ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ನಿಯಮ
– ಪ್ರಾಥಮಿಕ, ಪ್ರೌಢ ಶಾಲೆ ಪ್ರವಾಸಕ್ಕೆ ಷರತ್ತುಗಳೇನು?
– ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕು
NAMMUR EXPRESS NEWS
ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಬಗ್ಗೆ ಸ್ಪಷ್ಟಿಕರಣವನ್ನು ನೀಡಿದೆ. ಹೊರ ರಾಜ್ಯಗಳಿಗೆ, ಭಾರತೀಯ ರೈಲ್ವೆಯಲ್ಲಿ ಸಹ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಕುರಿತು ಸ್ಪಷ್ಟಿಕರಣ ಎಂಬ ವಿಷಯವನ್ನು ಒಳಗೊಂಡಿದೆ.
ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ. ಕೆಲವು ಶಾಲೆಯವರು ಹೊರ ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಮನವಿ ಸಲ್ಲಿಸಿರುತ್ತಾರೆ. ಆದರೆ ದಿನಾಂಕ 14/11/2022ರ ಸುತ್ತೋಲೆಯಲ್ಲಿ ಹೊರ ರಾಜ್ಯಕ್ಕೆ ಪವಾಸ ಕೈಗೊಳ್ಳಲು ಅನುಮತಿ ನೀಡುವ ಕುರಿತು ಯಾವುದೇ ನಿರ್ದೇಶನವಿರುವುದಿಲ್ಲ, ಆದ್ದರಿಂದ ಈ ಬಗ್ಗೆ ಅನುಮತಿ ನೀಡುವ ಕುರಿತು ಮಾರ್ಗದರ್ಶನ ಕೋರಿರುತ್ತಾರೆ ಎಂದು ಸುತ್ತೋಲೆ ಹೇಳಿದೆ.
ಖಾಸಗಿ ಶಾಲೆ ನವೀಕರಣ, ಪ್ರತಿ ವರ್ಷ ದಾಖಲೆ ಕೇಳುವುದು ಸರಿಯಲ್ಲ ಅದರಂತೆ ಪರಿಶೀಲಿಸಲಾಗಿ, ಪ್ರತಿ ಶೈಕ್ಷಣಿಕ ವರ್ಷ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಷರತ್ತುಗಳ ಅನ್ವಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುಮತಿ ನೀಡಲು ಸೂಚಿಸಿದೆ ಹಾಗೂ ಸದರಿ ಶೈಕ್ಷಣಿಕ ಪುವಾಸವನ್ನು ಭಾರತೀಯ ರೈಲ್ವೇಯ ರೈಲುಗಳಲ್ಲಿಯೂ ಹಮ್ಮಿಕೊಳ್ಳಬಹುದು ಎಂದು ತಿಳಿಸಿದೆ ಎಂದು ತಿಳಿಸಿದೆ.
ಶೈಕ್ಷಣಿಕ ಪ್ರವಾಸ, ಷರತ್ತುಗಳು; ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ಅದರಲ್ಲಿಯೂ ಷರತ್ತುಗಳನ್ನು ಉಲ್ಲೇಖಿಸಲಾಗಿದೆ.
ಈ ಹಿಂದಿನ ಸುತ್ತೋಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ದೇಶಾದ್ಯಂತ ಗಂಭೀರ ಪರಿಸ್ಥಿತಿ ಉಂಟಾಗಿದ್ದ ಪ್ರಯುಕ್ತ ಯಾವುದೇ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಬಾರದೆಂದು ಸೂಚಿಸಿಲಾಗಿರುತ್ತದೆ. ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಮಾರ್ಗದರ್ಶನ ಮತ್ತು ಅನುಮತಿ ನೀಡಲು ಕೋರಿರುತ್ತಾರೆ. ಅದರಂತೆ ಷರತ್ತುಗಳ ಅನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮನವಿಗಳನ್ನು ಪರಿಶೀಲಿಸಿ ಅನುಮತಿ ನೀಡಲು ಸೂಚಿಸಲಾಗಿದೆ.
– ಪ್ರತಿ ವರ್ಷ ಡಿಸೆಂಬರ್ ಮಾಹೆಯ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ಮಾಹೆಯ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುವುದು.
– ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವುದು.
– ಪ್ರವಾಸ ಶೈಕ್ಷಣಿಕ ಪ್ರವಾಸವಾಗಿರಲು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವುದು.
– ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು.
– ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಂದು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣದಿನ/ ಭಾನುವಾರ ಶಾಲೆ ನಡೆಸಿ ಕೊರತೆ ಬೀಳುವ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸುವುದು.
– ಇಲಾಖೆಯಿಂದ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ.
– ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೂಣೆಗಾರರಾಗಿರುತ್ತಾರೆ. ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ.
– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.
– ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಖಾಸಗಿ ಹಾಗೂ ಮಿನಿ ಬಸ್ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.
– ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಕೋವಿಡ್ 19ಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕು.
– ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು.