ಬೆಳಕಿನ ಹಬ್ಬಕ್ಕೆ ತಯಾರಿ: ಲಕ್ಷ್ಮಿ ಪೂಜೆ ಸಂಭ್ರಮ!
– ಹೂವು, ಹಣ್ಣು, ಅಲಂಕಾರಿಕ ವಸ್ತು ಖರೀದಿಸಿ ಅಂಗಡಿ ಪೂಜೆಗೆ ಸಿದ್ಧತೆ: ಮನೆ ಮನೆಯಲ್ಲೂ ಪೂಜೆ
– ಮಾವಿನ ತೋರಣ, ವಿಧ ವಿಧದ ಲೈಟಿಂಗ್ಸ್, ಬಾಳೆ ದಿಂಡಿನಿಂದ ಅಂಗಡಿ ಸಿಂಗಾರ
NAMMUR EXPRESS ನ್ಯೂಸ್
ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು ಪ್ರತಿ ಮನೆ ಹಾಗೂ ಅಂಗಡಿಗಳಲ್ಲೂ ಹಬ್ಬದ ತಯಾರಿ ಜೋರಾಗಿದೆ. ಅದರಲ್ಲೂ ವರ್ತಕರಿಗೆ ದೀಪಾವಳಿ ಹೊಸ ಆರ್ಥಿಕ ವರ್ಷದ ಆರಂಭದ ದಿನ. ಹೊಸ ಲೆಕ್ಕದ ಪುಸ್ತಕಗಳನ್ನು ಈ ದಿನವೇ ತೆಗೆಯುವುದು ತಲೆತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿ. ಅದರಂತೆ ಎಲ್ಲೆಡೆ ಅಂಗಡಿ ಪೂಜೆಗೆ ಅಂಗಡಿಗಳನ್ನು ಸ್ವಚ್ಛ ಮಾಡಿ, ಅಲಂಕಾರ ಮಾಡಿ ಹಾಗೂ ಕೆಲವು ಮಳಿಗೆಗಳಲ್ಲಿ ಝಗಮಗಿಸುವ ದೀಪಾಲಂಕಾರ ಮಾಡಿದ್ದು ಹೊಸ ವರ್ಷದ ರಿತಿಯಲ್ಲಿ ಅಂಗಡಿ ಪೂಜೆಗೆ ಸಿದ್ಧಗೊಳ್ಳುತ್ತಿದ್ದಾರೆ. ಭಾನುವಾರ ಲಕ್ಷ್ಮಿ ಪೂಜೆ ಆಚರಣೆ ಮಾಡಿ ಅಂಗಡಿ ಪೂಜೆ ಮಾಡಿ ಎಲ್ಲರಿಗೂ ಸಿಹಿ ಹಂಚಲಾಗುತ್ತಿದೆ. ಸೋಮವಾರವೂ ಹಲವರು ಪೂಜೆ ಮಾಡಲಿದ್ದಾರೆ.
ಅಂಗಡಿಗಳಲ್ಲಿ ಖರೀದಿ ಭರಾಟೆ ಜೋರು!
ಇನ್ನೂ ಹಬ್ಬದ ಅಂಗವಾಗಿ ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದೆ. ಪ್ರತಿ ಸಲವೂ ಇದು ಮಾಮೂಲಿಯಾಗಿದೆ. ಆದರೂ ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣಿನ ದರ ದುಬಾರಿಯಾಗಿದ್ದರೂ, ಜನ ಪೂಜೆಗೆ ಖರೀದಿ ಮಾಡುತ್ತಿದ್ದಾರೆ. ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಸಹ ಸಾಮಗ್ರಿ ಖರೀದಿಯ ಭರಾಟೆ ಜೋರಾಗಿದ್ದು, ದೇವರ ಮಂಟಪ ಅಲಂಕರಿಸಲು ಮತ್ತು ಅಂಗಡಿ ಮುಂದೆ ತೋರಣ ಕಟ್ಟಲು ಹಾಗೂ ಬಾಳೆಗಿಡ, ಮಾವಿನ ಸೊಪ್ಪು, ಹೂವು ಹಾಗೂ ಹಣ್ಣುಗಳನ್ನು ತಂದು ಅಂಗಡಿ ಪೂಜೆಗೆ ತಯಾರಿ ನಡೆಸುತ್ತಿರುವಂತಹ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.