ಇನ್ಮುಂದೆ ಸರ್ಕಾರಿ ನೌಕರಿ ಪಡೆಯಲು ಎಸ್ಎಸ್ಎಲ್ಸಿ ಕಡ್ಡಾಯ!
– ಎಸ್.ಎಸ್.ಎಲ್ ಸಿಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ: ಸರ್ಕಾರದ ಸ್ಪಷ್ಟನೆ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರಿ ಹುದ್ದೆಗಳ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆ ಮಾಡಿದ್ದು, ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಎಸ್ ಎಸ್ ಎಲ್ ಸಿ ಕಡ್ಡಾಯ ಮಾಡಲಾಗಿದೆ. ರಾಜ್ಯ ಸರ್ಕಾರವು ಜವಾನ, ದಲಾಯತ್ ಸೇರಿ ಯಾವುದೇ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೂ ಇನ್ಮುಂದೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು, ಈ ಸಂಬಂಧ ಕರ್ನಾಟಕ ಸಿವಿಲ್ ಸೇವೆಗಳ ಕಾಯಿದೆ-1978ರಲ್ಲಿ ತಿದ್ದುಪಡಿಯೊಂದಿಗೆ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿ ಗ್ರೂಪ್ ಸಿ ಹುದ್ದೆಗಳ ನೇರ ನೇಮಕದ ಸಂದರ್ಶನವನ್ನೂ ರದ್ದುಪಡಿಸಲಾಗಿದ್ದು, ನೇಮಕಾತಿ ಕಾಯಂ ಅಥವಾ ಬಡ್ತಿಗೆ ಮಾನದಂಡವಾಗಿ ಐದು ವರ್ಷ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮಾವಳಿಯಲ್ಲೂ ಬದಲಾವಣೆ ತರಲಾಗಿದೆ. ಗ್ರೂಪ್ ಡಿ ಸೇವೆ ಮತ್ತು ಮೇಲ್ಪಟ್ಟ ರಾಜ್ಯ ಸಿವಿಲ್ ಸೇವೆಗಳ ನೇಮಕಾತಿಗೆ ಎಸ್ ಎಸ್ ಎಲ್ ಸಿ ಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.