9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್.!
– ಚಿಕ್ಕ ಮಕ್ಕಳನ್ನು ಮೋಟಾರ್ ವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಕ್ರಮ
– ಹೈಕೋರ್ಟ್ ನೋಟಿಸ್: ಏನಿದು ಹೊಸ ನಿಯಮ?
NAMMUR EXPRESS NEWS
ಬೆಂಗಳೂರು: ಒಂಭತ್ತು ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಸುರಕ್ಷತಾ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಸಾಧನಗಳು ಲಭ್ಯವಾಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಬೆಂಗಳೂರಿನ ಡಾ.ಕೆ. ಅರ್ಚನಾಭಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು. ಜತೆಗೆ, ಆರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜನವರಿಗೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಚಿಕ್ಕಮಕ್ಕಳಿಗೆ ಅಗತ್ಯ ಹೆಲ್ಮೆಟ್ ಗಳು ದೊರಕುತ್ತಿಲ್ಲ. ಹಾಗಾಗಿ ಅವುಗಳು ಲಭ್ಯವಾಗುವಂತೆ ಮಾಡಬೇಕು. ಮೋಟಾರು ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದರು.