ರಾಜ್ಯದಲ್ಲಿ ಕರೋನಾ ಅಲರ್ಟ್: ಶಾಲಾ-ಕಾಲೇಜು ಪ್ರವಾಸ ರದ್ದು..!
– ಶೀತ, ನೆಗಡಿ ಇದ್ದವರಿಗೆ ಮಾಸ್ಕ್ ಕಡ್ಡಾಯ
– ಡಿಸೆಂಬರ್ ತಿಂಗಳು ಮಾತ್ರ ಪ್ರವಾಸ!
NAMMUR EXPRESS NEWS
ಬೆಂಗಳೂರು: ಕರೋನಾ ಪ್ರಕರಣಗಳು ಕಾಣಿಸಿಕೊಂಡ ಬೆನ್ನಲ್ಲೇ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಮೊಟುಕುಗೊಳಿಸಲು ಹಲವು ಶಾಲಾ-ಕಾಲೇಜುಗಳು ನಿರ್ಧರಿಸಿವೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಮಕ್ಕಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಡಿ.31ರವರೆಗೂ ಅನುಮತಿ ನೀಡಲಾಗಿತ್ತು. ಪ್ರವಾಸಕ್ಕೆ ಅನುಮತಿ ಪಡೆದಿದ್ದ ಶೇ 80ರಷ್ಟು ಶಾಲಾ-ಕಾಲೇಜುಗಳು ಈಗಾಗಲೇ ಪ್ರವಾಸ ಮುಗಿಸಿವೆ. ಉಳಿದ ಶಾಲೆಗಳಿಗೆ ಪ್ರವಾಸ ರದ್ದು ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸದಿದ್ದರೂ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸ ಸ್ಥಗಿತಗೊಳಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ. ‘ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮದ ಬಹುತೇಕ ಶಾಲೆಗಳು ನವೆಂಬರ್ನಲ್ಲೇ ಪ್ರವಾಸ ಕಾರ್ಯಗಳನ್ನು ಪೂರ್ಣಗೊಳಿಸಿವೆ.
ಶೇ 10ರಷ್ಟು ಶಾಲೆಗಳು ಬಾಕಿ ಇರಬಹುದು. ಸಾರ್ವಜನಿಕ ಸ್ಥಳಗಳಿಗೆ ತೆರಳುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸ ರದ್ದುಗೊಳಿಸುವಂತೆ ಎಲ್ಲ ಶಾಲೆಗಳಿಗೂ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ರುಪ್ಪ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ. ಇಲಾಖೆ ನೀಡಿರುವ ಅನುಮತಿ 10 ದಿನಗಳಲ್ಲಿ ಮುಗಿಯಲಿದೆ. ಹಾಗಾಗಿ, ಈಗಾಗಲೇ ಪ್ರವಾಸಕ್ಕೆ ಮುಂಗಡ ಪಾವತಿಸಿ, ಬಸ್, ರೈಲು, ವಸತಿ ಗೃಹಗಳನ್ನು ನಿಗದಿ ಮಾಡಿಕೊಂಡಿರುವ ಶಾಲೆಗಳು ಕೋವಿಡ್ ಮಾರ್ಗದರ್ಶಿ ಅನುಸರಿಸಿ, ಸುರಕ್ಷಿತವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿ ಬರಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮುಂಗಡ ಪಾವತಿಸದ ಶಾಲೆಗಳಿಗೆ ಪ್ರವಾಸ ರದ್ದುಗೊಳಿಸಲು ಸೂಚಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಬಿ.ಬಿ.ಕಾವೇರಿ ಮಾಹಿತಿ ನೀಡಿದರು.
ಶೀತ, ನೆಗಡಿ ಇದ್ದವರಿಗೆ ಮಾಸ್ಕ್: ಕೋವಿಡ್ ಕುರಿತು ಭಯಪಡುವ ಅಗತ್ಯವಿಲ್ಲದಿದ್ದರೂ, ಪೋಷಕರ ಆತಂಕ ನಿವಾರಿಸಲು ಶೀತ, ನೆಗಡಿ ಇರುವ ಮಕ್ಕಳು ಮಾಸ್ಕ್ ಧರಿಸಿ ಬರುವಂತೆ ಸೂಚಿಸಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗುವುದು. ತೀರ ಅಗತ್ಯವಿದ್ದರೆ ಸಮೀಪದ ವೈದ್ಯರನ್ನು ಸಂರ್ಕಿಸುವಂತೆ ಮನವಿ ಮಾಡಿದ್ದೇವೆ. ಪರೀಕ್ಷಾ ಸಮಯಗಳು ಹತ್ತಿರ ಬರುತ್ತಿರುವ ಕಾರಣ ಮುನ್ನೆಚ್ಚರಿಕೆ ಅನಿವಾರ್ಯ ಎನ್ನುತ್ತಾರೆ ಬೆಂಗಳೂರು ದಕ್ಷಿಣ ಡಿಡಿಪಿಐ ನಿಂಗರಾಜಪ್ಪ.