ತೀರ್ಥಹಳ್ಳಿ ಚಿತ್ರಮಂದಿರಕ್ಕೆ ಮತ್ತೆ ಮತ್ತೆ ಸಿನಿಮಾ!
– ಪ್ರತಿ ದಿನ 4 ಶೋ… ಒಂದೊಳ್ಳೆ ಕಾಮಿಡಿ ಸಿನಿಮಾ
– ಡಾ. ಅರುಣ್ ಹೊಸಕೊಪ್ಪ ನಿರ್ದೇಶನ, ನೈರುತ್ಯ ಮೀಡಿಯಾ ನಿರ್ಮಾಣ
– ಕೋಣಂದೂರು ಇಮ್ತಿಯಾಜ್ ಗಾಯನ
NAMMUR EXPRESS NEWS
ತೀರ್ಥಹಳ್ಳಿ: ನೈರುತ್ಯ ಆರ್ಟ್ ಮೀಡಿಯಾದ ಅಡಿಯಲ್ಲಿ ನಿರ್ಮಾಣಗೊಂಡ ‘ಮತ್ತೆ ಮತ್ತೆ’ ಕನ್ನಡ ಸಿನಿಮಾ ಶುಕ್ರವಾರ ತೆರೆಕಾಣಲಿದ್ದು ಅದ್ಭುತ ಯಶಸ್ಸು ಕಾಣಲಿ ಎಂದು ಹಾರೈಸುತ್ತಾ ಮೂಲತಃ ಉಪನ್ಯಾಸಕರಾದ ಡಾ.ಅರುಣ್ ಈ ಚಿತ್ರವನ್ನು ನಿರ್ದೇಶಿಸಿದ್ದು ಅವರದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಪ್ರೊಡ್ಯೂಸರ್ ಬೇಕಾಗಿದ್ದಾರೆ ಎಂಬ ಅಡಿಬರಹ ಇರುವ ಈ ಚಿತ್ರದ ೩ ಹಾಡುಗಳಿಗೆ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಹಾಡುಗಳ ಜೊತೆಗೆ ಟ್ರೈಲರ್ ಪ್ರದರ್ಶನದ ಸಂದರ್ಭದಲ್ಲಿ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟ ಎಂ.ಎಸ್.ಉಮೇಶ್ ಮಾತನಾಡಿ, ಈ ಚಿತ್ರ ಅರುಣ್ರ ಕನಸಿನ ಕೂಸು. ಇಲ್ಲಿ ಕಥೆಯೇ ಹೀರೋ. ಮನದೀಪ್ರಾಯ್, ಸತ್ಯಜಿತ್, ರಾಕ್ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ, ಆದರೆ ಈ ಚಿತ್ರ ಅವರನ್ನು ಜೀವಂತವಾಗಿರಿಸಿದೆ. ಅರುಣ್ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಅವರ ಶ್ರಮಕ್ಕೆ ಫಲ ಸಿಗಬೇಕು ಎಂದಿದ್ದಾರೆ.
