ಹೊರ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ!
– ರೈಲಿನಲ್ಲಿ ಬರುತ್ತಿತ್ತಾ ನಾಯಿ ಮಾಂಸ: ಹೋಟೆಲಿಗೆ ಸರಬರಾಜು?
– ಅರೆಸ್ಟ್ ಆಗಿದ್ದ ಹಿಂದೂ ಕಾರ್ಯಕರ್ತ ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು
NAMMUR EXPRESS NEWS
ಬೆಂಗಳೂರು: ಹೊರ ರಾಜ್ಯದಿಂದ ರೈಲಿನಲ್ಲಿ ಪ್ರತಿದಿನ ಸಾವಿರಾರು ಕೆಜಿ ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿ ಇದನ್ನ ನಗರದಲ್ಲಿರುವ ಬಹುತೇಕ ಹೋಟೆಲ್ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಲ ತಿಂಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್, ಸಾಕ್ಷಿ ಸಮೇತ ಬಿಬಿಎಂಪಿ, ಪೊಲೀಸರಿಗೆ ಮತ್ತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ.
ಈ ಸಂಬಂಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಶುಕ್ರವಾರ (ಜೂನ್ 26) ಸಂಜೆ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿ ಮಾಂಸ ತುಂಬಿದ್ದ ಚೀಲಗಳನ್ನು ತೆಗೆದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಇದು ನಾಯಿ ಮಂಸವಲ್ಲ, ಕುರಿ ಮಾಂಸ ಎಂದು ಹೇಳಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಾಂಸದ ಚೀಲಗಳು ಹಾಗೂ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಪುನೀತ್ ಕೆರೆಹಳ್ಳಿ, ಜೈಪುರದಿಂದ ಮಟನ್ ಅಂತ ಹೇಳಿ ಬೇರೆ ಮಾಂಸ ತಂದಿದ್ದಾರೆ. ಬೇರೆ ಮಾಂಸದ ಜೊತೆ ನಾಯಿ ಮಾಂಸವನ್ನೂ ತಂದಿದ್ದಾರೆ. ಇದು ರಸಲ್ ಮಾರ್ಕೆಟ್ಗೆ ಹೋಗುತ್ತದೆ. ಮಾಂಸ ತಂದು ಅದಕ್ಕೆ ಮೀನು ಎಂದು ಏಕೆ ಬೋರ್ಡ್ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನವಿದೆ. ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರುವ ಮಾಂಸವಿದು. ಇದನ್ನ ಐಸ್ ಬಾಕ್ಸ್ನಲ್ಲಿ ತಂದಿರುವುದಕ್ಕೆ ಅನುಮತಿ ಇದೆಯಾ ಇದರ ಬಗ್ಗೆ ಅನುಮಾನ ಇದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್, ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡಲು ಬಂದಿದ್ದ. ರೋಲ್ಕಾಲ್ಗೆ ಅವಕಾಶ ಕೊಟ್ಟಿಲ್ಲ ಎಂದು ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ್ದಾನೆ. ಇದು ಅಕ್ರಮ ಬ್ಯುಸಿನೆಸ್ ಅಲ್ಲ. ನಮ್ಮ ಬಳಿ ಎಲ್ಲ ಸರ್ಟಿಫಿಕೇಟ್ ಇದೆ. ಎಲ್ಲ ಬಾಕ್ಸ್ಗಳಲ್ಲಿ ಕುರಿ ಮಾಂಸ ಮಾತ್ರವಿದೆ. ನಾವು 12 ವರ್ಷದಿಂದ ಈ ಬ್ಯುಸಿನೆಸ್ ಮಾಡುತ್ತಿದ್ದೇವೆ. ಅವರೇ ಬಾಕ್ಸ್ ತೆರೆದಿದ್ದಾರೆ, ಕುರಿ ಮಾಂಸ ನೋಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಜೈಪುರಿಂದ ಬಂದ ಮಾಂಸದ ಬಗ್ಗೆ ವಾಗ್ದಾದ ನಡೆದಿರುವ ವಿಷಯ ತಿಳಿದು ಸ್ಥಳಕ್ಕೆ ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ ದೌಡಾಯಿಸಿದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿ ಮಾಂಸದ ಬಾಕ್ಸ್ ಗಳನ್ನು ಓಪನ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಗುಣಮಟ್ಟ ಹಾಗೂ ಮಾಂಸ ದೃಢೀಕರಣಕ್ಕಾಗಿ ಸ್ಯಾಂಪಲ್ ಪಡೆದಿಡಿದ್ದಾರೆ. ಇದೇ ವೇಳೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.