ಮಕ್ಕಳ ಕನಸಾಗೇ ಉಳಿದ ಸೈಕಲ್ ಸೌಲಭ್ಯ – ವಿದ್ಯಾರ್ಥಿನಿಯರ ಪಟ್ಟಿ ಸಿದ್ಧಗೊಂಡರು ಕೇಳೋರಿಲ್ಲ.!!
* ಕನಸಾಗೇ ಉಳಿಯಲಿದ್ಯಾ ಮಕ್ಕಳು ಸೈಕಲ್ ಏರಿ ಶಾಲೆಗೆ ಹೋಗುವ ಕನಸು!
* ಸೈಕಲ್ ಇಲ್ಲದೇ ದೂರದ ಶಾಲೆಗೆ ಸರಿಯಾದ ಸಮಯಕ್ಕೆ ಮಕ್ಕಳು ತಲುಪಲಾಗುತ್ತಿಲ್ಲ ಪೋಷಕರ ಅಳಲು
NAMMUR EXPRESS NEWS
ಚಿಕ್ಕಮಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮೂಲೆ ಗುಂಪಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಸೈಕಲ್ ಏರಿ ಶಾಲೆಗೆ ಹೋಗುವ ಮಕ್ಕಳ ಕನಸು ಕನಸಾಗಿಯೇ ಉಳಿಯಲಿದೆಯಾ ಎಂಬ ಆತಂಕ ಮನೆಮಾಡಿದೆ.
ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು, ಹಾಜರಾತಿ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಬಿಸಿಯೂಟದ ಜತೆ ಉಚಿತವಾಗಿ ಸೈಕಲ್ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಕಾಲಕ್ರಮೇಣ ಈ ಸೈಕಲ್ ಯೋಜನೆಯನ್ನು 8ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿತ್ತು. ಇದರಿಂದ ಶಾಲಾ ಹಾಜರಾತಿ ಜತೆಗೆ ಪ್ರವೇಶಾತಿಯ ಸಂಖ್ಯೆಯೂ ಹೆಚ್ಚಾಯಿತು. ಶಾಲೆ ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೈಕಲ್ ವಿತರಿಸಲಾಗುತ್ತಿತ್ತು. ಈಗ ಎಲ್ಲವೂ ಮೆಲುಕಷ್ಟೇ.
ಈ ವರ್ಷ ಜಿಲ್ಲೆಯ ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ಸೈಕಲ್ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಪಟ್ಟಿ ಕೊಡಿ ಎಂದು ಈವರೆಗೂ ಕೇಳಿಲ್ಲ. ಪ್ರತಿ ವರ್ಷ ಪಟ್ಟಿ ಸಿದ್ದಪಡಿಸುವ ಕೆಲಸ ಮಾತ್ರ ಮುಂದುವರಿದಿದೆ.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಉಚಿತ ಸೈಕಲ್ ವಿತರಣೆ ಯೋಜನೆ ಜಾರಿಗೆ ಬಂದಿದ್ದು, ಆರಂಭದಲ್ಲಿ ಯಾವುದೇ ಅಡೆತಡೆ ಇಲ್ಲದೆ ಈ ಯೋಜನೆ ಸಾಗಿತ್ತು. ಆದರೆ 2013 ರಿಂದ ಸೈಕಲ್ ವಿತರಣೆಗೆ ವಿಘ್ನಗಳು ಆರಂಭವಾದವು.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ವಿತರಣೆಯ ಟೆಂಡರ್ನ್ನು ರಾಜ್ಯ ಸರ್ಕಾರವು ಖಾಸಗಿ ಕಂಪನಿಯೊಂದಕ್ಕೆ ವರ್ಷಗಳ ಹಿಂದೆ ನೀಡಿತ್ತು. ಎರಡು ವರ್ಷ ವಿತರಣೆ ಸರಿಯಾಗಿಯೇ ನಡೆಯಿತು. ಕ್ರಮೇಣವಾಗಿ ಸೈಕಲ್ ಗುಣಮಟ್ಟ ಕಳೆದುಕೊಳ್ಳಲಾರಂಭಿಸಿದವು.
ಇದನ್ನರಿತ ಪೋಷಕರು ಗುಣಮಟ್ಟದ ಸೈಕಲ್ ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು. ಆಗ ಸರ್ಕಾರ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಅದೇಶ ಮಾಡಿತ್ತು. ಅಲ್ಲಿಂದ ಸೈಕಲ್ ವಿತರಣೆ ಮಕ್ಕಳಿಗೆ ಕನಸಾಗಿಯೇ ಉಳಿದಿದೆ.
ಈ ಹಿಂದೆ ಸರ್ಕಾರವು 8 ನೇ ತರಗತಿಯ ಮಕ್ಕಳಿಗೆ ನೀಡುತ್ತಿದ್ದ ಉಚಿತ ಸೈಕಲ್ ಬಡ ಹಾಗೂ ಮಧ್ಯಮವರ್ಗದ ಕುಟುಂಬಗಳಿಗೆ ವರದಾನವಾಗಿತ್ತು.ಗ್ರಾಮೀಣ ಪ್ರದೇಶದಿಂದ ಮಕ್ಕಳು ಸರಿಯಾದ ಸಮಯಕ್ಕೆ ಸರಿಯಾಗಿ ಸೈಕಲ್ ಮೂಲಕ ಶಾಲೆಗೆ ಹೋಗಿ ಬರುತ್ತಿದ್ದರು.ಈಗ ಸೈಕಲ್ ವಿತರಣೆ ನಿಲ್ಲಿಸಿರುವುದರಿಂದ ಜೊತೆಗೆ ಗ್ರಾಮೀಣ ಭಾಗಗಳಿಗೆ ಸಂಪರ್ಕಿಲು ಇದ್ದ ಬಸ್ಗಳನ್ನು ಸಹ ನಿಲ್ಲಿಸಲಾಗಿದ್ದು ಇದರಿಂದ ಮಕ್ಕಳನ್ನು ದೂರದ ಶಾಲೆಗಳಿಗೆ ಕಳಿಸುವುದು ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.