ಕ್ರಿಯೇಟಿವ್ ವಿದ್ಯಾರ್ಥಿಗಳಿಂದ ಭತ್ತದ ನಾಟಿ!
– ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಂದ ಹಿರ್ಗಾನ ಬೆಂಗಾಲ್ ಕೃಷಿ ಭೂಮಿಯಲ್ಲಿ ಭತ್ತದ ನಾಟಿ
– ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವ ಮತ್ತು ಅನ್ನದಾತನ ಕಷ್ಟವನ್ನು ಅರಿಯುವ ವಿನೂತನ ಕಾರ್ಯಕ್ರಮದ
NAMMUR EXPRESS KARAVALI : ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಆಸಕ್ತಿ ಬೆಳೆಸುವ ಮತ್ತು ಅನ್ನದಾತನ ಕಷ್ಟವನ್ನು ಅರಿಯುವ ಕಾರ್ಯಕ್ರಮದ ಅಂಗವಾಗಿ ಕ್ರಿಯೇಟಿವ್ ಕಾಲೇಜ್ ನ ವಾಣಿಜ್ಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ನೆಡುವ ಕಾರ್ಯಕ್ರಮ ಹಿರ್ಗಾನದ ಬೆಂಗಾಲ್ ನ ಕೃಷಿ ಭೂಮಿಯಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ನೇಜಿ ನೆಡುವ ವಿಧಾನವನ್ನು ತಿಳಿಸಲಾಯಿತು. ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಕ್ರಿಯೇಟಿವ್ನ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಇಂದಿನ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಅನ್ನವನ್ನು ಗಳಿಸಬೇಕಾದರೆ ಅದರ ಹಿಂದೆ ಅಪಾರ ಪರಿಶ್ರಮವಿದೆ. ನಾವೆಲ್ಲರೂ ರೈತರ ಕಷ್ಟವನ್ನು, ಒಕ್ಕಲುತನದ ಆನಂದವನ್ನು ಪಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ಅವರು ಮಾತನಾಡುತ್ತಾ ಹಿಂದಿನ ಕೃಷಿ ಜೀವನ ಹಾಗೂ ಇಂದಿನ ಒತ್ತಡದ ಬದುಕಿನಲ್ಲಿ ಕೃಷಿ ಚಟುವಟಿಕೆಗಳೇ ಮನಸ್ಸಿಗೆ ಸಂತೋಷ ನೀಡುತ್ತವೆ. ಆತ್ಮ ಸಂತೋಷಕ್ಕಾಗಿಯಾದರೂ ನಾವು ರೈತಾಪಿ ಕಸುಬನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ತದನಂತರ ವಿದ್ಯಾರ್ಥಿಗಳಿಂದಲೇ ಒಂದು ಎಕರೆಯಷ್ಟು ಕೃಷಿಭೂಮಿಯಲ್ಲಿ ನಾಟಿಕಾರ್ಯ ನಡೆಯಿತು. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಭತ್ತದ ಬೆಳೆ ಬರುವವರೆಗೂ ವಿದ್ಯಾರ್ಥಿಗಳೇ ಅದರ ಮೇಲುಸ್ತುವಾರಿ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ . ಕಳೆ ಕೀಳುವುದರಿಂದ ಹಿಡಿದು ಕೊಯ್ಲಿನವರೆಗಿನ ಎಲ್ಲ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ಸ್ಥಳೀಯರ ನೆರವಿನೊಂದಿಗೆ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರಾದ ದಯಾನಂದ ಕುಲಾಲ್, ಸುಂದರ ಶೆಟ್ಟಿ, ರತ್ನಾ, ರೇಖಾ, ಶುಭಲತಾ, ಪ್ರಣೀತಾ ಹಾಗೂ ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ರಾಘವೇಂದ್ರ ರಾವ್, ಶ್ರೀನಿಧಿ, ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು