-ವಾಟ್ಸಪ್ ನಲ್ಲಿ ದೋಷ, ಬಳಕೆದಾರರಿಗೆ ಗೊಂದಲ
-ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ ವಾಟ್ಸಪ್
ನವದೆಹಲಿ(ಜ.12): ಸ್ನೇಹಿತರು, ಕುಟುಂಬ ಸದಸ್ಯರ ನಡುವಿನ ವೈಯಕ್ತಿಕ ಮಾಹಿತಿ ವಿನಿಮಯಕ್ಕೆಂದು ಸ್ಥಾಪಿಸಲಾದ ಖಾಸಗಿ ವಾಟ್ಸಾಪ್ ಗ್ರೂಪ್ಗಳು ಗೂಗಲ್ ಸರ್ಚ್ ನಲ್ಲಿ ಲಭ್ಯವಾಗುತ್ತಿದೆ ಎಂಬ ಆಘಾತಕಾರಿ ವಿಷಯ ಕೇಳಿ ಬರುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಯನ್ನು ಮಾತೃಸಂಸ್ಥೆ ಫೇಸ್ಬುಕ್ ಜೊತೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡುತ್ತಿದೆ. ಈ ಕಾರಣ ವಾಟ್ಸಾಪ್ನ ಸುರಕ್ಷತೆ ಬಗ್ಗೆ ಬಳಕೆದಾರರಿಗೆ ಗೊಂದಲ ಉಂಟುಮಾಡಿದೆ.
ಗ್ರೂಪ್ಚಾಟ್ ಇನ್ವೈಟ್ಗಳ ಇಂಡೆಕ್ಸಿಂಗ್ ಗೂಗಲ್ನಲ್ಲಿ ಸೋರಿಕೆಯಾಗಿರುವ ಕಾರಣ, ಯಾವುದೇ ವ್ಯಕ್ತಿ ಇನ್ಯಾವುದೇ ಖಾಸಗಿ ವಾಟ್ಸಾಪ್ ಗ್ರೂಪ್ಗಳ ಇನ್ವೈಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅದರಲ್ಲಿ ಸೇರಿಕೊಳ್ಳುವಂತಾಗಿದೆ. ಅಷ್ಟುಮಾತ್ರವಲ್ಲ ಬಳಕೆದಾರರ ಪ್ರೊಫೈಲ್, ಮೊಬೈಲ್ ನಂಬರ್, ಪ್ರೊಫೈಲ್ ಚಿತ್ರಗಳು ಸೇರಿದಂತೆ ವೈಯಕ್ತಿಕ ಮಾಹಿತಿ ಕೂಡಾ ಗೂಗಲ್ ಹುಡುಕಾಟದಲ್ಲಿ ಲಭ್ಯವಿದೆ. ಹೀಗಾಗಿ ಯಾರು ಬೇಕಾದರೂ, ಗೂಗಲ್ ಸಚ್ರ್ನಲ್ಲಿ ಯಾವುದೇ ಖಾಸಗಿ ವಾಟ್ಸಾಪ್ ಗ್ರೂಪ್ಗಳಿಗಾಗಿ ಹುಡುಕಾಟ ನಡೆಸಿ ಇನ್ವೈಟ್ ಕ್ಲಿಕ್ ಮಾಡುವ ಮೂಲಕ ಗ್ರೂಪ್ ಸೇರಿಕೊಳ್ಳುವ ಅವಕಾಶ ಸಿಗುತ್ತಿದೆ.
2019ರಲ್ಲಿ ಕೂಡಾ ಇಂಥದ್ದೇ ಸೋರಿಕೆ ಬೆಳಕಿಗೆ ಬಂದಿದ್ದು, ಅದನ್ನು ಸರಿಪಡಿಸಲಾಗಿತ್ತು. ಇದೀಗ ಮತ್ತೆ ಅಂಥದ್ದೇ ದೋಷ ಕಾಣಿಸಿಕೊಂಡಿದೆ. ವಾಟ್ಸಾಪ್ನಲ್ಲಿನ ಇಂಥದ್ದೊಂದು ದೋಷದ ಬಗ್ಗೆ ಸೈಬರ್ ತಜ್ಞ ರಾಜಶೇಖರ್ ರಾಜಾಹರಿಯಾ ಎಂಬುವವರು ಟ್ವೀಟರ್ನಲ್ಲಿ ಗಮನ ಸೆಳೆದಿದ್ದು,. ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್, ಕೂಡಲೇ ಇಂಡೆಕ್ಸ್ನಿಂದಾಗಿ ಗೂಗಲ್ನಲ್ಲಿ ಆಗುತ್ತಿರುವ ಅಸುರಕ್ಷತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.