ಟಿ.ಸಿ ನೀಡಲು ನಿರಾಕರಣೆ: ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ!
– ಶಿಕ್ಷಕರು ಬೈದು ಕಳಿಸಿದರೆಂದು ಮನನೊಂದಿದ್ದ ಬಾಲಕ..?
– ಬೈಂದೂರು ಆರಕ್ಷಕ ಠಾಣೆ ಮುಂದೆ ಮೃತದೇಹವಿರಿಸಿ ಕುಟುಂಬಸ್ಥರಿಂದ ಪ್ರತಿಭಟನೆ
NAMMUR EXPRESS NEWS
ಬೈಂದೂರು: ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ನೀಡದೆ ಬೈದು ಕಳಿಸಿದರೆಂದು ಬೇಸರಗೊಂಡ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಗ್ರಾಮದ ಮೇಲ್ಪಂಕ್ತಿ ಎಂಬಲ್ಲಿ ಸೋಮವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರೇರಣೆ ನೀಡಿದವರನ್ನು ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಸಾರ್ವಜನಿಕರು ಮತ್ತು ಕುಟುಂಬಸ್ಥರು ಬೈಂದೂರು ಆರಕ್ಷಕ ಠಾಣೆ ಮುಂದೆ ಮೃತದೇಹವಿರಿಸಿ ಪ್ರತಿಭಟನೆ ನಡೆಸಿದ್ದಾರೆ.
ನಿತಿನ್ ಬೈಂದೂರು ಸರಕಾರಿ ಪ್ರೌಢಶಾಲೆ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಹೋದಾಗ ಶಿಕ್ಷಕರು ಬೈದ್ದಿದ್ದಾರೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಶರಣಾಗಿದ್ದ ಎನ್ನಲಾಗಿದೆ. ಇದರಿಂದ ನೊಂದ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ತಪ್ಪಿತಸ್ಥರನ್ನುವ ತಕ್ಷಣ ಬಂಧಿಸಿ ಸಂತ್ರಸ್ಥ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು. ಅಲ್ಲಿಯವರೆಗೆ ಶವ ಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ನೋವು ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕುಂದಾಪುರ ಡಿ.ವೈ .ಎಸ್.ಪಿ ಬೆಳ್ಳಿಯಪ್ಪ, ಪ್ರೋಬೇಷನರಿ ಐಪಿಎಸ್ ಡಾ. ಹರ್ಷ ಪ್ರಿಯಂವದಾ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್ ಸಾರ್ವಜನಿಕರ ಜೊತೆ ಮಾತನಾಡಿ, ಈಗಾಗಲೇ ವಿಚಾರದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಯಾಗಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಒಂದು ವಾರದೊಳಗೆ ತನಿಖೆ ನಡೆಸಿ ಸೂಕ್ತ ವರದಿ ನೀಡಲಾಗುವುದು. ತಪ್ಪಿತಸ್ಥರೆಂದು ಕಂಡುಬಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಊರ ಹಿರಿಯರು, ಸಮಾಜದ ಮುಖಂಡರು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದು ಬಳಿಕ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮನಒಲಿಸಿದರು.
ಡೆತ್ ನೋಟ್ ನಲ್ಲಿ ಏನಿತ್ತು?
ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿ ಮುಂದೆ ಬೇರೆಡೆ ಪಿಯುಸಿ ಮಾಡಲು ಬಯಸಿದ್ದ. ಅದಕ್ಕಾಗಿ ಶಾಲೆಗೆ ಹೋಗಿ ತನ್ನ ಟಿಸಿಯನ್ನು ಕೊಡುವಂತೆ ಶಿಕ್ಷಕರಲ್ಲಿ ಕೇಳಿದ್ದಾನೆ. ಆದರೆ, ಆ ಮುಖ್ಯ ಶಿಕ್ಷಕ ಸುರೇಶ್ ಭಟ್ ವಿದ್ಯಾರ್ಥಿಗೆ ಟಿಸಿ ಕೊಟ್ಟು ಆಶೀರ್ವಾದ ಮಾಡುವ ಬದಲು ನೀನು ಈ ಶಾಲೆಯ ಸಿಸಿಟಿವಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಹಾಳು ಮಾಡಿದ್ದೀಯಾ; ಅದಕ್ಕಾಗಿ ನಿನ್ನ ಪೋಷಕರನ್ನು ಕರೆದುಕೊಂಡು ಬಾ; ಜತೆಗೆ ದಂಡವನ್ನು ಕಟ್ಟಬೇಕು. ಇಲ್ಲದಿದ್ದರೆ ಟಿಸಿಯನ್ನು ಕೊಡುವುದಿಲ್ಲ ಎಂದು ಹೆದರಿಸಿ ಬಿಟ್ಟಿದ್ದಾರೆ.ಇದರಿಂದ ಸಾಕಷ್ಟು ಹೆದರಿದ ವಿದ್ಯಾರ್ಥಿ ನಿತಿನ್ ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.
ವಿದ್ಯಾರ್ಥಿ ಡೆತ್ನೋಟ್ನಲ್ಲಿ ಬರೆದಿರುವ ಅಂಶ ಎಂಥವರ ಮನಸ್ಸನ್ನು ನೋಯಿಸುವಂತೆ ಇದೆ. “ ಅಮ್ಮ ಅಮ್ಮ ನಾನು ನಿಮ್ಮ ಹತ್ತಿರ ತುಂಬಾ ಸತ್ಯವನ್ನು ಮುಚ್ಚಿಟ್ಟಿದ್ದೇನೆ. ನಾನು ಶಾಲೆಗೆ ಹೋದಾಗ ನಿನಗೆ ಟಿಸಿ ಕೊಡೋದಕ್ಕೆ ಆಗೋದಿಲ್ಲ. ನೀನು ಸಿಸಿಟಿವಿ ಹಾಗೂ ಬೇರೆ ವಸ್ತುಗಳನ್ನು ಹಾಳು ಮಾಡಿದ್ದೀಯಾ. ನೀನು ನಿನ್ನ ಪೋಷಕರನ್ನು ಕರೆದುಕೊಂಡು ಬರಬೇಕು. ಜತೆಗೆ ಅದಕ್ಕೆ ದಂಡ ಕಟ್ಟಬೇಕು ಅಂತ ಹೇಳಿದ್ದಾರೆ. ಆದರೆ ನನಗೆ ನಿಮ್ಮ ಕಷ್ಟಗಳನ್ನು ನೋಡೋಕೆ ಆಗದೇ, ನಿಮ್ಮ ಹತ್ತಿರ ಏನನ್ನೂ ಹೇಳೋದಕ್ಕೆ ಆಗಲಿಲ್ಲ. ಅವರು ನನಗೆ ಶಾಲೆಯಲ್ಲಿ ತುಂಬಾನೇ ಅವಮಾನ ಮಾಡಿದ್ದಾರೆ. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಗೆ ನಾನೂ ಹೇಳಿದ್ದೆ, ನೀವು ಹೇಳಿದ ವಸ್ತುಗಳನ್ನು ನಾನು ಹಾಳು ಮಾಡಿಲ್ಲ ಅಂತ. ಆದರೆ ಅವರು ನೀನೆ ಇದನ್ನ ಮಾಡಿದ್ದು ಅಂತ ಹೇಳಿದ್ರು. ಅದಕ್ಕೆ ನಾನು ಟಿಸಿ ಕೊಡಿ ಸರ್ ಅಂತ ಹೇಳಿದ್ದೆ. ಆದರೆ ಆ ವಸ್ತಗಳನ್ನು ರಿಪೇರಿ ಮಾಡಿಸು ಆಮೇಲೆ ಟಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ” ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದ ಎನ್ನಲಾಗಿದೆ.