ರಾಜ್ಯದಲ್ಲಿ ಮುಂಗಾರು ಜೂನ್ 6ಕ್ಕೆ ಎಂಟ್ರಿ!
– ಈ ಬಾರಿ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆ
– ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ!
NAMMUR EXPRESS NEWS
ಬೆಂಗಳೂರು: ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಪ್ರವೇಶವಾಗಿದ್ದು, ಈಗಾಗಲೇ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿರುವುದ ರಿಂದ ಜೂ.6 ಅಥವಾ 7ರಂದು ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳ ಗಳಲ್ಲಿ ಏಳು ದಿನಗಳ ಕಾಲ ಗುಡುಗು ಸಹಿತ ಪೂರ್ವ ಮುಂಗಾರು ಮಳೆಯಾಗಲಿದ್ದು, ಹಾಸನ, ಕೊಡಗು, ಮೈಸೂರು, ಉಡುಪಿ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಮೇಲೆ ಮಾರುತಗಳ ಪರಿಣಾಮ ದಿಂದಾಗಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉಳಿದಂತೆ ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಮುಂದಿನ 72 ಗಂಟೆಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ. ನಂತರ ರಾಜ್ಯದಾದ್ಯಂತ 2 ರಿಂದ 3 ಡಿಗ್ರಿ ಕ್ರಮೇಣ ಕುಸಿಯಲಿದೆ ಎಂದು ಹೇಳಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡ ಕವಿದ ಆಕಾಶ ಇರಲಿದ್ದು, ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿದೆ. ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲೀನ್ಸ್ ಮತ್ತು ಕೊಮೊರಿನ್ ಪ್ರದೇಶದ ಉಳಿದ ಭಾಗಗಳಿಗೆ ಮಾರುತಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಲಕ್ಷದ್ವೀಪ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾದ ಸಮಯದಲ್ಲಿ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಾರಿ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆ
ಈ ಬಾರಿ ವಾಡಿಕೆಗಿಂತ ಹೆಚ್ಚು ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಆಗಿದೆ. ಮಾರ್ಚ್ 1ರಿಂದ ಮೇ ಅಂತ್ಯದವರಿಗೆ ಹಲವು ಕಡೆ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅತಿ ಹೆಚ್ಚು ಮಂಗಳೂರಿನ ಪಣಂಬೂ ರಿನಲ್ಲಿ 366 ಎಂ. ಎಂ. ಚಿಕ್ಕಮಗಳೂರಿನಲ್ಲಿ 363 ಎಂ.ಎಂ ದಾಖಲೆ ಮಳೆ ಸುರಿದಿದೆ. ತದ ನಂತರದ ಸ್ಥಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಪ್ರದೇಶ 28 2 ಎಂ. ಎಂ ಮತ್ತು ಆಗುಂಬೆ 279 ಎಮ್ ಎಮ್ ದಾಖಲಿಸಿವೆ. ಕಾರವಾರ ಮತ್ತು ಕೊಪ್ಪಳದಲ್ಲಿ ಅತಿ ಕಡಿಮೆ ಮಳೆ ಸುರಿದಿದೆ.
ಬೆಂಗಳೂರಲ್ಲೂ ಉತ್ತಮ ಮಳೆ!
ಬೆಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲೂ ಪೂರ್ವ ಮುಂಗಾರು ಉತ್ತಮವಾಗಿದೆ. ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಮಳೆ 181 ಎಂ ಎಂ ದಾಖಲಾಗಿದೆ. ಎಚ್.ಎ.ಎಲ್ ವಿಮಾನ ನಿಲ್ದಾಣದ ಸುತ್ತ ಮುತ್ತ 157 ಎಂ.ಎಂ ಮತ್ತು ಜಿಕೆವಿಕೆ ಸುತ್ತಲೂ 191 ಎಂ.ಎಂ ಮಳೆ ಸುರಿದಿದೆ.