ಕುಡುಕರಿಗೆ ಕುಡುಕರು ಎನ್ನುವಂತಿಲ್ಲ!
– ಕುಡುಕ ಪದ ತೆಗೆದು ಮದ್ಯಪ್ರಿಯ ಎನ್ನಬೇಕು..!
– ಆಧಾರ್ ಲಿಂಕ್ ಮಾಡಿ ಮದ್ಯಪ್ರಿಯರಿಗೆ ಸೌಲಭ್ಯ ಕಲ್ಪಿಸಬೇಕು
– ಮದ್ಯಪ್ರಿಯರ ಸಂಘದಿಂದ ಸರ್ಕಾರಕ್ಕೆ ಮನವಿ.. ಏನೇನು ಗೊತ್ತಾ..?
NAMMUR EXPRESS NEWS
ಅರಸೀಕೆರೆ: ಕುಡುಕರಿಗೆ ಕುಡುಕರು ಎನ್ನುವಂತಿಲ್ಲ!. ಕುಡುಕ ಪದ ತೆಗೆದು ಮದ್ಯಪ್ರಿಯ ಎನ್ನಬೇಕು.ಆಧಾರ್ ಲಿಂಕ್ ಮಾಡಿ ಮದ್ಯಪ್ರಿಯರಿಗೆ ಸೌಲಭ್ಯ ಕಲ್ಪಿಸಬೇಕು. ಇನ್ನು 20 ಬೇಡಿಕೆ ಇಟ್ಟು ಮದ್ಯಪ್ರಿಯರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಹಾಗಾದ್ರೆ ಮನವಿ ಏನೇನು ಗೊತ್ತಾ..?
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 20 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ವತಿಯಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮದ್ಯಪಾನ ಪ್ರಿಯರ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಕೆ.ಎಸ್.ಶಿವಾನಂದಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿಲ್ಲ. ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಲು ಡಿ.3ರಂದು ಬೆಳಗಾವಿಗೆ ತೆರಳಲಿದ್ದು, ಡಿ.14ರಂದು ಪ್ರತಿಭಟನೆ ನಡೆಸಲಾಗುವುದು. ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮದ್ಯಪಾನ ಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಮಕ್ಕಳಿಗೆ ಮಾಸಾಶನ ಅನಾರೋಗ್ಯಕ್ಕೆ ತುತ್ತಾದಲ್ಲಿ ವೈದ್ಯಕೀಯ ಸೌಲಭ್ಯ, ನಿಗಮ ಮಂಡಳಿ ಸ್ಥಾಪನೆ ಮಾಡುವುದು, ವಸತಿ ಇಲ್ಲದವರಿಗೆ ವಸತಿ ಸೌಲಭ್ಯ, ಮೃತಪಟ್ಟರೆ 10 ಲಕ್ಷರೂ. ವಿಮಾ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ರಾಜ್ಯ ಘಟಕದ ಖಜಾಂಚಿ ಮಧು ಹೇಳಿದರು, ಸರ್ಕಾರ ‘ಕುಡುಕ’ ಎಂಬ ಪದವನ್ನು ತೆಗೆಯಬೇಕು. ಮದ್ಯಪಾನ ಪ್ರಿಯರು ಮದ್ಯವನ್ನು ಖರೀದಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿ, ಅವರಿಗೆ ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯ ಹರಳಕಟ್ಟೆ ರೇಣುಕಪ್ಪ ಆಗ್ರಹಿಸಿದರು.