತೀರ್ಥಹಳ್ಳಿಯಿಂದ ಹುಲ್ಕುಳಿ ಮಹೇಶ್, ರತ್ನಾಕರ್ ಬಿಳಿಗಿನಮನೆ ಹಸಿರುಮನೆ ನಂದನ್, ಜಯಶ್ರೀ ಅವರಿಗೆ ಅವಕಾಶ
– ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ-ಚಿಕ್ಕಮಗಳೂರು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮಲೆನಾಡು ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ನಿ.. (ಮ್ಯಾಮ್ ಕೋಸ್)ನ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ಫೆಬ್ರವರಿ 4ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮ್ಯಾಮ್ ಕೋಸ್ಒಟ್ಟು 19 ನಿರ್ದೇಶಕ ಸ್ಥಾನಗಳಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ 19ಕ್ಕೆ 19 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ.
ಯಾರು ಯಾರಿಗೆ ಅವಕಾಶ?
2000-2025ನೇ ಅವಧಿಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಹುಲ್ಕುಳಿ ಮಹೇಶ್, ಸಿ.ಬಿ.ಈಶ್ವರ್, ಬಿಳಿಗಿನಮನೆ ರತ್ನಾಕರ್, ಜಯಶ್ರೀ ಗೆಲುವು ಸಾಧಿಸಿದ್ದರು. ಈ ಬಾರಿ ಸಿ.ಬಿ.ಈಶ್ವರ್ ಒಬ್ಬರನ್ನು ಕೈ ಬಿಟ್ಟು ಮಿಕ್ಕ ಮೂವರಿಗೆ ಅವಕಾಶ ಕಲ್ಪಿಸಿದೆ. ಈಶ್ವರ್ ಬದಲು ಹಸಿರುಮನೆ ನಂದನ್ ಗೆ ಅವಕಾಶ ಮಾಡಲಾಗಿದೆ.
19ಸಾವಿರ ಷೇರುದಾರರ ಪೈಕಿ 11,600 ಮಂದಿಗೆ ಮಾತ್ರ ಮತದ ಹಕ್ಕು!
ಮ್ಯಾಮ್ ಕೋಸ್ ನಲ್ಲಿ 19 ಸಾವಿರ ಷೇರುದಾರರಿದ್ದಾರೆ. ಈ ಪೈಕಿ ಸಹಕಾರ ಕಾಯ್ದೆಗಳ ನಿಯಮ ಪಾಲಿಸದ 7,400 ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದು, ಸದ್ಯಕ್ಕೆ 11,600 ಮಂದಿ ಅರ್ಹ ಮತದಾರರಿದ್ದಾರೆ. ತೀರ್ಥಹಳ್ಳಿ ತಾಲ್ಲೂಕೊಂದರಲ್ಲೇ 2800 ಮತಗಳಿವೆ. ಮತದ ಹಕ್ಕು ಕಳೆದುಕೊಂಡವರು ಸಂಘಟಿತರಾಗಿ ನ್ಯಾಯಾಲದ ಮೊರೆ ಹೋಗಿ ಮತದ ಹಕ್ಕು ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.