- ಕಾಫಿ ಬೆಳೆಗಾರರಿಗೆ ಹಣ ಕೊಡದ ಆರೋಪ
- ಚಿಕ್ಕಮಗಳೂರು, ಹಾಸನ ರೈತರಿಂದ ದೂರು
ಬೆಂಗಳೂರು: ಕಾಫಿ ಡೇ ಮಾಲಿಕ ಸಿದ್ಧಾರ್ಥ ಸಾವಿನ ಬಳಿಕ ಗೊಂದಲದ ಗೂಡಾಗಿರುವ ಕಾಫಿ ಡೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಡೇ ಕಂಪನಿಗೆ ಕಾಫಿ ಬೀಜಗಳನ್ನು ಮಾರಾಟ ಮಾಡಿದ ಕಾಫಿ ಬೆಳೆಗಾರರಿಗೆ ಕಂಪನಿ ಕೊಟ್ಟ ಚೆಕ್ಗಳು ಬೌನ್ಸ್ ಆಗಿದೆ. ಸುಮಾರು 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಬಾಕಿ ಇದೆ. ಹೀಗಾಗಿ ಕಾಫಿ ಬೆಳೆಗಾರರು ಇದೀಗ ಕೋರ್ಟ್ ಕಟಕಟೆ ಏರಿದ್ದಾರೆ. ಸಾವಿರಾರು ಜನತೆಗೆ ಉದ್ಯೋಗ ಬದುಕು ಕೊಟ್ಟು ಕಾಫಿ ಕಿಂಗ್, ಬ್ಯುಸಿನೆಸ್ ಐಕಾನ್ ಆಗಿದ್ದ ಸಿದ್ಧಾರ್ಥ ಕನಸಿನ ಕಂಪನಿ ಇದೀಗ ಮತ್ತಷ್ಟು ಸಮಸ್ಯೆಗೆ ಬಂದು ನಿಂತಿದೆ.
ಕಾಫಿ ಸಾಮ್ರಾಜ್ಯವನ್ನೇ ಕಟ್ಟಿದ ಉದ್ಯಮಿ ಸಿದ್ಧಾರ್ಥ್ ಕುಟುಂಬ ಈಗ ಸಂಕಷ್ಟದಲ್ಲಿ ಸಿಲುಕಿದೆ. ಪತ್ನಿ ಮಾಳವಿಕಾ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಗ್ರಾಮೀಣ ಭಾಗದ ಸಾವಿರಾರು ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ಸಿದ್ಧಾರ್ಥ ಹೆಗ್ಡೆ ಕುಟುಂಬ ಈಗ ತೊಂದರೆಯಲ್ಲಿದೆ. 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಕಂಪನಿ ನಷ್ಟದತ್ತ ಸಾಗಿತ್ತು.