ಶಾಲೆಗೂ ಬರಲಿದೆ ಸೆಮಿಸ್ಟರ್ ಪದ್ಧತಿ!
– ಶಾಲಾ ಮಕ್ಕಳ ಇನ್ನು ದೊಡ್ಡ ಬ್ಯಾಗ್ ಹೊರಬೇಕಿಲ್ಲ!
– ಮುಂದಿನ ವರ್ಷದಿಂದ ಹೊಸ ಪಠ್ಯ ಕ್ರಮ ಜಾರಿ
– 2 ಭಾಗಗಳಾಗಿ ಪಠ್ಯ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧಾರ
NAMMUR EXPRESS NEWS
ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಮುಂದಿನ ವರ್ಷದಿಂದ ಪಠ್ಯ ಗಳನ್ನು ಎರಡು ಭಾಗಗಳಾಗಿ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಕುರಿತು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಪ್ರತಿ ವಿಷಯದ ಪಠ್ಯಪುಸ್ತಕವೂ ಸೆಮಿಸ್ಟರ್ 1, ಸೆಮಿಸ್ಟರ್ 2 ಎಂದು ಮುದ್ರಣವಾಗಲಿದೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎಂದು ಹೇಳಿದೆ. ಈ ಮಧ್ಯೆರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದ್ದು, 2024-25ನೇ ಸಾಲಿನಿಂದಲೇ ಅಳವಡಿಸಲಾಗುತ್ತಿದೆ ಎನ್ನಲಾಗಿದೆ. ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.