ಮ್ಯಾಮ್ಕೋಸ್ ಚುನಾವಣೆ ನೆಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ
– ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಅಧಿಕೃತ ಹೇಳಿಕೆ ಕೊಡಿ : ರಮೇಶ ಹೆಗ್ಡೆ
– ಕೇಂದ್ರ ಸರ್ಕಾರ ಅಡಿಕೆ ಮಂಡಳಿ ರಚನೆಗೆ ನಿರಾಸಕ್ತಿ
NAMMUR EXPRESS NEWS
ಶಿವಮೊಗ್ಗ : ಬಿಜೆಪಿಯವರಿಗೆ ಚುನಾವಣೆ ಎದುರಾದಾಗ ಮಾತ್ರ ಅಡಿಕೆ ಬೆಳೆಗಾರರ ಹಿತ ನೆನಪಾಗುತ್ತದೆ, ಆಗ ಅಡಿಕೆ ಬೆಳಗಾರರ ಸಮಾವೇಶ ನಡೆಸುತ್ತಾರೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಎ ರಮೇಶ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ. ‘ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಾಗರದಲ್ಲಿ ಜ. 18ರಂದು ಅಲ್ಲಿನ ಅಡಿಕೆ ಬೆಳೆಗಾರರ ಹೆಸರಿನಲ್ಲಿ ಬಿಜೆಪಿಯವರು ನಡೆಸುತ್ತಿರುವ ಸಮಾವೇಶದ ಕುರಿತು ಈ ರೀತಿ ಮಾತನಾಡಿದರು.
ಅಡಿಕೆಗೆ ರೋಗ ಮತ್ತು ಕೊಳೆ ಬಂದು ಅಪಾರ ಹಾನಿಯಾಗಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಇಂದಿನವರೆಗೂ ಕೇಂದ್ರ ಸರ್ಕಾರದಿಂದ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಅಡಿಕೆ ಕಳ್ಳ ಸಾಗಾಣಿಕೆ ತಪ್ಪಿಸಲಿಲ್ಲ. ಯಾವತ್ತೂ ರೈತ ಪರ ನಿಲ್ಲಲಿಲ್ಲ. ಆದರೆ ಅವರ ಹೆಸರಿನಲ್ಲಿ ರಾಜಕೀಯವನ್ನು ಮಾತ್ರ ಮಾಡತ್ತಿದ್ದಾರೆ ಎಂದು ಹೇಳಿದರು. ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಜ. 18ರಂದು ಸಾಗರದಲ್ಲಿ ಅತಿಥಿಯಾಗಿ ಆಗಮಿಸುವ ಕೇಂದ್ರ ಕೃಷಿ ಸಚಿವ ಚೌಹಾಣ್ ಘೋಷಣೆ ಮಾಡಬೇಕು. ಕ್ಯಾನ್ಸರ್ ಕಾರಕ ಅಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಅಫಿಡೆವಿಟ್ ಹಾಕಬೇಕು. ಅಡಿಕೆ ಮೌಲ್ಯಯುತ ಬೆಳೆ ಎಂದು ಘೋಷಿಸಿ ಅದಕ್ಕೆ ತಕ್ಕದಾದ ದರ ಘೋಷಣೆ ಮಾಡಬೇಕು. ಬೆಂಗಳೂರಿನ ಎಂ ಎಸ್ ರಾಮಯ್ಯ ಆರೋಗ್ಯ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಅದರ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕ್ಯಾಂಪ್ಕೊ, ಮ್ಯಾಮೋಸ್ ಸಹಿತ ಅಡಿಕೆ ಬೆಳಗಾರರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಅಡಿಕೆ ಬೆಳೆಗಾರರ ಹಿತವನ್ನು ಯಾವತ್ತೂ ಕಾಪಾಡಲಿಲ್ಲ. ಕೇಂದ್ರ ಸಚಿವರೇ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಈ ಹಿಂದೆ ಲೋಕಸಭೆಯಲ್ಲಿ ಘೋಷಣೆ ಮಾಡಿದ್ದರು. ಆದರೆ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಬರ್ಮಾ ದೇಶದಿಂದ ಅಡಿಕೆ ಕಳ್ಳಸಾಗಾಣೆಯಾಗುತ್ತಿದ್ದು ಉತ್ತರ ಭಾರತಕ್ಕೆ ಅದು ಬರುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿಲ್ಲ. 2022 ರಲ್ಲಿ ಐಜ್ವಾಲ್ ಹೈಕೋರ್ಟ್ ಪೀಠ ಅಡಿಕೆ ಕಳ್ಳ ಸಾಗಣೆ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಆದರೆ ಅದರ ವರದಿ ಏನಾಯಿತು, ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇವತ್ತಿನವರೆಗೂ ವರದಿ ಪ್ರಕಟವಾಗಿಲ್ಲ ಎಂದು ಹೇಳಿದರು.