ಶೃಂಗೇರಿ ಶಾರದಾ ಶರನ್ನವರಾತ್ರಿಗೆ ಸಿಂಗಾರ!
* ಶ್ರೀಮಠದ ಆವರಣ,ರಾಜಗೋಪುರ,ರಥ ಬೀದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ
* ಕಳೆಗಟ್ಟಿದ ಶೃಂಗೇರಿ ಮದುವಣಗಿತ್ತಿಯಂತೆ ಸಿಂಗಾರ
* ದೇಶವಿದೇಶಗಳಿಂದ ಸಾವಿರಾರು ಪ್ರವಾಸಿಗರ ಆಗಮನ
ವಿಶೇಷ ವರದಿ: ಸಚಿನ್ ಶೃಂಗೇರಿ
NAMMUR EXPRESS NEWS
ಶೃಂಗೇರಿ: ಅಕ್ಟೋಬರ್ 3 ರಿಂದ ಶ್ರೀಶಾರದಾ ಪೀಠ ಶೃಂಗೇರಿಯಲ್ಲಿ ಪ್ರಾರಂಭಗೊಳ್ಳರಿರುವ ಜಗತ್ಪ್ರಸಿದ್ಧ ಶಾರದಾ ಶರನ್ನವರಾತ್ರಿ ಉತ್ಸವಕ್ಕೆ ಶೃಂಗೇರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.
ಶ್ರೀಮಠದ ಆವರಣ,ದೇವಾಲಯ,ರಾಜಗೋಪುರ,ಹರಿಹರ ಬೀದಿ,ರಥ ಬೀದಿ(ಭಾರತೀ ಬೀದಿ) ಉದ್ದಕ್ಕೂ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಅದ್ದೂರಿ ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ.
ಒಂಭತ್ತು ದಿನಗಳು ವಿವಿಧ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶಾರದೆಗೆ ನಿತ್ಯವೂ ಬೀದಿ ಉತ್ಸವ ನಡೆಯಲಿದೆ. ಬೀದಿ ಉತ್ಸವದಲ್ಲಿ ಪ್ರತಿ ದಿನ ತಾಲೂಕಿನ ಒಂದೊಂದು ಪಂಚಾಯ್ತಿಯಿಂದ ಭಜನೆ,ನೃತ್ಯ,ಸ್ಥಬ್ಧಚಿತ್ರಗಳ ಮೂಲಕ ವಿಜೃಂಭಣೆ ಉತ್ಸವದ ಜವಾಬ್ದಾರಿ ನೀಡಲಾಗಿದೆ.
ಆಯುಧ ಪೂಜೆ,ವಿಜಯದಶಮಿ,ಚಂಡಿಯಾಗ ಅದ್ದೂರಿಯಾಗಿ ನೆರವೇರಲಿದ್ದು 13ನೇ ತಾರೀಖಿನಂದು ವಿಜೃಂಭಣೆಯ ಶಾರದಾ ರಥೋತ್ಸವ ನಡೆಯಲಿದ್ದು ಇದರಲ್ಲಿ ಶ್ರಿಜಗದ್ಗುರುಗಳು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ವಿಶೇಷ ಕಾರ್ಯಕ್ರಮಗಳಿಗೆ ಶೃಂಗೇರಿ ವಿಶೇಷವಾಗಿ ಅಲಂಕೃತಗೊಂಡಿದೆ.
ಈ ಅದ್ದೂರಿ ಶೃಂಗೇರಿ ಶಾರದಾ ಶರನ್ನವರಾತ್ರಿಗೆ ಶೃಂಗೇರಿ ಶಾರದಾ ಪೀಠದಿಂದ ಸರ್ವರಿಗೂ ಆದರದ ಸ್ವಾಗತ ಕೋರಿ ಆಮಂತ್ರಿಸಲಾಗಿದೆ.
ದೇಶ ವಿದೇಶದಿಂದ ಭಕ್ತರ ಆಗಮನ
ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದಿಂದ ಸಾವಿರಾರು ಭಕ್ತರು ಪ್ರತಿ ದಿನ ನವ ರಾತ್ರಿಗೆ ಭಾಗವಹಿಸಲಿದ್ದಾರೆ. ಶೃಂಗೇರಿ ಜನ ಕೂಡ ಅತಿಥಿಗಳನ್ನು ಸಂಭ್ರಮದಿಂದ ಸ್ವಾಗತಿಸಲಿದ್ದಾರೆ.