ಹೇಗಿದೆ ಈ ವರ್ಷದ ಮಳೆಗಾಲ?
– 2024ರ ಮಳೆ ನಕ್ಷತ್ರಗಳು ಯಾವುದು?
– ಭರ್ಜರಿ ಮುಂಗಾರು ಮಳೆ ಮುನ್ಸೂಚನೆ
NAMMUR EXPRESS NEWS
ರಾಜ್ಯದಲ್ಲಿ ಎಲ್ಲೆಡೆ ಬರಗಾಲ ತಾಂಡವವಾಡುತ್ತಿದೆ. ರಣ ಬಿಸಿಲು ಜನ-ಜಾನುವಾರುಗಳ ಜೀವ ಹಿಂಡುತ್ತಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಜ್ಯದ ಅಲ್ಲಲ್ಲಿ ಬೇಸಿಗೆ ಮಳೆ ಹನಿಯುತ್ತಿದೆಯಾದರೂ ತಾಪಮಾನ ಮಾತ್ರ 42 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಹಾಗಿದ್ದರೆ, ಮಳೆಗಾಲ ಯಾವಾಗ ಆರಂಭವಾದೀತು? ಬಿಸಿಲಿನ ಆರ್ಭಟಕ್ಕೆ ಬಾಯಿ ತೆರೆದಿರುವ ಭೂಮಿಯ ಒಡಲು ಯಾವಾಗ ತಂಪುಗೊಂಡೀತು? ನೀರಿನ ಹಾಹಾಕಾರಕ್ಕೆ ಕೊನೆ ಯಾವಾಗ? ಎಂಬ ಹಲವು ಪ್ರಶ್ನೆಗಳು ಜನಮನದಲ್ಲಿ ಚರ್ಚೆಯಾಗುತ್ತಿವೆ.
– ಭರ್ಜರಿ ಮುಂಗಾರು ಮಳೆ ಮುನ್ಸೂಚನೆ
ಸಾಮಾನ್ಯವಾಗಿ ಅಶ್ವಿನಿ ಮಳೆ ವರ್ಷದ ಮೊದಲ ಮಳೆಯಾದರೂ ಅಪ್ಪಟ ಮಳೆಗಾಲ ಆರಂಭವಾಗುವುದು ಜೂನ್ ಮೊದಲ ವಾರದಲ್ಲಿ. ‘ಆರಿದ್ರಾ’ ಮಳೆಯಿಂದ ಮುಂಗಾರು ಮಳೆ ಶುರುವಾಗುತ್ತದೆ. ಆರಿದ್ರಾದಿಂದ ವಿಶಾಖದ ವರೆಗೂ ಮಳೆಗಾಲವಿರುತ್ತದೆ. ಹವಾಮಾನ ಇಲಾಖೆ ಈ ವರ್ಷ ಮುಂಗಾರು ಮಳೆ ಉತ್ತಮವಾಗಲಿದೆ ಎಂಬ ಮಾಹಿತಿ ನೀಡಿದೆ. ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಯ ಯೂರೋಪಿಯನ್ ಕೇಂದ್ರವು ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಮಾಹಿತಿ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು’ ಬಾರಿಯ ಮುಂಗಾರು ಮುನ್ನೋಟ ಚೆನ್ನಾಗಿದೆ. ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ’ ಎಂದು ಮಾಹಿತಿ ಹಂಚಿಕೊಂಡಿದೆ.
– ಮಳೆ ನಕ್ಷತ್ರಗಳ ಮಾಹಿತಿ
ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಮಳೆ ನಕ್ಷತ್ರಗಳ ಲೆಕ್ಕಾಚಾರದ ಆಧಾರದ ಮೇಲೆ ಇಂತಿಷ್ಟೇ ಮಳೆ ಆಗಬಹುದು ಎಂದು ನಿರ್ಣಯಿಸುತ್ತ ಬಂದಿದ್ದಾರೆ. ನಮ್ಮ ಪಂಚಾಂಗಗಳಲ್ಲಿ ಮಳೆ ನಕ್ಷತ್ರಗಳ ಉಲ್ಲೇಖವಿದೆ. ಜ್ಯೋತಿಷ್ಯಶಾಸ್ತ್ರವು 16 ಮಳೆ ನಕ್ಷತ್ರಗಳನ್ನು ಗುರುತಿಸಿದೆ. ಇದರಲ್ಲಿ ಮೊದಲ 5 ನಕ್ಷತ್ರಗಳು ಬೇಸಿಗೆ ಮಳೆಗಳಾಗಿದ್ದು: ಮಳೆ ಬರುವ ಸಾಧ್ಯತೆ ಅಷ್ಟಾಗಿ ಇರುವುದಿಲ್ಲ. ಪಂಚಾಂಗದ ಪ್ರಕಾರ ಜೂನ್ ತಿಂಗಳ ಮೊದಲ ವಾರ ಅಪ್ಪಟ ಮಳೆಗಾಲ ಆರಂಭವಾಗುತ್ತದೆ. ಉಳಿದ 11 ನಕ್ಷತ್ರಗಳಾದ ಆರಿದ್ರಾ, ಪುನರ್ವಸು, ಪುಷ್ಯ ಆಶ್ಲೇಷ, ಮಖ, ಪುಬ್ಬ ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ನಕ್ಷತ್ರಗಳು ಅಪ್ಪಟ ಮಳೆ ನಕ್ಷತ್ರಗಳೆಂದು ಗುರುತಿಸಲ್ಪಟ್ಟಿವೆ.
