ಕೊಪ್ಪಳದಲ್ಲಿ ಲಾಕರ್ ನೊಳಗೆ ಸಿಲುಕಿದ್ದ ಮಗು ರಕ್ಷಣೆ
-ಹಾವೇರಿ : ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರು ನೀರುಪಾಲು
-ಹಾಸನ : ಹೇಮಾವತಿ ನದಿಯಲ್ಲಿ ಮುಳುಗಿ ಯುವತಿ ಸಾವು
-ಶಿವಮೊಗ್ಗ : ಪೊಲೀಸ್ಗೆ ಫೋಟೋ ಕೊಟ್ಟ ಪ್ರಯಾಣಿಕ ಬಸ್ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್
NAMMUR EXPRESS NEWS
ಕೊಪ್ಪಳ: ಮನೆಯ ಲಾಕರ್ ನೊಳಗೆ ಅಚಾನಕ್ ಆಗಿ ಸಿಲುಕಿಕೊಂಡಿದ್ದ 21 ತಿಂಗಳ ಮಗುವನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೆಲ ಗಂಟೆಗಳ ಕಾಲ ಕುಟುಂಬಸ್ಥರು ಮತ್ತು ನೆರೆ ಮನೆಯವರನ್ನು ಗಾಬರಿಯಾಗಿಸಿದ್ದ ಈ ಘಟನೆ ಸುಖಾಂತವಾಗಿದ್ದಾಗಿ ಎಲ್ಲರೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ನಡೆದದ್ದು ನಗರದ ಎಸ್ಪಿ ಕಚೇರಿ ಡಿಸಿಆರ್ ಬಿ ವಿಭಾಗದ ಸಿಪಿಐ ಸುರೇಶ ಅವರ ಮನೆಯಲ್ಲಿ. ಅವರ ಮಗು ಭಾನುವಾರ ಸಂಜೆ ಆಟವಾಡುತ್ತ ಕೋಣೆಯೊಳಗೆ ಸೇರಿಕೊಂಡಿದೆ. ಈ ವೇಳೆ ಅಚಾನಕ್ ಆಗಿ ಡೋರ್ ಲಾಕ್ ಆಗಿದ್ದು, ತೆಗೆಯಲು ಬಂದಿಲ್ಲ. ಹೊರಗಿನಿಂದಲೂ ತೆಗೆಯಲು ಸಾಧ್ಯವಾಗಿಲ್ಲ.
ಹೊರಗಿದ್ದ ತಾಯಿ ಎಷ್ಟೇ ತೆಗೆಯಲು ಯತ್ನಿಸಿದರೂ ತೆರೆದುಕೊಂಡಿಲ್ಲ. ಇದರಿಂದ ಮಗು ಹಾಗೂ ತಾಯಿ ಗಾಬರಿಯಾಗಿದ್ದು ಅತ್ತು ಅತ್ತು ಸುಸ್ತಾಗಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ತಕ್ಷಣವೇ ನೆರವಿಗೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಲ್ಯಾಡರ್ ಸಹಾಯದಿಂದ ಕಿಟಕಿ ಬಳಿ ಬಂದಿದ್ದಾರೆ. ಈ ವೇಳೆ ಮಗು ಗಾಬರಿಯಾಗದಂತೆ ಕಾರ್ಯಾಚರಣೆ ನಡೆಸುವುದು ಸವಾಲಿನ ಕಾರ್ಯವಾಗಿತ್ತು. ಹೀಗಾಗಿ ಕಿಟಕಿ ಬಳಿಯಿಂದ ಮಗುವನ್ನು ಕರೆದು ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಇತರ ಸಿಬ್ಬಂದಿ ಲಾಕರ್ ನ್ನು ಕ್ರೋಬರ್, ಸುತ್ತಿಗೆ ಹಾಗೂ ಬೋಲ್ಟ್ ಕಟರ್ ಬಳಸಿ ಲಾಕ್ ತೆಗೆದು ಮಗುವನ್ನು ರಕ್ಷಿಸಿದ್ದಾರೆ. ಎಲ್ಲರನ್ನೂ ಗಾಬರಿಗೊಳಿಸಿದ್ದ ಘಟನೆಯನ್ನು ಅತ್ಯಂತ ನಾಜೂನಿನಿಂದ ನಿಭಾಯಿಸಿದ್ದಾರೆ.
