ಹೊಸ ಆರ್ಥಿಕ ವರ್ಷಕ್ಕೆ ಸ್ವಾಗತ!
– ಏ.1ರಿಂದ ಏನೇನ್ ಜಾಸ್ತಿ ಆಗುತ್ತೆ?
– ಹಲವು ನಿಯಮ ಬದಲು: ಏನೇನು ಬದಲಾಗುತ್ತೆ?
NAMMUR EXPRESS NEWS
ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಎನ್ ಪಿ ಎಸ್ಗೆ ಲಾಗಿನ್ ಆಗಲು ಆಧಾರ್ ಕಡ್ಡಾಯ, ಎಸ್ ಬಿ ಐ ಡೆಬಿಟ್ ಕಾರ್ಡ್ ಶುಲ್ಕ ಹೆಚ್ಚಳ, ಇಪಿಎಫ್ ಒ ನಿಯಮ ಬದಲಾವಣೆ, ಫಾಸ್ ಟ್ಯಾಗ್ ಗೆ ಕೆವೈಸಿ ಇವೂ ಸೇರಿದಂತೆ ಏ.1ರಿಂದ ವಿತ್ತೀಯ ಜಗತ್ತಿನಲ್ಲಿ ಹಲವು ಬದಲಾವಣೆಗಳು ಆಗಲಿವೆ. ಜನಸಾಮಾನ್ಯರ ಜೇಬಿಗೆ ನೇರ ಪರಿಣಾಮ.
-ಫಾಸ್ಟ್ಯಾಗ್ ಕೆವೈಸಿ ಕಡ್ಡಾಯ
ಏ . 1ಕ್ಕೂ ಮೊದಲು ಫಾಸ್ಟ್ ಟ್ಯಾಗ್ ಕೆವೈಸಿ ಅನ್ನು ಅಪ್ಡೇಟ್ ಮಾಡುವಂತೆ ಎನ್ ಎಚ್ ಎಐ ಸೂಚನೆ ನೀಡಿದೆ. ಒಂದೊಮ್ಮೆ ಕೆವೈಸಿ ಮಾಡಲು ವಿಫಲವಾದರೆ ನಿಮ್ಮ ಫಾಸ್ಟ್ ಟ್ರ್ಯಾಕ್ ಖಾತೆ ನಿಷ್ಕ್ರಿಯವಾಗಲಿದೆ. ನಂತರ ಖಾತೆಯಲ್ಲಿ ಹಣವಿದ್ದರೂ, ನಿಮ್ಮ ಟೋಲ್ ಪಾವತಿಸಲು ನಿಮಗೆ ಸಾಧ್ಯವಾಗುವುದಿಲ್ಲ.
– ಇನ್ಮುಂದೆ ಇ-ಇನ್ಸೂರೆನ್ಸ್ ಅಷ್ಟೇ !
ಏ .1ರ ಬಳಿಕ ಲೈಫ್, ಹೆಲ್ತ್ ಅಥವಾ ಯಾವುದೇ ಜನರಲ್ ವಿಮೆ ಪಾಲಿಸಿ ಖರೀದಿಸಿದರೂ, ವಿಮಾ ಕಂಪನಿಗಳು ಕಾಗದದ ರೂಪದ ದಾಖಲೆ ಪತ್ರಗಳನ್ನು ನೀಡುವುದಿಲ್ಲ. ಕೇವಲ ಡಿಜಿಟಲ್ ಫಾರ್ಮೆಟ್ ನಲ್ಲಷ್ಟೇ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತವೆ.
-ಮ್ಯೂಚುವಲ್ ಫಂಡ್ ಬಂದ್ ಆಗಬಹುದು!
ಮ್ಯೂಚುವಲ್ ಫಂಡ್ ಗಳಿಗೂ ಕೆವೈಸಿ ಏ.1ರಿಂದ ಕಡ್ಡಾಯವಾಗಲಿದೆ ಯಾರು ಕೆವೈಸಿ ಮಾಡಿಸಿಲ್ಲವೋ ಅವರ ಎಂಎಫ್ ವಹಿವಾಟುಗಳು ಸ್ಥಗಿತಗೊಳ್ಳಲಿದೆ.
