ಮಳೆ ಹಿನ್ನಲೆ : ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ!
– ರಜೆ ಘೋಷಿಸಿದ ತಾಲೂಕು ಶಿಕ್ಷಣಾಧಿಕಾರಿಗಳು
– ಗಡಾಯಿ ಕಲ್ಲು ಸೇರಿ ಫಾಲ್ಸ್ ಪ್ರವೇಶ ನಿಷೇಧಿಸಿದ ಅರಣ್ಯ ಇಲಾಖೆ
NAMMUR EXPRESS NEWS
ಬೆಳ್ತಂಗಡಿ: ಭಾರೀ ಮಳೆ ಹಿನ್ನಲೆ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಆಯಾಯ ಶಿಕ್ಷಣಾಧಿಕಾರಿಗಳು ತಹಶೀಲ್ದಾರ್ ಗಳ ಸೂಚನೆ ಮೇರೆಗೆ ರಜೆ ಘೋಷಿಸಿದ್ದಾರೆ. ತುಂಬಾ ಮಳೆ ಬರುತ್ತಿರುವ ಕಾರಣ ,ತೋಡು ಹಳ್ಳ ಕೈಸೇತುವೆಗಳನ್ನು ದಾಟಿ ಶಾಲೆಗೆ ಹಲವಾರು ವಿದ್ಯಾರ್ಥಿಗಳು ಬರುತ್ತಿರುವ ಕಾರಣ ಈ ದಿನ 4-07-2024 ರಂದು ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ದಯವಿಟ್ಟು ನಿಮ್ಮ ಮಕ್ಕಳನ್ನು ನೀರಿಗೆ ಇಳಿಯದಂತೆ ನೀರಲ್ಲಿ ಆಟವಾಡದಂತೆ ಜಾಗೃತೆವಹಿಸಿ ಎಂದು ಅವರು ಮೆಸೇಜ್ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನು ಬಂಟ್ವಾಳ ತಾಲೂಕು ಶಿಕ್ಷಣಾಧಿಕಾರಿಗಳು ಕೂಡ ಇದೆ ರೀತಿ ಮಾಹಿತಿ ನೀಡಿದ್ದಾರೆ.
ಗಡಾಯಿ ಕಲ್ಲು ಸೇರಿದಂತೆ ಫಾಲ್ಸ್ ಗಳಿಗೆ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ
ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜಲಪಾತಗಳ ವೀಕ್ಷಣೆಗೆ ಹೆಚ್ಚಿನಿ ಪ್ರವಾಸಿಗರು ಬರುವ ಸಾಧ್ಯತೆ ಇದ್ದು ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಲಪಾತಗಳಿಗೆ ಹಾಗೂ ನರಸಿಂಹಗಡ (ಗಡಾಯಿಕಲ್ಲು) ಗೆ ಪ್ರವೇಶ ನಿರ್ಬಂಧಿಸಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ, ಕುದುರೆಮುಖ, ಸೋಮೇಶ್ವರ, ಆಗುಂಬೆ.ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ಈ ವನ್ಯಜೀವಿ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಬರುವ (ಅರಶಿನಗುಂಡಿ,ಕೂಡ್ಲು, ಬರ್ಕಳ, ಹಿಡ್ಡು ಮನೆ, ವನಕಬ್ಬಿ, ಬಂಡಾಜೆ ಜಲಪಾತಗಳಿಗೆ ಹಾಗೂ ನರಸಿಂಹಗಡ- ಗಡಾಯಿಕಲ್ಲು, ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲು ಅವರು ಸೂಚಿಸಿದ್ದಾರ. ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಮಾಡುವುದಲ್ಲದೇ ಸೂಚನಾ ಫಲಕ ಅಳವಡಿಸುವುದು, ಅಗತ್ಯ ಕಾವಲುಗಾರರನ್ನು ನಿಯೋಜಿಸಿ ಪ್ರವೇಶ ನಿರ್ಬಂಧಿ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.
ಕರಾವಳಿಯಲ್ಲಿ ಭಾರೀ ಮಳೆ: ದಕ, ಉಡುಪಿ ಜಿಲ್ಲೆಯ ಕೆಲವೆಡೆ ಶಾಲೆಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಬೆಳಗ್ಗಿನಿಂದಲೇ ಜೋರಾಗಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನಕ್ಕೆ ಅಡ್ಡಿಯಾಗಿದೆ.
ಈ ನಡುವೆ, ದಕ್ಷಿಣ ಕನ್ನಡದಲ್ಲಿ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಅನುದಾನ, ಅನುದಾನ ರಹಿತ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಿ ಅಲ್ಲಿನ ತಹಶೀಲ್ದಾರರು ಗುರುವಾರ ಬೆಳಗ್ಗೆ ಆದೇಶ ಹೊರಡಿಸಿದ್ದಾರೆ.
ಜತೆಗೆ, ಉಡುಪಿ ಜಿಲ್ಲೆಯಲ್ಲಿಯೂ ಮಳೆಯು ಅವಾಂತರ ಸೃಷ್ಟಿಸಿದ್ದು, ಬೈಂದೂರು ಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಭಾರೀ ಮಳೆಯ ಮುನ್ನೆಚ್ಚರಿಕೆ
ಇನ್ನೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಮೂರು ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು-ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.