ಹಾವೇರಿ : ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರು ನೀರುಪಾಲು
ಹಾವೇರಿ: ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗರಾಜ (11), ಹೇಮಂತ (12) ನೀರಿನಲ್ಲಿ ಮುಳುಗಿ ಮೃತಪಟ್ಟವರು. ನಿನ್ನೆ ಭಾನುವಾರ ಸಂಜೆ ಒಟ್ಟಿಗೆ ಇವರಿಬ್ಬರು ನೀರಿನ ಹೊಂಡಕ್ಕೆ ಈಜಲು ತೆರಳಿದ್ದರು. ಆದರೆ ನೀರಿನಿಂದ ಹೊರಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಬಾಲಕರಿಬ್ಬರು ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೀರಿನ ಹೊಂಡದ ಬಳಿ ಬಾಲಕರ ಚಪ್ಪಲಿ, ಬಟ್ಟೆಗಳೆಲ್ಲವೂ ಪತ್ತೆಯಾಗಿದೆ. ಹೀಗಾಗಿ ನೀರಿನ ಹೊಂಡದಲ್ಲಿ ಇಳಿದು ಹುಡಕಾಟ ನಡೆಸಿದಾಗ ಬಾಲಕರ ಮೃತದೇಹಗಳು ಪತ್ತೆಯಾಗಿದೆ. ಮೃತದೇಹಗಳನ್ನು ಗ್ರಾಮಸ್ಥರೇ ಹೊರ ತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಹೇಮಾವತಿ ನದಿಯಲ್ಲಿ ಮುಳುಗಿ ಯುವತಿ ಸಾವು
ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ. ಹಾಸನ ತಾಲೂಕಿನ, ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ ಹನುಮ ಜಯಂತಿ ಹಿನ್ನಲೆಯಲ್ಲಿ ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ನಿತ್ಯಾ ಮೃತದೇಹಕ್ಕಾಗಿ ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸ್ಗೆ ಫೋಟೋ ಕೊಟ್ಟ ಪ್ರಯಾಣಿಕ ಬಸ್ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್
ಶಿವಮೊಗ್ಗ :ಫೋಟೋ ನೋಡಿ ಫೈನ್ ಹಾಕುವ ಪ್ರಕ್ರಿಯೆ ಶಿವಮೊಗ್ಗದಲ್ಲಿಯು ಜೋರಾಗುತ್ತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಸರ್ಕಲ್ಗಳ ಕ್ಯಾಮಾರಗಳು ಬೆನ್ನ ಹಿಂದಿನಿಂದಲೇ ಫೋಟೋ ತೆಗೆದು ಇಂತಿಂಥ ರೂಲ್ಸ್ ಉಲ್ಲಂಘನೆ ಆಗಿದೆ ಅಂತಾ ನೋಟಿಸ್ ಕಳಿಸ್ತಿದೆ.. ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಲೋಕಲ್ಸ್ ಸೋಶಿಯಲ್ ಮೀಡಿಯಾ ಮೂಲಕ ಕಳಿಸುವ ಫೋಟೋಗಳನ್ನ ಆಧರಿಸಿಯು ಫೈನ್ ಚೀಟಿ ಹರಿಯುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು 9(c). Driving Dangerously (Using Mobile phone) (Section 184(c) of the MV Act) (Others) (Section 184(c) of the MV Act) [Fine – 5000] ಅಡಿಯಲ್ಲಿ ಸಿಟಿ ಬಸ್ ಚಾಲಕನ ವಿರುದ್ಧ ರಸೀದಿ ಹರಿದಿದ್ದಾರೆ. ದಿನಾಂಕ 23-12-2023 ರಂದು ಸವಳಂಗ ರಸ್ತೆಯಲ್ಲಿ ಶಶಿಕುಮಾರ್ ಸಿಟಿ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ಮಾಡುತ್ತಿರುವುದನ್ನ ಆ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಫೋಟೋ ಹೊಡೆದು ಪೊಲೀಸರಿಗೆ ಕಳುಹಿಸಿದ್ದರು. ಈ ಫೋಟೋ ಸಾಕ್ಷಿಯನ್ನ ಆಧರಿಸಿ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕನಿಗೆ ರೂ 5,000/- ದಂಡ ವಿಧಿಸಿ ಕ್ರಮ ಕೈಗೊಂಡಿರುತ್ತಾರೆ.