ಅಭಿವೃದ್ದಿಗೆ ಅನುದಾನ ತರಲಾಗದ ಶಾಸಕರ ವಿರುದ್ಧ ಆಕ್ರೋಶ..!!
* ಚಿಕ್ಕಮಗಳೂರು ಶಾಸಕರ ವಿರುದ್ಧ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ವಾಗ್ದಾಳಿ
* ಯಾರದ್ದೋ ದುಡ್ಡಲ್ಲಿ ಎಲ್ಲಮನ ಜಾತ್ರೆ ಮಾಡಬೇಡಿ, ಬದಲಾಯಿಸದೇ ಮಂಜೂರಾದ ಕಾಮಗಾರಿಗಳನ್ನೇ ಕೈಗೊಳ್ಳಿ – ಸಂತೋಷ್ ಕೋಟ್ಯಾನ್
NAMMUR EXPRESS NEWS
ಚಿಕ್ಕಮಗಳೂರು: ಕ್ಷೇತ್ರಕ್ಕೆ ಹೊಸ ಅನುದಾನ ತಂದು ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿ ನಡೆಸಲು ಸಾಧ್ಯವಿಲ್ಲದೇ ಕ್ಷೇತ್ರದ ಶಾಸಕರು ಈ ಹಿಂದೆ ಮಂಜೂರಾಗಿದ್ದ 17 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಕ್ಷೇತ್ರಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಗಾಳಿಕೆರೆಯ ಭೀಮಗಾಧ ತೀರ್ಥ ಸೌಂದರ್ಯೀಕರಣ,ಕವಿಕಲ್ ಗಂಡಿಯಲ್ಲಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಚಿಕ್ಕಮಗಳೂರಿನ ಗೃಹಮಂಡಳಿ ಬಡಾವಣೆ ಸಮೀಪದ ಹುಣಸೇಹಳ್ಳಿ ಕೆರೆಯ ಪಕ್ಕದ ಈಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಒಟ್ಟು 17 ವಿವಿಧ ಅಭಿವೃದ್ಧಿ ಕಾಮಗಾರಿಗೆ ಈ ಹಿಂದೆ ನಮ್ಮ ಶಾಸಕರು ಹಾಗೂ ಸಚಿವರಾಗಿದ್ದ ಡಾ.ಸಿ.ಟಿ ರವಿಯವರ ಶ್ರಮದಿಂದ ಸರ್ಕಾರ ಅನುದಾನವನ್ನು ಮಂಜೂರು ಮಾಡಿತ್ತು.
ದತ್ತಾತ್ರೇಯ ಪೀಠ ಮತ್ತು ಪಕ್ಕದಲ್ಲಿರುವ ಗಾಳಿಕೆರೆ ಭೀಮ ಗಾಧ ತೀರ್ಥ ದಿನೇ ದಿನೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ಸಿ.ಟಿ ರವಿಯವರು ಸುಮಾರು 3 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿ 2 ಕೋಟಿ ರೂ. ವೆಚ್ಚದಲ್ಲಿ ವೀಕ್ಷಣಾ ಗೋಪುರ,ತಡೆಗೋಡೆ,ಕಲ್ಲಿನ ಬೆಂಚು ಮತ್ತು ಪಾಂಡವರ ವನವಾಸ ನೆನಪಿಸುವ ಶಿಲ್ಪಗಳ ನಿರ್ಮಾಣ ಹಾಗೂ ಸಂಪರ್ಕ ಕಲ್ಪಿಸಲು ರಸ್ತೆಯ ನಿರ್ಮಾಣವನ್ನು ಒಂದು ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಮಂಜೂರು ಮಾಡಲಾಗಿತ್ತು ಆದರೆ ಈ ಕಾಮಗಾರಿಗಳನ್ನು ಬದಲಾಯಿಸಲು ಶಾಸಕ ಎಚ್.ಡಿ ತಮ್ಮಯ್ಯ ಅವರು ಈ ತಿಂಗಳ 12 ರಂದು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಕಾಮಗಾರಿಯನ್ನು ಬದಲಾವಣೆ ಮಾಡುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸದಾಗಿ ಅನುದಾನ ತಂದ ಕ್ಷೇತ್ರದಲ್ಲಿ ಕೆಲಸ ಮಾಡಿ ಯೋಗ್ಯತೆ ಹಾಗೂ ದಕ್ಷತೆಯನ್ನು ಪ್ರದರ್ಶಿಸಿ ಅದನ್ನು ಬಿಟ್ಟು ಯಾರೋ ತಂದಿದ್ದ ಅನುದಾನದ ಕಾಮಗಾರಿಗಳನ್ನು ಬದಲಾವಣೆ ಮಾಡಿ ಶಾಸಕ ಬದುಕಿದ್ದಾನೆ ಎಂದು ತೋರಿಸುವ ಮತ್ತು ಯಾರದ್ದೋ ದುಡ್ಡಲ್ಲಿ ಎಲ್ಲಮನ ಜಾತ್ರೆ ಮಾಡಲು ಪ್ರಯತ್ನಿಸದೇ ಈ ಹಿಂದೆ ಮಂಜೂರಾಗಿದ್ದ ಕಾಮಗಾರಿಗಳನ್ನೇ ಕೈಗೊಳ್ಳಿ ಎಂದು ಒತ್ತಾಯಿಸಿದರು.