– ವಿಮೆ ನಿಯಮ ಬದಲಾವಣೆ
ಏಪ್ರಿಲ್ 1ರಿಂದ ವಿಮಾ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಐಆರ್ ಡಿಎಐ ನಿಯಮಗಳನ್ನು ಬದಲಾಯಿಸುವ ಮೂಲಕ ಸರೆಂಡರ್ ಮೌಲ್ಯದ ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಗ್ರಾಹಕರು ಪಾಲಿಸಿಯನ್ನು ಎಷ್ಟು ತಡವಾಗಿ ಸರೆಂಡರ್ ಮಾಡುತ್ತಾರೋ ಅಷ್ಟು ಹೆಚ್ಚು ಸರೆಂಡರ್ ಮೌಲ್ಯ ಪಡೆಯಲಿದ್ದಾರೆ. ಪ್ರಸ್ತುತ ವರ್ಷಗಳೊಳಗೆ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಮುಖ ಬೆಲೆಗಿಂತ ಕಡಿಮೆ ಮೌಲ್ಯ ದೊರೆಯುತ್ತಿದೆ.
– ಎನ್ಪಿಎಸ್ ಗೆ ಆಧಾರ್ ಭದ್ರತೆ
ಎನ್ಪಿಎಸ್ ಖಾತೆಗೆ ಲಾಗಿನ್ ಆಗುವ ನಿಯಮಗಳನ್ನು ಪಿಂಚಣಿ ನಿಯಂತ್ರಕ ಸಂಸ್ಥೆ ಪಿಇಆರ್ ಡಿವಿ ಬದಲಾಯಿಸಿದೆ. ಇನ್ನು ಮುಂದೆ ‘ಎನ್ಪಿಎಸ್’ ಖಾತೆಗೆ ಲಾಗಿನ್ ಆಗಲು ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಅಲ್ಲದೆ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯೂ ಅಗತ್ಯವಾಗಿದೆ. ನಿಮ್ಮ ಆಧಾರ್ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಇದನ್ನು ನಮೂದಿಸಿದ ನಂತರದೇ ನೀವು ಎನ್ಪಿಎಸ್ ಖಾತೆಗೆ ಲಾಗಿನ್ ಆಗಬಹುದು.
– ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಆಯ್ಕೆ
ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿಯೂ ಪ್ರಮುಖ ಬದಲಾವಣೆ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ. ಅಂದರೆ, ನೀವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ನಡುವೆ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದು ಕೊಳ್ಳದೇ ಇದ್ದಲ್ಲಿ ನಿಮ್ಮ ಐಟಿಆರ್ ‘ಅನ್ನು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಸಲ್ಲಿಸಲಾಗುತ್ತದೆ. ಒಮ್ಮೆ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡರೆ ಹಳೆ ತೆರಿಗೆ ಪದ್ದತಿ ಆಯ್ದುಕೊಳ್ಳುವ ಆಯ್ಕೆ ಇರುವುದಿಲ್ಲ, ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗೂ ತೆರಿಗೆ ಪಾವತಿಸಬೇಕಾಗಿಲ್ಲ,
– ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೌಲಭ್ಯ
• “ಯೆಸ್ ಬ್ಯಾಂಕ್’ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ 10,000 ರೂ.ಗಳನ್ನು ಖರ್ಚು ಮಾಡಿದರೆ, ಅವರು ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ಪಡೆಯುತ್ತಾರೆ. ಈ ಸೌಲಭ್ಯ ಏ.1ರಿಂದ ಜಾರಿಗೆ ಬರಲಿದೆ.
• ದೇಶದ ಪ್ರಮುಖ ಖಾಸಗಿ ಬ್ಯಾಂಕ್ ‘ಐಸಿಐಸಿಐ ತನ್ನ ಗ್ರಾಹಕರಿಗೆ ಒಂದು ತ್ರೈಮಾಸಿಕದಲ್ಲಿ 35,000 ರೂ.ವರೆಗೆ ವೆಚ್ಚ ಮಾಡಿದಲ್ಲಿ ಕಾಂಪ್ಲಿಮೆಂಟರಿ ಏರ್ ಪೋರ್ಟ್ ಲಾಂಜ್ ಪ್ರವೇಶವನ್ನು ನೀಡುತ್ತಿದೆ.
– ಇಪಿಎಫ್ಒ ನಿಯಮ ಬದಲು
ಏಪ್ರಿಲ್ 1ರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿಯಮಗಳಲ್ಲಿ ದೊಡ್ಡ ಬದಲಾವಣೆಯೊಂದು ಜಾರಿಗೆ ಬರುತ್ತಿದೆ. ಇನ್ನು ಮುಂದೆ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಉದ್ಯೋಗಿಯ ಇಪಿಎಫ್ ಒ ಖಾತೆಯನ್ನು ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುತ್ತದೆ. ಈ ಹಿಂದೆ ಖಾತೆದಾರರ ಕೋರಿಕೆಯ ಮೇರೆಗೆ ಮಾತ್ರ ಖಾತೆಗಳನ್ನು ವರ್ಗಾಯಿಸಲಾಗುತ್ತಿತ್ತು.