- ಪಕ್ಷಕ್ಕೆ ಬರಲು ಡಿಕೆಶಿ ಗ್ರೀನ್ ಸಿಗ್ನಲ್
- ಜೆಡಿಎಸ್ ಕಟ್ಟಲು ಹೋಗಿ ಹಾಳು ಮಾಡಿದ್ರಾ..?
ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ, ಮಾಜಿ ಶಾಸಕ, ಮಾಜಿ ಜೆಡಿಎಸ್ ಕಾರ್ಯದರ್ಶಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ದಿನಗಳು ಸಮೀಪದಲ್ಲಿವೆ. ಈ ಬಗ್ಗೆ ಮಾತುಕತೆ ಶುರುವಾಗಿದೆ.
ಕಾಗೋಡು ತಿಮ್ಮಪ್ಪ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದ್ದು ಕಾಂಗ್ರೆಸ್ ನಾಯಕ ಡಿಕೆಶಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕಳೆದ ಆರು ತಿಂಗಳಿನಿಂದ ಓಡಾಡುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದಾರೆ. ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸಿದ್ದರು. ಮಧು ಇನ್ನೂ ನಿರ್ಧರಿಸಿರಲಿಲ್ಲ.
ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹೆಸರೇ ದೊಡ್ಡ ಹುದ್ದೆ, ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ. ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ” ಎಂದು ಮಧು ಬಂಗಾರಪ್ಪ ಹೇಳಿದ್ದರು. ರಮೇಶ್ ಬಾಬು ಅವರು ಜೆಡಿಎಸ್ ತೊರೆಯಲು ಮುಂದಾಗಿದ್ದಾಗ ಈ ರೀತಿ ಪ್ರತಿಕ್ರಿಯಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಧು ಬಂಗಾರಪ್ಪ ಅವರ ಸೇರ್ಪಡೆ ಬಗ್ಗೆ ಸಮ್ಮತಿ ಸೂಚಿಸಿ, ಪಕ್ಷದ ಸಿದ್ಧಾಂತವನ್ನು ಒಪ್ಪಿ ಯಾರೇ ಬಂದರೂ ಸ್ವಾಗತಿಸುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಮಾರಸ್ವಾಮಿ ಹೇಳಿದ್ದೇನು?: ಬಂದು ಹೋಗುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಈಗಾಗಲೇ ಹಲವಾರು ಬಾರಿ ಇಬ್ಬರನ್ನೂ(ಮಧು, ರಮೇಶ್ ಬಾಬು) ಕರೆದು ಮಾತನಾಡಿದ್ದೇನೆ. ಇನ್ನೂ ನಾನು ಎಷ್ಟು ಬಾರಿ ಕರೆದು ಮಾತನಾಡಲಿ? ದೊಡ್ಡ ಪಕ್ಷಕ್ಕೆ ಸೇರಿ ಏನೋ ಸಾಧನೆ ಮಾಡುತ್ತೇನೆಂಬ ಭ್ರಮೆ ಅವರಲ್ಲಿದೆ. ನಮ್ಮ ಪಕ್ಷ ಅವರನ್ನು ಚೆನ್ನಾಗಿ ನೋಡಿಕೊಂಡಿತ್ತು. ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಎಂದು ಕುಮಾರಸ್ವಾಮಿ ಹೇಳಿದ್ದರು.