ಕಂಬಳಕ್ಕೆ ಟೆಕ್ ಸ್ಪರ್ಶ: ಡಿಜಿಟಲ್ ಗೇಟ್!
– ಸ್ವಯಂಚಾಲಿತ ಗೇಟ್ ವ್ಯವಸ್ಥೆ
– ಸಮಯ ವ್ಯರ್ಥ ಆಗಲ್ಲ… ನಿಖರ ಫಲಿತಾಂಶ
– ಫೆ.3ರಿಂದಲೇ ಪ್ರಯೋಗ: ಏನಿದು ಹೊಸ ಯೋಜನೆ?
NAMMUR EXPRESS NEWS
ಮಂಗಳೂರು: ಕಂಬಳದಲ್ಲಿ ವ್ಯರ್ಥ ಆಗುವ ಸಮಯವನ್ನು ಉಳಿಸುವ ಹಾಗೂ ನಿಖರ ಫಲಿತಾಂಶ ನೀಡಲು ಪ್ರಥಮ ಬಾರಿಗೆ ಕಂಬಳ ಕ್ರೀಡೆಗೆ ಸ್ವಯಂ ಚಾಲಿತ ಸಮಯ ಗೇಟ್ ವ್ಯವಸ್ಥೆ ಮತ್ತು ಫೋಟೋ ಫಿನಿಶ್ ಫಲಿತಾಂಶ ಅಳವಡಿಸಲು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ। ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿ, ಫೆ. 3ರಂದು ನಡೆಯುವ ಐಕಳ ಬಾವ ಕಂಬಳದಲ್ಲಿ ಪ್ರಾಯೋಗಿಕವಾಗಿ ನಡೆಯಲಿದೆ.
ತಯಾರಿ ಹೇಗಿದೆ :
ಈ ಹೈಟೆಕ್ ಸ್ಪರ್ಶವನ್ನು ಮುಂದೆ ಎಲ್ಲ ಕಂಬಳ ಗಳಿಗೂ ಅಳವಡಿಸಿ ಕಂಬಳದ ಸಮಯವನ್ನು 30 ಗಂಟೆಗೆ ಸೀಮಿತಗೊಳಿಸಲಾಗುವುದು. ಈ ತಂತ್ರಜ್ಞಾನ ಅಳವಡಿಕೆಗೆ ಅದಾನಿ ಫೌಂಡೇಶನ್ 10 ಲಕ್ಷ ರೂ. ನೀಡಿದೆ. ಕಂಬಳ ಭವನ ನಿರ್ಮಾಣ ಸೇರಿದಂತೆ ಪೂರಕ ಕೆಲಸಗಳಿಗೆ ಸಂಬಂಧಿಸಿ ಪಿಲಿಕುಳದಲ್ಲಿ 2 ಎಕ್ರೆ ಜಾಗ ಮೀಸಲಿಡುವಂತೆ ಮತ್ತು ಪಿಲಿಕುಳದಲ್ಲಿ ಕಂಬಳ ಆಯೋಜನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಚೆಕ್ ಅನ್ನು ಸಮಿತಿಗೆ ಹಸ್ತಾಂತರಿಸಿದ ಅದಾನಿ ಸಮೂಹ ಸಂಸ್ಥೆಯ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಕಂಬಳ ವಿಳಂಬ ಆಗುವುದನ್ನು ತಪ್ಪಿಸಲು ಈ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದರು. ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಮಾಜಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ್ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಕೋಣಗಳ ಯಜಮಾನರಾದ ಶ್ರೀಕಾಂತ್ ಭಟ್, ಕಂಬಳ ವ್ಯವಸ್ಥಾಪಕ ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು.
ಹೇಗೆ ಕೆಲ್ಸ ಮಾಡಲಿದೆ ಈ ನೂತನ ತಂತ್ರಜ್ಞಾನ?
ನಿಗದಿ ಪಡಿಸಿದ ಸೀಮಿತ ಅವಧಿಯೊಳಗೆ ಕೋಣ ಬಿಡದಿದ್ದರೆ ಗೇಟ್ ಬೀಳುತ್ತದೆ. ಇದಾದ 100 ಸೆಕೆಂಡಿನಿಂದ 10 ಸೆಕೆಂಡ್ ವರೆಗೆ ಕೆಂಪು ದೀಪ, 10ರಿಂದ 1 ಸೆಕೆಂಡ್ ವರೆಗೆ ಹಳದಿ ದೀಪ ಬೆಳಗುತ್ತದೆ. 0 ಬಂದಾಕ್ಷಣ ಹಸಿರು ದೀಪ ಬೆಳಗಿ ಓಟಕ್ಕೆ ಗ್ರೀನ್ ಸಿಗ್ನಲ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣ ಓಟ ಆರಂಭಿಸಬೇಕು. ಇಲ್ಲದಿದ್ದಲ್ಲಿ ಆ ಕೋಣ ಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು. ಸ್ಪರ್ಧೆಯಲ್ಲಿರುವ ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ಫೋಟೋ ಫಿನಿಶಿಂಗ್ ತಂತ್ರಜ್ಞಾನ ನೀಡಲಿದೆ.