-ಹಾವಿನಿಂದ ಪಾರಾಗಿ ಕೆರೆಗೆ ಬಿದ್ದ ಸ್ನೇಕ್ ಪ್ರಭಾಕರ್
-ಸೂಕ್ತ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ
ಶಿವಮೊಗ್ಗ: ಕಾಳಿಂಗ ಸರ್ಪವನ್ನು ಹಿಡಿಯಲು ಹೋದ ಉರಗ ತಜ್ಞರೊಬ್ಬರು ಹಾವಿನ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ ಕೋಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟದಲ್ಲಿ ನಡೆದಿದೆ.
ಮತ್ತಿಘಟ್ಟದ ಮನೆಯ ಹತ್ತಿರದ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರಭಾಕರ್ ಎಂಬ ಉರಗ ತಜ್ಞರೊಬ್ಬರು ಹಿಡಿಯಲು ಹೋದಾಗ ಸರ್ಪವು ತೋಟದ ನಡುವೆ ಇದ್ದ ಕೆರೆಗೆ ಇಳಿದಿದೆ. ಈ ವೇಳೆ ಕೆರಯಲ್ಲಿದ್ದ ಮರದ ತುಂಡಿನ ಮೇಲೆ ನಿಂತು ಕಾಳಿಂಗ ಸರ್ಪವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಪ್ರಯತ್ನಿಸಿದಾಗ ಅದು ಸ್ನೇಕ್ ಪ್ರಭಾಕರ್ ಮೇಲೆಯೇ ದಾಳಿ ನಡೆಸಲು ಮುಂದಾಗಿ ಪ್ರಭಾಕರ್ ಕಾಲಿಗೆ ಕಡಿಯಲು ಮುಂದಾಯಿತು. ಕೂಡಲೇ ಅದರಿಂದ ಸ್ನೇಕ್ ಪ್ರಭಾಕರ್ ತಪ್ಪಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಆಗ ಮತ್ತೆ ದಾಳಿ ಮಾಡಿದ ಕಾಳಿಂಗ ಸರ್ಪವು ಪ್ರಭಾಕರ್ ಮುಖಕ್ಕೆ ಕಚ್ಚಲು ಪ್ರಯತ್ನಿಸಿದೆ.
ಕೂಡಲೇ ಜಾಗೃತರಾದ ಅವರು ಹಾವಿನ ತಲೆಯನ್ನು ಹಿಡಿದುಕೊಂಡಿದ್ದು, ಅವರ ಜೊತೆಯಲ್ಲಿದ್ದ ಸಹಾಯಕ ಕೂಡಲೇ ಸರ್ಪವನ್ನು ಹಿಡಿದುಕೊಂಡಿದ್ದಾರೆ. ಒಟ್ಟಿನಲ್ಲಿ ಸೂಕ್ತ ಸಮಯ ಪ್ರಜ್ಞೆಯಿಂದ ಸ್ನೇಕ್ ಪ್ರಭಾಕರ್ ಕೂದಲೆಳೆ ಅಂತರದಲ್ಲಿ ಕಾಳಿಂಗಸರ್ಪದ ಕಡಿತದಿಂದ ಪಾರಾಗಿದ್ದು, ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಸಮೀಪದ ಕಾಡಿಗೆ ಬಿಡಲಾಗಿದೆ.
Curtesy: malnadtime from Youtube channel.