2024ರ ಮಳೆ ನಕ್ಷತ್ರಗಳು
2024ನೇ ಸಾಲಿನಲ್ಲಿ 16 ಮಳೆ ನಕ್ಷತ್ರಗಳ ಪೈಕಿ ಯಾವ್ಯಾವ ಮಳೆ ಯಾವ್ಯಾವ ದಿನಾಂಕಗಳAದು ಆರಂಭವಾಗುತ್ತದೆ. ಯಾವ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂಬ ಮಾಹಿತಿ ಇಲ್ಲಿದೆ …
ಬೇಸಿಗೆ ಮಳೆ ನಕ್ಷತ್ರಗಳು
1. ಅಶ್ವಿನಿ ಮಳೆ: ದಿನಾಂಕ-13-4-2024 ಸಾಮಾನ್ಯ ಮಳೆ
2. ಭರಣಿ ಮಳೆ: ದಿನಾಂಕ-27-4-2024 ಸಾಮಾನ್ಯ ಮಳೆ
3. ಕೃತಿಕಾ ಮಳೆ: ದಿನಾಂಕ-11-5-2024 ಉತ್ತಮ ಮಳೆ
4. ರೋಹಿಣಿ ಮಳೆ: ದಿನಾಂಕ-24-5-2024 ಸಾಮಾನ್ಯ ಮಳೆ
5. ಮೃಗಶಿರ ಮಳೆ: ದಿನಾಂಕ 07-06-2024 ಸಾಮಾನ್ಯ ಮಳೆ
ಅಪ್ಪಟ ಮಳೆ ನಕ್ಷತ್ರಗಳು
1. ಆರಿದ್ರಾ ಮಳೆ: ದಿನಾಂಕ 21-06-2024 ಸಾಮಾನ್ಯ ಮಳೆ
2. ಪುನರ್ವಸು ಮಳೆ: ದಿನಾಂಕ 05-7-2024 ಸಾಮಾನ್ಯ ಮಳೆ
3. ಪುಷ್ಯ ಮಳೆ: ದಿನಾಂಕ-19-7-2024 ಉತ್ತಮ ಮಳೆ
4. ಆಶ್ಲೇಷ ಮಳೆ: ದಿನಾಂಕ-02-08-2024 ಸಾಮಾನ್ಯ ಮಳೆ
5. ಮಾಘೆ ಮಳೆ: ದಿನಾಂಕ 16-08-2024 ಉತ್ತಮ ಮಳೆ
6. ಹುಬ್ಬಮಳೆ: ದಿನಾಂಕ-30-8-2024 ಸಾಮಾನ್ಯ ಮಳೆ
7. ಉತ್ತರ ಮಳೆ: ದಿನಾಂಕ-13-09-2024 ಸಾಮಾನ್ಯ ಮಳೆ
8. ಹಸ್ತ ಮಳೆ: ದಿನಾಂಕ-26-09-2024 ಉತ್ತಮ ಮಳೆ
9. ಚಿತ್ತ ಮಳೆ: ದಿನಾಂಕ-10-10-2024 ಉತ್ತಮ ಮಳೆ
10. ಸ್ವಾತಿ ಮಳೆ: ದಿನಾಂಕ-23-10-2024 ಸಾಮಾನ್ಯ ಮಳೆ
11. ವಿಶಾಖ ಮಳೆ: ದಿನಾಂಕ-6-11-2024 ಸಾಮಾನ್ಯ ಮಳೆ
ಹೀಗೆ ಮೇಲ್ಕಾಣಿಸಿದ ದಿನಾಂಕಗಳಂದು ಆಯಾಯ ಮಳೆ ನಕ್ಷತ್ರಗಳು ಆರಂಭವಾಗಲಿದ್ದು: ಈ ಮಳೆಗಳು ಸುರಿಯುವ ಪ್ರಮಾಣದಲ್ಲಿ ಏರಿಳಿತವಾಗಬಹುದು ಎಂದು ಪಂಚಾಂಗದಲ್ಲಿ ನಮೂದಿಸಲಾಗಿದೆ.