ಆರ್.ಅಶೋಕ್ ಅವರಿಗೆ ವಿಪಕ್ಷ ನಾಯಕನ ಪಟ್ಟ
– ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ
– ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
NAMMUR EXPRESS NEWS
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್ ಈಗ ವಿರೋಧ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯನ್ನೂ ಅಂತಿಮಗೊಳಸಿದ್ದು, ಈ ಸಂಬಂಧ ಶುಕ್ರವಾರ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅಂತಿಮವಾಗಿ ಆರ್.ಅಶೋಕ್ ನೇಮಕಗೊಂಡಿದ್ದಾರೆ. ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಖಾಸಗಿ ಹೋಟೆಲ್ನಲ್ಲಿ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಸಿಂಗ್ ಗೌತಮ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ವಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬಂದಂತೆ ಇದೆ. ವಿಧಾನ ಪರಿಷತ್ನಲ್ಲಿ ಒಬಿಸಿ ಇಲ್ಲವೇ ದಲಿತ ನಾಯಕರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ಮಾಡಲಾಗಿದೆ.
ಅಲ್ಲದೆ, ವಿಧಾನಸಭೆಯಲ್ಲಿ ಜೂನಿಯರ್ – ಸೀನಿಯರ್ ಫಾರ್ಮುಲಾವನ್ನು ಅಳೆದು ತೂಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜ್ಯೂನಿಯರ್ ಕೋಟಾದಲ್ಲಿ ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಈ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮತ್ತೊಬ್ಬ ಪ್ರಬಲ ನಾಯಕ, ಮಾಜಿ ಸಚಿವ ಅಶ್ವತ್ ನಾರಾಯಣ್ ಅವರನ್ನು ಆಯ್ಕೆ ಮಾಡಿದರೆ ಇಬ್ಬರೂ ಕಿರಿಯರನ್ನು ಆಯ್ಕೆ ಮಾಡಿದಂತೆ ಆಗುತ್ತದೆ ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.