- ಹೊಸ ಅಧ್ಯಕ್ಷರ ಆಯ್ಕೆಗೆ ಕೂಡಿ ಬರದ ಮುಹೂರ್ತ
- ಆದರ್ಶ ಹುಂಚದಕಟ್ಟೆ, ತೀಲಿ ರಾಘವೇಂದ್ರ ಪೈಪೋಟಿ?
ಪೊಲಿಟಿಕಲ್ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್
ತೀರ್ಥಹಳ್ಳಿ: ಕಾಂಗ್ರೆಸ್ ಸಂಘಟನೆ ಕೊರತೆಯಿಂದ ದಿನೇ ದಿನೇ ತಣ್ಣಗಾಗುತ್ತಿರುವ ನಡುವೆ ತೀರ್ಥಹಳ್ಳಿಯಲ್ಲಿ ಯುವ ಕಾಂಗ್ರೆಸ್ ಅನಾಥವಾಗಿದೆ.
ಕಳೆದ ಕೆಲವು ತಿಂಗಳು ಹಿಂದೆಯೇ ಯುವ ಘಟಕದ ಅಧ್ಯಕ್ಷ ಪ್ರದೀಪ್ ಕೆಳಕೆರೆ ಅವಧಿ ಮುಗಿದು, ಅವರು ಸಂಘಟನೆಯಿಂದ ಜಾರಿಕೊಂಡಿದ್ದಾರೆ. ಇತ್ತ ಬಿಜೆಪಿ, ಮಂಜುನಾಥ ಗೌಡರ ಫಾಸ್ಟ್ ಎಂಟ್ರಿ ನಡುವೆ ಕಾಂಗ್ರೆಸ್ ಸಂಘಟನೆ ಕೊಂಚ ಮಂಕಾದಂತೆ ಕಾಣುತ್ತಿದೆ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ ಬಳಿಕ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಮುಂದಿರುವ ಈ ಹೊತ್ತಲ್ಲಿ ಕಾಂಗ್ರೆಸ್ ನಿದ್ರೆ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.
3 ವರ್ಷ ಪೂರೈಸಿದ ಪ್ರದೀಪ್: ಹಿರಿಯ ಕಾಂಗ್ರೆಸ್ ನಾಯಕ ಕೆಳಕೆರೆ ದಿವಾಕರ ಪುತ್ರ ಪ್ರದೀಪ್ 3 ವರ್ಷ ಅವಧಿ ಪೂರೈಸಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಯುವ ಘಟಕದ ಪದಾಧಿಕಾರಿಗಳ ನೇಮಕ ನಡೆದಿಲ್ಲ.
ಇಬ್ಬರ ನೇಮಕ: ಕಾಂಗ್ರೆಸ್ ಈಗಾಗಲೇ 2 ಬ್ಲಾಕ್ ಮಾಡಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದೆ. ಒಂದು ಕಡೆ ಕೆಸ್ತೂರು ಮಂಜುನಾಥ್, ಮತ್ತೊಂದೆಡೆ ಯುವ ನಾಯಕ ಮುಡುಬ ರಾಘವೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಾಗೆಯೇ ಯುವ ಘಟಕವನ್ನೂ ಗ್ರಾಮಾಂತರ, ಪಟ್ಟಣ ಎಂದು ಎರಡು ಭಾಗ ಮಾಡಲು ತಯಾರಿ ನಡೆದಿದೆ ಎನ್ನಲಾಗಿದೆ.
ಯಾರಿಗೆ ಹೊಣೆ?: ಗ್ರಾಮ ಪಂಚಾಯತ್ ಮತ್ತು ತಣ್ಣಗಾಗಿರುವ ಪಕ್ಷ ಸಂಘಟನೆ ದೃಷ್ಟಿಯಿಂದ ಈ ನೇಮಕ ಮಹತ್ವ ಪಡೆದಿದೆ. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಕೆಲವು ಹೆಸರುಗಳು ಚರ್ಚೆಯಲ್ಲಿವೆ. ಪಕ್ಷದಲ್ಲಿ ಕೊಂಚ ಓದಿಕೊಂಡು ಜಾಣ ನಡೆ ಇಡುವ ಆದರ್ಶ ಹುಂಚದಕಟ್ಟೆ ಹೆಸರು ಮುಂಚೂಣಿಯಲ್ಲಿದೆ. ಇನ್ನೊಂದೆಡೆ ಪುಟ್ಟೊಡ್ಲು ರಾಘವೇಂದ್ರ(ತೀಲಿ) ಅವರ ಹೆಸರೂ ಇದೆ. ಇದಲ್ಲದೆ ಪಣಿರಾಜ್ ಕಟ್ಟೆಹಕ್ಕಲು, ಅಮರನಾಥ ಶೆಟ್ಟಿ, ಜಯಕರ ಶೆಟ್ಟಿ, ಪೂರ್ಣೇಶ ಕೆಳಕೆರೆ ಹೆಸರೂ ಕೇಳಿ ಬಂದಿದೆ. ಆದರೆ ಆದಷ್ಟು ಬೇಗ ಕಾಂಗ್ರೆಸ್ ತೀರ್ಥಹಳ್ಳಿ ಹೈಕಮಾಂಡ್ ನೇಮಕ ಮಾಡಬೇಕು, ಗ್ರಾಮ ಮಟ್ಟದಲ್ಲಿ ಸಂಘಟನೆಗೆ ಮುಂದಾಗಬೇಕು ಎಂಬ ಒತ್ತಾಯ ಕಾಂಗ್ರೆಸ್ ಯುವ ನಾಯಕರಿಂದ ಕೇಳಿ ಬಂದಿದೆ. ವಿಶೇಷ ಸುದ್ದಿಗಳನ್ನು ನಮ್ಮೂರ್ಎಕ್ಸ್ಪ್ರೆಸ್.ಇನ್ನಲ್ಲಿ ವೀಕ್ಷಿಸಿ