ರಾಜ್ಯದ ಹಲವೆಡೆ ಮಳೆ ಆಗುತ್ತೆ!
– ದಕ್ಷಿಣ ಒಳನಾಡಿನಲ್ಲಿ ತುಸು ಬಿರುಸು
– ಹಲವು ಜಿಲ್ಲೆಗಳಲ್ಲಿ ಏರಿದ ತಾಪಮಾನ
NAMMUR EXPRESS NEWS
ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 4 ದಿನ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು,ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಮುಂದಿನ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮುಂದಿನ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.
ಬಿಸಿಲಿನ ತಾಪ ಏರಿಕೆ!
ಭಾನುವಾರ ಕಲಬುರಗಿಯಲ್ಲಿ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ರಾಯಚೂರು 44.3, ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ 4 ದಿನ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.