ಕುಸಿಯೋ ಹಂತದಲ್ಲಿರೋ ಮನೆಗಳು: ಶಾಸಕರ ಭೇಟಿಗೆ ಪಟ್ಟು!
– ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ
– ಕೊಪ್ಪ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ!
– ಅಪಾಯ ಆಗುವ ಮುನ್ನ ಅಧಿಕಾರಿಗಳ ಭೇಟಿಗೆ ಮನವಿ
NAMMUR EXPRESS NEWS
ಶೃಂಗೇರಿ: ಚಿಕ್ಟಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ ಉಂಟಾಗಿದೆ. ಪರಿಣಾಮ ಗ್ರಾಮದ ಹಲವು ಮನೆಗಳು ಹಾಗೂ ಮನೆಗಳ ಸಂಪರ್ಕಕ್ಕಿರುವ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಈ ಘಟನೆ ಸಂಭವಿಸಲು ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಏನಿದು ಘಟನೆ..??
ರಾಷ್ಟ್ರೀಯ ಹೆದ್ದಾರಿ 169 ರ ಪಕ್ಕದಲ್ಲಿರುವ ಜಾಗದ ಮಾಲೀಕರು ಕಳೆದ ಡಿಸೆಂಬರ್ನಲ್ಲಿ ಜಾಗದ ಮಣ್ಣನ್ನು ತೆಗೆದಿರುತ್ತಾರೆ. ಇದರಿಂದ ಮೇಲಿರುವ ಮನೆಗಳಿಗೆ ಹಾನಿಯಾಗುವ ಎಲ್ಲಾ ಮುನ್ಸೂಚನೆಯಿದ್ದರೂ ಯಾವುದೇ ಮುಂಜಾಗ್ರತೆ ವಹಿಸದೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುತ್ತಾರೆ.ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು ತನಗಿರುವ ರಾಜಕೀಯ ಪ್ರಾಬಲ್ಯದಿಂದ ಯಾರ ಮಾತನ್ನು ಲೆಕ್ಕಿಸದೆ ಮಣ್ಣು ತೆಗೆದಿದ್ದಾರೆ. ಕೊನೆಗೆ ಆ ಭಾಗದ ಪಂಚಾಯ್ತಿ ಸದಸ್ಯರ ಮಧ್ಯಪ್ರವೇಶದ ಬಳಿಕ ತಹಶೀಲ್ದಾರ್ಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು ನಂತರ ಹಲವು ಬಾರಿ ತಡೆಗೋಡೆ ಇತರ ಸುರಕ್ಷತಾ ಕ್ರಮಗಳಿಗಾಗಿ ಮನವಿ ಮಾಡಿದ್ದರು ಅದನ್ನ ಲೆಕ್ಕಿಸದೆ ಜಾಗದ ಮಾಲೀಕರು ಸುಮ್ಮನಾಗಿದ್ದರು. ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ದಿನದಿಂದ ದಿನಕ್ಕೆ ಧರೆ ಕುಸಿಯುತ್ತಿದ್ದು ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕೂಡ ಬಿರುಕು ಬಿಟ್ಟಿದೆ. ಸನಿಹದಲ್ಲಿರುವ 4-5 ಮನೆಗಳಿಗೆ ಕುಸಿಯುವ ಭೀತಿ ಎದುರಾಗಿದೆ. ಎಲ್ಲರೂ ದಿನಗೂಲಿ ಬಡ ಕಾರ್ಮಿಕರೇ ವಾಸಿಸುತ್ತಿದ್ದು ಇದ್ದ ಒಂದು ಸೂರು ಕಳೆದಕೊಂಡರೆ ಮುಂದೇನು ಅನ್ನೋ ಯೋಚನೆ ಶುರುವಾಗಿದೆ.
ಅಡ್ಡಹಾಕಿದರೂ ನಿಲ್ಲಿಸಿ ಸಮಸ್ಯೆ ಆಲಿಸದ ಉಸ್ತುವಾರಿ ಸಚಿವರರು!
ಕಳೆದ ವಾರ ಶೃಂಗೇರಿ ತಾಲೂಕಿನ ನೆರೆ ಪೀಡಿತ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಇತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮನವಿ ಮಾಡಲು ಕಾದು ಅಡ್ಡ ಹಾಕಿದ್ದಾರೆ. ಆದರೆ ಯಾವುದೇ ವಾಹನ ನಿಲ್ಲಿಸದೇ ಮುಂದೆ ಹೋಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ತಹಶೀಲ್ದಾರ್ರವರು ಬಂದು ಭೇಟಿ ನೀಡಿ ಹೋಗಿದ್ದರು.
ಸಿಗದ ಸೂಕ್ತ ಪರಿಹಾರ,ಭದ್ರತೆಯ ಭರವಸೆ ಸ್ಥಳಕ್ಕೆ ಶಾಸಕರ ಭೇಟಿಗೆ ಮನವಿ
ಸೂಕ್ತ ಪರಿಹಾರ,ಭದ್ರತೆಗಾಗಿ ಹಾಗೂ ಬಡಜನರ ಮಾತನ್ನು ಕೇಳದೇ ತನಗಿರುವ ರಾಜಕೀಯ ಪ್ರಭಾವ ಬಳಸಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಜಾಗದ ಮಾಲೀಕನ ವಿರುದ್ಧ ಗ್ರಾಮಸ್ಥರು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಜಾಗದ ಮಾಲೀಕನಿಗೆ ಶೃಂಗೇರಿ ಕ್ಷೇತ್ರದ ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದ್ದು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಭದ್ರತೆ,ಪರಿಹಾರ ಕೊಡಿಸುವಂತೆ ಸಂತ್ರಸ್ತ ಗ್ರಾಮಸ್ಥರು ಪಟ್ಟುಹಿಡಿದ್ದಾರೆ.
ಕೊಪ್ಪ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ!
ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಅಂಡಿಗಲ್ಲು ರಾಘವೇಂದ್ರ ಎ ಜೆ ಯವರ ಮನೆ ಹತ್ತಿರ ಗುಡ್ಡ ಕುಸಿದು ಸುಮಾರು 400 ಟ್ರ್ಯಾಕ್ಟರ್ ಆಗುವಷ್ಟು ಮಣ್ಣು ಬಿದ್ದಿದ್ದು ಸುಮಾರು 50 ರಿಂದ 100 ಅಡಿ ಧರೆ ಕುಸಿತವಾಗಿದ್ದು, ಗೋಡೆ ಕುಸಿತವಾಗುವ ಸಂಭವವಿದೆ. ಗುರುವಾರ ರಾತ್ರಿಯಿಂದ ಶುರುವಾದ ಈ ಕುಸಿತ ಇನ್ನೂ ಬೀಳುತ್ತಲೆ ಇದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಈ ಇನ್ನಲೇ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಾಗುವ ಅನಾಹುತ ತಪ್ಪಿಸಲಿ ಎಂಬುದು ಸ್ಥಳೀಯರ ಮನವಿ ಮಾಡಿದ್ದಾರೆ.