ಉದ್ಯಮಿ, ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ ಪ್ರಶಸ್ತಿ
– ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ ರಾಜ್ಯ ಪ್ರಶಸ್ತಿ
– ಸಮಾಜ ಸೇವೆ, ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ಸಾಧನೆಗೆ ಸಂದ ಫಲ
NAMMUR EXPRESS NEWS
ದಾವಣಗೆರೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘ (ನೋಂ) ಕೊಡ ಮಾಡುವ “ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ’ ರಾಜ್ಯ ಪ್ರಶಸ್ತಿಗೆ ಖ್ಯಾತ ಉದ್ಯಮಿ, ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಶೋಷಿತ ಸಮುದಾಯಗಳ ಕಣ್ಮಣಿ,ಡಿ.ದೇವರಾಜ ಅರಸು ಅವರ ಜಯಂತ್ಯೋತ್ಸವದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಡುಪಿ ಜಿಲ್ಲೆ ಬೈಂದೂರು ಮೂಲದ ಉದ್ಯಮಿ, ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾವಿರಾರು ಜನರಿಗೆ ಸಹಾಯ ಮಾಡಿ, ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ “ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ” ರಾಜ್ಯ ಪ್ರಶಸ್ತಿಯನ್ನು ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿವಗಂಗೆಯ ಶ್ರೀ ಮಹಾಲಕ್ಷ್ಮಿ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ ಜ್ಞಾನಾನಂದಪುರಿ ಶ್ರೀಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್, ಕರ್ನಾಟಕ ಸರಕಾರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಿ.ಕೀರ್ತಿ ಗಣೇಶ್, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್, ಉಪಾಧ್ಯಕ್ಷ ಆಂಜನೇಯಲು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆರ್.ಕೆ. ದಿವ್ಯಾ, ದೇವಾಡಿಗ ಸಮಾಜದ ಮುಖಂಡರಾದ ಹೋಟೆಲ್ ಉದ್ಯಮಿ ಹಾಗೂ ಸಮಾಜ ಸೇವಕ ಚಂದ್ರ ದೇವಾಡಿಗ, ಎನ್.ರಮೇಶ್ ದೇವಾಡಿಗ ವಂತ್ಸೆ, ಬಿಲ್ಲವ ಸಮಾಜದ ಮುಖಂಡರಾದ ಬಿ. ನವೀನ ಚಂದ್ರ ಪೂಜಾರಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮುಂತಾದ ಗಣ್ಯರ ಸಮ್ಮುಖದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಸಾಧಕರನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.