ಕರ್ನಾಟಕಕ್ಕೆ ಜ.1ರಿಂದ ಮತ್ತೆ ಮಳೆ ಆಗುವ ಸಾಧ್ಯತೆ!
-ಹವಾಮಾನ ಇಲಾಖೆ ಮುನ್ಸೂಚನೆ
– ಜಿಲ್ಲಾವಾರು ವರದಿ!
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಕೆಲವು ದಿನಗಳ ಕಾಲ ಮರೆಯಾಗಿದ್ದ ಮಳೆರಾಯ ಹೊಸ ವರ್ಷಕ್ಕೆ ಮತ್ತೆ ಆಗಮಿಸುವ ಮುನ್ಸೂಚನೆ ನೀಡಿದ್ದಾರೆ. ಜನವರಿ 1ರಿಂದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾರ್ಭಟ ಕಂಡು ಬರಲಿದೆ. ಇದರೊಂದಿಗೆ ಚಳಿಯ ವಾತಾವರಣವು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೊಸ ವರ್ಷಕ್ಕೆ ಹಿಂಗಾರು ಮಳೆ ತಂಪೆರೆಯಲಿದೆ. ಈವರೆಗೆ ಶುಷ್ಕ ವಾತಾವರಣವನ್ನೇ ಕಂಡಿದ್ದ ಉತ್ತರ ಒಳನಾಡಿಗೂ ಈ ಬಾರಿ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದಿವೆ.
ಈ ಭಾಗದಲ್ಲಿ 2024ರ ಜನವರಿ 2 ರಂದು ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ವಿಜಯಪುರ ಮತ್ತು ಕೊಪ್ಪಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಆಗಲಿದೆ. ಹಲವೆಡೆ ತುಂತುರು ಮಳೆ ಸಂಭವವು ಇದೆ. ಇನ್ನೂ ಜನವರಿ 1ರಿಂದ ಎರಡು ದಿನ ಕರಾವಳಿ ಭಾಗ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ. ಒಂದೆರೆಡು ಕಡೆಗಳಲ್ಲಿ ಜೋರು ಮಳೆಯ ದರ್ಶನವು ಈ ವೇಳೆ ಆಗಲಿದೆ. ಕರಾವಳಿ ಭಾಗದಲ್ಲಿ ಇತರ ಭಾಗಕ್ಕಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಈ ಒಳನಾಡಿನ ಜಿಲ್ಲೆಗಳಿಗೂ ಮಳೆ
ದಕ್ಷಿಣ ಒಳನಾಡಿನಲ್ಲೂ ಜನವರಿ ಮೊದಲ ಎರಡು ದಿನ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ. ಎರಡು ದಿನ ಪೈಕಿ ಜನವರಿ 1ರಂದು ಚಾಮರಾಜನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಲಿದೆ. ಜನವರಿ 2ರಂದು ಮೇಲಿನ ಮೂರು ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಹಾಸನ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಲವೆಡೆ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಳೆಯ ನಡುವೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಹೊತ್ತಿಗೆ ಚಳಿಯ ವಾತಾವರಣ, ದಟ್ಟ ಮಂಜು ಕಂಡು ಬರಲಿದೆ. ಮಧ್ಯಾಹ್ನ ಹೊತ್ತಿನಲ್ಲಿ ಎಂದಿನಂತೆ ಬಿಸಲಿನ ಕಾವು ಹೆಚ್ಚಿರಲಿದೆ. ಉತ್ತರ ಒಳನಾಡಿನಲ್ಲಿ ಶುಷ್ಕ ವಾತಾವರಣ ಕಂಡು ಬರಲಿದೆ.
ಗರಿಷ್ಠ-ಕನಿಷ್ಠ ತಾಪಮಾನದ ವಿವರ
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ ಹೊನ್ನಾವರ, ಕಾರವಾರದಲ್ಲಿ ದಾಖಲಾಗಿದೆ. ಇಲ್ಲಿ ಗರಿಷ್ಠ ಕ್ರಮವಾಗಿ 36.5 ಡಿಗ್ರಿ ಸೆಲ್ಸಿಯಸ್, 36.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದಂತೆ ಪೆಣಂಬೂರಿನಲ್ಲಿ 35.6 ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣದಲ್ಲಿ 34.5 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32, ಶಿವಮೊಗ್ಗದಲ್ಲಿ 32, ಬಾಗಲಕೋಟೆ 31, ವಿಜಯಪುರ 31, ಮಂಡ್ಯ, ಮೈಸೂರು, ಚಿಂತಾಮಣಿ ಗಳಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರದಲ್ಲಿ ಅತ್ಯಧಿಕ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.