ನಿರ್ಮಾಪಕ ಕಮ್ ನಿರ್ದೇಶಕ ಡಾ.ಅರುಣ್ ಹೊಸಕೊಪ್ಪ ಮಾತನಾಡುತ್ತಾ ಇದು ಸಂಪೂರ್ಣ ಕಾಮಿಡಿ ಸಿನಿಮಾ. ನಾನೊಬ್ಬ ಉಪನ್ಯಾಸಕ. ಆದರ್ಶ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಕಲಿತು, ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ಈ ಕಥೆ ರೆಡಿಮಾಡಿದೆ. ಚಿಕ್ಕ ಪಾತ್ರದಲ್ಲೂ ಅಭಿನಯಿಸಿದ್ದೇನೆ. ಚಿತ್ರ ನೋಡಿದ ಎಲ್ಲರೂ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದಾರೆ. ಜರ್ನಲಿಸಂ ಮುಗಿಸಿದ ೫ ಜನ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಅಂತ ಯೋಚಿಸಿ ನಂತರ ಅವರೆಲ್ಲ ಸೇರಿ ಸಿನಿಮಾವೊಂದನ್ನು ನಿರ್ಮಿಸಿ, ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೇನೆಲ್ಲ ಆಗಿಹೋಯ್ತು, ಸಾಕಷ್ಟು ಅಡೆ, ತಡೆಗಳನ್ನು ಎದುರಿಸಿ, ಕೊನೆಗೂ ಅವರು ಸಿನಿಮಾ ಮಾಡಿ ಮುಗಿಸಿದರೇ, ಇಲ್ಲವೇ ಎನ್ನುವುದೇ ಮತ್ತೆ ಮತ್ತೆ ಚಿತ್ರದ ಕಥಾಹಂದರ. ಹಿರಿಯ ಕಲಾವಿದರನ್ನು ಕರೆಸಿ ನಮ್ಮ ಚಿತ್ರದಲ್ಲಿ ಪಾತ್ರ ಮಾಡಿಸಿದ್ದೇನೆ. ಕನ್ನಡ ಚಿತ್ರರಂಗದ ಬಹುತೇಕ ಹಿರಿಯ, ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದರಿಂದ ಬರುವ ಲಾಭದಲ್ಲಿ ಶೇ.೨೫ರಷ್ಟು ಹಣವನ್ನು ಬಡ ಕಲಾವಿದರಿಗೆ ಕೊಡಬೇಕು ಎಂದುಕೊಂಡಿದ್ದೇನೆ.
೧೯ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ. ಒಮ್ಮೆ ಸಿನಿಮಾನೋಡಿ ನಂತರ ಅಭಿಪ್ರಾಯ ವ್ಯಕ್ತಪಡಿಸಿ ಎನ್ನುವುದೇ ನನ್ನ ಪ್ರಾರ್ಥನೆ. ಚಿತ್ರದಲ್ಲಿ ಉಮೇಶಣ್ಣ ಅವರ ಜೊತೆ ಸಿಹಿಕಹಿ ಚಂದ್ರು ಅವರು ಮುಖ್ಯಮಂತ್ರಿಯಾಗೇ ಕಾಣಿಸಿಕೊಂಡಿದ್ದಾರೆ.. ಇನ್ನು ಸಂಜನಾ ಗಲ್ರಾನಿ ಅವರದು ಚಿಕ್ಕ ಪಾತ್ರವಾದರೂ ಕಥೆಗೆ ತಿರುವು ಕೊಡುತ್ತದೆ.. ಉಳಿದಂತೆ ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶಂಖನಾದ ಅಂಜಿನಪ್ಪ, ಪ್ರಕಾಶ್ ತುಮ್ಮಿನಾಡ್, ಶ್ರೀನಿವಾಸ್ಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಬೆಂಗಳೂರು, ನೆಲಮಂಗಲ, ಮುರುಡೇಶ್ವರ, ಶಿರಾಲಿ ಹೀಗೆ ಹಲವಾರು ಲೊಕೇಶನ್ಗಳಲ್ಲಿ ೫೦ ದಿನಗಳವರೆಗೆ ಚಿತ್ರೀಕರಣ ನಡೆಸಿದ್ದೇವೆ ಎಂದು ವಿವರಿಸಿದರು. ನಂತರ ಕೋಟೆ ಪ್ರಭಾಕರ್, ಆರ್.ಜೆ. ವಿಕ್ಕಿ, ಸ್ವಾತಿ, ನೃತ್ಯನಿರ್ದೇಶಕ ಅನಿ ಇವರೆಲ್ಲ ಚಿತ್ರದ ಕುರಿತಂತೆ ಮಾತನಾಡಿದರು. ಚಿತ್ರ ಅದಾಗಲೇ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು ತೀರ್ಥಹಳ್ಳಿಯಲ್ಲಿ ನಾಳೆಯಿಂದ ನಾಲ್ಕು ಪ್ರದರ್ಶನಗಳಿರುತ್ತವೆ.